ಪಡಿತರ ಅಕ್ಕಿ ವಶ; ನಾಲ್ವರ ವಿರುದ್ಧ ಕೇಸು

| Published : Apr 20 2025, 01:58 AM IST

ಸಾರಾಂಶ

ಅಕ್ರಮವಾಗಿ ಸಂಗ್ರಹಿಸಿದ್ದ 17,190 ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿರುವ ಆಹಾರ ಇಲಾಖೆ ಅಧಿಕಾರಿಗಳು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಅಕ್ರಮವಾಗಿ ಸಂಗ್ರಹಿಸಿದ್ದ 17,190 ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿರುವ ಆಹಾರ ಇಲಾಖೆ ಅಧಿಕಾರಿಗಳು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಗರದ ವಿಜಯಪುರ ರಸ್ತೆಯ ಪಕ್ಕದಲ್ಲಿರುವ ಹಾಜಿಲಾಲ್‌ ಪೈಲ್ವಾನ್ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ 336 ಚೀಲಗಳಲ್ಲಿ ಅಕ್ಕಿ ಸಂಗ್ರಹಿಸಿ, ಮಹಾರಾಷ್ಟ್ರಕ್ಕೆ ಸಾಗಿಸಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಪ್ರತಿ ಕೆಜಿಗೆ ₹36ರಂತೆ ₹5,94,774 ಮೌಲ್ಯದ ಅಕ್ಕಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕರಾದ ಪೈಗಂಬರ್ ಅಬ್ಬುಸಾಬ ಮಾಹಾಲಿಂಗಪೂರ, ದಾದಾಫಿರ್ ಸರ್ಪರಾಜ ಗಲಗಲಿ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಾಜಿಲಾಲ್‌, ಹಾಜಿ ಅನ್ವರ್‌, ಫೈಲ್ವಾನ, ಮುಸ್ತಾಕ್‌ ಬಬಲು ಉರ್ಫ ಬಬ್ಬು ರೂಟ್, ರಿಜ್ವಾನ್ ಹಾಜಿಲಾಲ ಪೈಲವಾನ, ಬಬಲು ಉರ್ಫ ಬಬ್ಬು ರೂಟ್ ಎಂಬುವವರ ಹೆಸರು ಹೇಳಿದ್ದು, ಇವರ ವಿರುದ್ಧ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಳಿ ವೇಳೆ ಆಹಾರ ನಿರೀಕ್ಷಕ ಆನಂದ ರೇವು ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ಕಾರಾಜಣಗಿ, ಹೆಚ್ಚುವರಿ ಗ್ರಾಮ ಆಡಳಿತಾಧಿಕಾರಿ ಸಾಜೀದ್‌ ಜಲಾಲುದ್ದಿನ್ ಹದಲಿ, ಶಹರ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ, ಬಿ.ಎಂ. ಕುಂಬಾರ, ಸಿಬ್ಬಂದಿ ಎಸ್.ಟಿ. ಪಾಟೀಲ, ಎಸ್.ವೈ. ಆಸಂಗಿ, ಎಸ್.ಎಚ್. ಕೋಟಿ, ಎಸ್.ಎಂ. ನಾಯಕ, ರಾಜು ಪೂಜಾರಿ ಇತರರು ಇದ್ದರು.

ಅಕ್ರಮ ಸಂಗ್ರಹ ಇದೇ ಮೊದಲಲ್ಲ:

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಮಾರಾಟ ಇದೇ ಮೊದಲಲ್ಲ. ಹಲವು ಬಾರಿ ಇದೇ ರೀತಿಯ ಪ್ರಕರಣಗಳು ನಡೆದಿದ್ದು. ಅನೇಕ ಬಾರಿ ಪ್ರಕರಣಗಳು ದಾಖಲಾದರೂ ಅಕ್ರಮ ಸಂಗ್ರಹ ಮತ್ತು ಮಾರಾಟ ನಿಲ್ಲಿಸಲು ಸಾಧ್ಯವಾಗಿಲ್ಲ. ಸುತ್ತಲಿನ ಗ್ರಾಮಗಳು ಹಾಗೂ ನಗರಪ್ರದೇಶದಲ್ಲಿ ಸಂತೆಯ ದಿನ ಪಡಿತರ ಅಕ್ಕಿ ಸಂಗ್ರಹಿಸಲಾಗುತ್ತದೆ. ಪಡಿತರ ಫಲಾನುಭವಿಗಳು ತಮಗೆ ಬಳಸಲು ಸಾಕಾವಷ್ಟು ಅಕ್ಕಿಯನ್ನು ಸಂಗ್ರಹಿಸಿಕೊಂಡು ಮಿಕ್ಕಿದ ಅಕ್ಕಿಯನ್ನು ಕೆಜಿಗೆ ₹20ಕ್ಕೆ ಮಾರಾಟ ಮಾಡುತ್ತಾರೆ.

ಈ ರೀತಿ ಅಕ್ಕಿ ಸಂಗ್ರಹಿಸಲು ಹಲವು ತಂಡಗಳಿವೆ, ಮಾರಾಟ ತಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಫಲಾನುಭವಿಗಳೇ ಹೆಚ್ಚಿನ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದು, ಸಂಗ್ರಹಿಸುವರಿಗೆ ಅನುಕೂಲವಾಗಿದೆ. ಗ್ರಾಪಂ ಅಧಿಕಾರಿಗಳು ಪಡಿತರ ಅಕ್ಕಿ ಮಾರಾಟ ತಡೆಯುವಲ್ಲಿ ವಿಫಲರಾಗಿದ್ದಾರೆ. ಗಂಭೀರ ಸ್ವರೂಪದ ಪ್ರಕರಣ ದಾಖಲಾಗದ ಕಾರಣ ಪುನ ದಂಧೆಕೋರರು ಮತ್ತೆ ಇದೇ ದಂದೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಸರ್ಕಾರವೇ ಕೊಂಡುಕೊಳ್ಳಲಿ:

ಹೆಚ್ಚಿನ ಅಕ್ಕಿಯನ್ನು ಸರ್ಕಾರವೇ ಖರೀದಿಸಬೇಕು ಎಂಬುದು ಪರಿಣಿತರ ವಾದ. ವ್ಯಕ್ತಯೊಬ್ಬನಿಗೆ ತಲಾ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಅಂದರೆ ನಾಲ್ಕು ಸದಸ್ಯರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 40 ಕೆಜಿ ಅಕ್ಕಿ ಸಿಗುತ್ತದೆ. ಕುಟುಂಬಕ್ಕೆ ಬಹಳ ಎಂದರೆ 10-15 ಕೆಜಿಯಷ್ಟು ಮಾತ್ರ ಅಕ್ಕಿ ಬಳಸುತ್ತಾರೆ. ಉಳಿದ ಅಕ್ಕಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಹೆಚ್ಚಿನ ಅಕ್ಕಿಯನ್ನು ಸರ್ಕಾರವೇ ಖರೀದಿಸಿದರೆ ಅನುಕೂಲ ಎಂಬದು ಸಾರ್ವಜನಿಕರ ಅಭಿಪ್ರಾಯ.