ಅನ್ನ-ಸುವಿಧಾ ಯೋಜನೆ: ವೃದ್ಧರ ಮನೆ ಬಾಗಿಲಿಗೇ ರೇಷನ್‌

| Published : Feb 17 2024, 01:15 AM IST / Updated: Feb 17 2024, 01:29 PM IST

Siddaramaiah

ಸಾರಾಂಶ

ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಾಧ್ಯವಾಗದ 80 ವರ್ಷ ದಾಟಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ‘ಅನ್ನ-ಸುವಿಧಾ’ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬೆಂಗಳೂರು: ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಾಧ್ಯವಾಗದ 80 ವರ್ಷ ದಾಟಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಆಹಾರ ಧಾನ್ಯ ತಲುಪಿಸುವ ‘ಅನ್ನ-ಸುವಿಧಾ’ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ 80 ವರ್ಷ ಮೇಲ್ಪಟ್ಟ ವೃದ್ಧ, ವೃದ್ಧೆ ಪಾಲಿನ ಆಹಾರ ಪದಾರ್ಥಗಳನ್ನು ಆಯಾ ತಿಂಗಳು ಹೋಮ್ ಡೆಲಿವೆರಿ ಆಪ್ ಮೂಲಕ ತಲುಪಿಸಲಾಗುವುದು. 

ಯೋಜನೆಯಿಂದ ರಾಜ್ಯದ ಅಂದಾಜು 80 ಸಾವಿರ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸಾಮಾಜಿಕ ಭದ್ರತೆಯ ಕಳಕಳಿ ಇಟ್ಟುಕೊಂಡು ಇದನ್ನು ಜಾರಿಗೆ ತರಲಾಗುತ್ತಿದೆ.

‘ಹಸಿವು ಮುಕ್ತ ಕರ್ನಾಟಕ’ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ‘ಅನ್ನಭಾಗ್ಯ’ಯೋಜನೆ ಜಾರಿಗೆ ತರಲಾಗಿತ್ತು. 

ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ ಬಿಪಿಎಲ್, ಅಂತ್ಯೋದಯ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯನ್ನು ಜು.10 ರಿಂದ ಜಾರಿಗೆ ತರಲಾಯತು.

ಪ್ರತಿ ತಿಂಗಳು ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರು. ನಂತೆ 5 ಕೆಜಿ ಅಕ್ಕಿಗೆ 170 ರು. ನಗದು ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ.

ಅದೇ ರೀತಿ, ಅಂತ್ಯೋದಯ ಕಾರ್ಡ್‌ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರು.ನಂತೆ ಐದು ಸದಸ್ಯರಿದ್ದರೆ 510 ರು., ಆರು ಸದಸ್ಯರಿದ್ದರೆ 850 ರು.ಹಣ ಹಾಕಲಾಗುತ್ತಿದೆ. 

2024ರ ಜನವರಿ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರು.ಹಣವನ್ನು ಜಮೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ ನಲ್ಲಿ ತಿಳಿಸಿದರು.