ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ವೈಜ್ಞಾನಿಕ ಆಲೋಚನೆಗಳು, ವೈಚಾರಿಕ ಚಿಂತನೆಗಳನ್ನು ನಡೆಸಿ, ನಾವೆಲ್ಲರೂ ಒಂದೇ ಎಂಬ ಬಸವ ತತ್ವವನ್ನು ಪ್ರತಿಪಾದಿಸಿದರೆ ಮಾನವೀಯ ಧರ್ಮವನ್ನು ಪಾಲಿಸಿದಂತೆ ಎಂದು ಬೆಂಗಳೂರು ಕೇಂದ್ರ ವಲಯದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ವಿದ್ಯಾರ್ಥಿ ಕ್ಷೇಮಪಾಲನ ಘಟಕ, ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಗಳು ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡಮನುಷ್ಯರ, ನಾಯಕರ ವಿಗ್ರಹವನ್ನು ಪ್ರತಿಷ್ಠಾಪಿಸಿ, ವಿಗ್ರಹಕ್ಕೆ ಗೌರವ ಸಲ್ಲಿಸಿ, ಉತ್ತಮರು ಸಾರಿದ ತತ್ವಾದರ್ಶಗಳಿಗೆ ವಿರುದ್ಧವಾಗಿ ಅವರ ಪುತ್ಥಳಿಯ ಮುಂದೆಯೇ ಅನ್ಯಾಯಗಳನ್ನು, ಕಪಟ ವಂಚನೆಯನ್ನು ಮಾಡುತ್ತಿದ್ದೇವೆ. ಆಧ್ಯಾತ್ಮಿಕತೆಯನ್ನು ಬಿತ್ತಿದ, ಸರ್ವಧರ್ಮ ಸಮನ್ವಯದ ತತ್ತ್ವ ಸಾರಿದ ಕುವೆಂಪು ಅವರ ಆದರ್ಶಗಳನ್ನು ಪಾಲಿಸಿದರೆ ಧರ್ಮಗಳಲ್ಲಿರುವ ಪೂರ್ವಾಗ್ರಹವನ್ನು ತೊಲಗಿಸಬಹುದು ಎಂದರು.ಭವ್ಯ ಭಾರತವನ್ನು ಕಟ್ಟಲು ಹೆಣ್ಣುಮಕ್ಕಳಿಂದ ಸಾಧ್ಯ. ಮನೆಯ ನಿರ್ವಹಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ತಾಯಿ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸುವಳು. ವಿವೇಕವನ್ನು ಬೋಧಿಸಲು ಅಂತರ್ಜಾಲದಿಂದ ಸಾಧ್ಯವಿಲ್ಲ. ಅಂತರ್ಜಾಲ ಮಾಹಿತಿಯನ್ನು ನೀಡಬಹುದಷ್ಟೇ. ಯಂತ್ರಗಳ ಸೌಲಭ್ಯಗಳನ್ನು ಉಪಯೋಗಿಸುವುದರಿಂದ ಯಾರೂ ಆಧುನಿಕರಾಗುವುದಿಲ್ಲ. ವೈಚಾರಿಕತೆಯ ಮನೋಭಾವದಿಂದಷ್ಟೇ ಆಧುನಿಕತೆಯನ್ನು ಸ್ವಾಗತಿಸಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಚಿಂತನಾಶೀಲರಾಗಬೇಕು. ಎಲ್ಲ ಧರ್ಮಗಳಲ್ಲಿರುವ ತತ್ವಗಳು ಒಂದೇ ಎಂಬುದನ್ನು ಅರಿಯಬೇಕು. ವಿವೇಕಾನಂದರ ಆದರ್ಶ ಬದುಕನ್ನು ಅನುಸರಿಸಬೇಕು. ಗುಂಪುಗಾರಿಕೆ, ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆಯನ್ನು ವಿರೋಧಿಸುವ ವ್ಯಕ್ತಿತ್ವ ನಿರ್ಮಾಣವಾಗಬೇಕು. ಪಾಪಿಗಳ ಉದ್ಧಾರಕ್ಕೂದಾರಿಯಿದೆ ಎಂದು ತೋರಿದ ವಿವೇಕಾನಂದರ ಬದುಕು ಎಲ್ಲರಿಗೂ ಮಾದರಿ ಎಂದರುಜಾತಿ, ಧರ್ಮ, ಗಡಿಗಳ ಪರಿಧಿಯನ್ನು ದಾಟಿ ಮಾನವೀಯತೆಯ ಕಲ್ಪನೆಯನ್ನು ಎದೆಯಲ್ಲಿ ಬಿತ್ತಿಕೊಂಡಾಗ ವಿಶ್ವಮಾನವರಾಗಬಹುದು ಎಂದು ಕುವೆಂಪು ತಮ್ಮ ಸಾಹಿತ್ಯದಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ಸಮಾಜವನ್ನುಒಗ್ಗೂಡಿಸುವುದಕ್ಕಾಗಿ ಶ್ರಮಿಸಬೇಕು. ಸಮಾಜದಲ್ಲಿ ಸಮಾನತೆ ನೆಲೆಸಲು ದುಡಿಯಬೇಕು. ನಮ್ಮನ್ನು ವಿಂಗಡಿಸುವ ನಕಾರಾತ್ಮಕ ಶಕ್ತಿಗಳನ್ನು ಅಡಗಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನಾಗರೀಕ ಸೇವಾ ಪರೀಕ್ಷೇಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಪ್ರಾಸ್ತಾವಿಕ ನುಡಿಗಳನ್ನಾಡಿ, ಸುಪ್ತ ಚೈತನ್ಯವನ್ನು ಹೊರತರುವ ಕಾರ್ಯ ಶಿಕ್ಷಕರದ್ದಾಗಬೇಕು. ವಿದ್ಯಾವಂತರೆಲ್ಲರೂ ನಾಗರಿಕರಾಗುವುದಿಲ್ಲ. ಪದವಿಗಳು ವ್ಯಕ್ತಿತ್ವವನ್ನುರೂಪಿಸುವುದಿಲ್ಲ. ಹೃದಯವಂತಿಕೆ ಶುಷ್ಕವಾಗಿದೆ. ಇಚ್ಛಾಶಕ್ತಿಯ ಕೊರತೆಯಿದ್ದಲ್ಲಿ ದೇಶ ನಿರ್ಮಾಣ ಸಾಧ್ಯವಿಲ್ಲ. ಇಚ್ಛಾಶಕ್ತಿಯನ್ನುರೂಪಿಸುವುದು ಶಿಕ್ಷಣದ ಭಾಗವಾಗಬೇಕು ಎಂದರು.ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬದಲಾಗುವ, ಸ್ವೀಕರಿಸುವ ಮನೋಭಾವ ಬೆಳೆಯಬೇಕು. ವ್ಯಕ್ತಿತ್ವ ನಿರ್ಮಾಣವಾದರೆ ಬದುಕಿನಲ್ಲಿ ಯಶಸ್ಸು ಎಂದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಬಸವರಾಜ ಜಿ., ಐ.ಕ್ಯೂ.ಎ.ಸಿ. ಮಂಡಳಿಯ ನಿರ್ದೇಶಕ ಪ್ರೊ.ರಮೇಶ್ ಬಿ., ಪಿ.ಎಂ.ಇ.ಬಿ. ಮಂಡಳಿಯ ನಿರ್ದೇಶಕ ಪ್ರೊ.ಬಿ.ಟಿ. ಸಂಪತ್ ಕುಮಾರ್, ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ. ಪರಶುರಾಮ ಕೆ.ಜಿ., ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು, ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.