ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೊಂಬರನಹಳ್ಳಿ ರತೀಶ್, ಉಪಾಧ್ಯಕ್ಷರಾಗಿ ಕೊಂಡಜ್ಜಿ ಪುಟ್ಟರಾಜು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.13 ನಿರ್ದೇಶಕ ಬಲ ಹೊಂದಿರುವ ಕೊಂಡಜ್ಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ದೊಂಬರನಹಳ್ಳಿ ರತೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೊಂಡಜ್ಜಿ ಪುಟ್ಟರಾಜು ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಸಂಘಗಳ ಉಪ ನಿಬಂಧಕರಾದ ಟಿ.ಶ್ರೀನಿವಾಸಪ್ಪ ಈರ್ವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ನೂತನ ಅಧ್ಯಕ್ಷ ದೊಂಬರನಹಳ್ಳಿ ರತೀಶ್ ಮಾತನಾಡಿ, ಸೊಸೈಟಿಯಲ್ಲಿ ಒಟ್ಟು 1434 ಸದಸ್ಯರಿದ್ದಾರೆ. 42 ಲಕ್ಷ ರುಪಾಯಿಗಳ ಷೇರು ಮೊತ್ತ ಹೊಂದಿದ್ದು, ಎಸ್.ಬಿ ಠೇವಣಿ 7.44 ಲಕ್ಷ ರುಪಾಯಿಗಳಿದೆ. ಒಟ್ಟಾರೆ ಸಂಘವು 1.24 ಲಕ್ಷ ರು.ಪಾಯಿಗಳ ಲಾಭದಲ್ಲಿರುವುದು ಸಂತಸ ತಂದಿದೆ ಎಂದರು.ನೂತನ ಉಪಾಧ್ಯಕ್ಷ ಕೊಂಡಜ್ಜಿ ಪುಟ್ಟರಾಜು ಮಾತನಾಡಿ, ಸೊಸೈಟಿಯಲ್ಲಿ ಈಗಾಗಲೇ 3.44 ಕೋಟಿ ರುಪಾಯಿಗಳ ಕೆಸಿಸಿ ಸಾಲವನ್ನು ನೀಡಲಾಗಿದೆ. ಸಂಘದಲ್ಲಿ ಇದುವರೆವಿಗೂ ಕೆಸಿಸಿ ಸಾಲ ಪಡೆಯದ ಸದಸ್ಯರಿಗೂ ಸಾಲ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದರು.ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರಾದ ಕೊಂಡಜ್ಜಿ ವಿಶ್ವನಾಥ್, ಕೆ.ಜೆ.ಲೋಕೇಶ್, ಮಮತ, ಡಿ.ಎಸ್.ಸುದರ್ಶನ್, ಬಿ.ಸಿ.ಚೇತನ, ಹಾಲೇಗೌಡ, ಸಿ.ಟಿ.ತಿಮ್ಮಪ್ಪ, ಕಂಚಿಗನಾಯಕ ಹಾಗು ಸ್ಥಳೀಯ ಮುಖಂಡರುಗಳಾದ ಎಚ್.ಎಸ್.ಪ್ರಸಾದ್, ಡಿ.ಎನ್.ನರಸಿಂಹಮೂರ್ತಿ, ಮುನಿಯಪ್ಪ, ಜಿತೇಂದ್ರ, ಜಗದೀಶ್, ಎಚ್.ಎಂ.ಸಿದ್ದಲಿಂಗಯ್ಯ, ಸಿದ್ದಪ್ಪಾಜಿ, ಡಿ.ಆರ್.ರಮೇಶ್, ಪ್ರಸನ್ನ ಕುಮಾರ್, ಎ.ಎಂ.ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಎಸ್.ಕುಮಾರ್ ಅಭಿನಂದಿಸಿದರು.