ಸಾರಾಂಶ
ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ
ಪ್ರಸ್ತುತ ರಾಜ್ಯದಲ್ಲಿ ಬರಗಾಲ ಇದ್ದು ಕಾರಣ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಬರಗಾಲವನ್ನು ಎದುರಿಸಲು ತಾಲೂಕು ಆಡಳಿತ ಸರ್ವ ಸನ್ನದ್ಧರಾಗುವಂತೆ ತಾಪಂ ಆಡಳಿತಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎ. ವಸಂತಕುಮಾರ ಹೇಳಿದರು.ಪಟ್ಟಣದ ತಾಪಂ ಸಭಾ ಭವನದಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕು. ತಾಲೂಕಿನಲ್ಲಿ ಡೆಂಘಿ, ಮಲೇರಿಯಾದಂತ ರೋಗಗಳು ಹೆಚ್ಚು ಕಂಡು ಬರುತ್ತಿದ್ದು, ಆರೋಗ್ಯ ಇಲಾಖೆ ಸಾರ್ವಜನಿಕರ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ತಾಲೂಕಿನ ೬೩ ಹಳ್ಳಿಗಳಲ್ಲಿ ಕಡೂರ, ಎಂ.ಎಂ. ಎತ್ತಿನಹಳ್ಳಿ, ಕಿರಗೇರಿ, ಜೋಕನಾಳ, ಪುರದಕೇರಿ, ಮೇದೂರ ಗ್ರಾಮಗಳಲ್ಲಿ ಜೆ.ಜೆ.ಎಂ ಅಡಿಯಲ್ಲಿ ಮನೆ ಮನೆಗೆ ಜೀವ ಜಲದ ಕಾಮಗಾರಿ ಸ್ಥಗಿತವಾಗಿದ್ದು ಸ್ಥಳೀಯರ ಸಹಕಾರದೊಂದಿಗೆ ಮನವೊಲಿಸಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.ಕೃಷಿ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ಸರ್ಕಾರದ ಸೌಲಭ್ಯಗಳು ಮತ್ತು ಬೆಳೆ ಪರಿಹಾರ ಪಡೆದುಕೊಳ್ಳಲು ಪ್ರತಿಯೊಬ್ಬ ರೈತರು ಎಫ್.ಐ.ಡಿ ಮಾಡಿಸಿಕೊಳ್ಳುವುದು ಕಡ್ಡಾಯ. ಕಾರಣ ರೈತರು ತಮ್ಮ ಉತಾರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ಐಡಿ ಹೊಂದಿದ ರೈತರಿಗೂ ಬಾಕಿ ಇರುವ ಸರ್ವೇ ನಂಬರ್‌ಗಳನ್ನು ಸೇರಿಸಿಕೋಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ರೈತರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ಆದೇಶಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಟಿ.ಆರ್. ಮಲ್ಲಾಡದ, ತಾಪಂ ಲೆಕ್ಕಾಧಿಕಾರಿ ಎಫ್.ಎನ್. ಮಕಾನದಾರ, ತಾಲೂಕು ಯೋಜನಾಧಿಕಾರಿ ದಿನೇಶ, ಸಹಾಯಕ ನಿರ್ದೇಶಕ ದೇವರಾಜ ಸಣ್ಣಕಾರಗಿ, ರಾಜೀವ್ ಮರಿಗೌಡ್ರ, ಎಂ.ವಿ. ಮಂಜುನಾಥ, ಶ್ರೀನಿವಾಸ, ಮಂಜುನಾಥ, ದೇವರಾಜ ಸಣ್ಣಕಾರಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.