ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವರಕವಿ ಸರ್ವಜ್ಞರ ಅದ್ಧೂರಿ ವೇದಿಕೆ ಸಜ್ಜುಗೊಂಡಿದೆ.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿತಾಲೂಕಿನ ಹಳ್ಳೂರ ಗ್ರಾಮದಲ್ಲಿ ಜ. 31ರಂದು ರಟ್ಟೀಹಳ್ಳಿ ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಗ್ರಾಮ ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಮದುವಣಗಿತ್ತಿಯಂತೆ ಶೃಂಗಾರ ಗೊಂಡಿದೆ.

ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವರಕವಿ ಸರ್ವಜ್ಞರ ಅದ್ಧೂರಿ ವೇದಿಕೆ ಸಜ್ಜುಗೊಂಡಿದೆ. ಸಾಹಿತ್ಯ ಜಾತ್ರೆಯಲ್ಲಿ ವಿವಿಧ ಸಾಹಿತಿಗಳು, ಕಲಾವಿದರು, ಜನಪ್ರತಿನಿಧಿಗಳು, ಬರಹಗಾರರು, ಮಹಿಳೆಯರು ಕನ್ನಡ ಪರ ಮನಸ್ಸುಗಳ ಪಾಲ್ಗೊಂಡು ಸಮ್ಮೇಳನ ಐತಿಹಾಸಿಕವಾಗಿಸಲು ಉತ್ಸುಕರಾಗಿದ್ದಾರೆ.ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಚಿತ್ರಕಲಾ ಶಿಕ್ಷಕ ಬಸವರಾಜ ಗುಡಿಹಿಂದ್ಲರ್ ರಚಿಸಿದ್ದಾರೆ.ಶನಿವಾರ ಬೆಳಗ್ಗೆ 7.30ಕ್ಕೆ ಹಳ್ಳೂರ ಗ್ರಾಮದ ಧರ್ಮದರ್ಶಿ ಬಿ.ಎಂ. ಮೆಣಸಿನಕಾಯಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ತಾಲೂಕು ದಂಡಾಧಿಕಾರಿ ಶ್ವೇತಾ ಅಮರಾವತಿ ನಾಡ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಗಾ.ಪಂ. ಅಧ್ಯಕ್ಷೆ ಲತಾ ಮಂಜುನಾಥ ಹರಿಜನ ಹಾಗೂ ಸರ್ವ ಸದಸ್ಯರು ಉದ್ಘಾಟಿಸುವರು. ಬೆಳಗ್ಗೆ 10.30ಕ್ಕೆ ಶಾಸಕ ಯು.ಬಿ. ಬಣಕಾರ ಸಮ್ಮೇಳನ ಉದ್ಘಾಟಿಸುವರು. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಕಸಾಪ ತಾಲೂಕಾಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ಅಧ್ಯಕ್ಷತೆ ವಹಿಸುವರು. ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಜಯಪ್ಪ ಹೊನ್ನಾಳ್ಳಿ (ಜಯಕವಿ), ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮಾಜಿ ಮುಖ್ಯ ಸಚೇತಕ ಡಿ.ಎಂ. ಸಾಲಿ ಕೃತಿಗಳ ಲೋಕಾರ್ಪಣೆಗೊಳಿಸುವರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸುವರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ ಪುಸ್ತಕ ಮಳಿಗೆ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಆರೋಗ್ಯ ತಪಾಸಣೆ ಶಿಬಿರ, ಹಳ್ಳೂರ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಮಂಜುನಾಥ ಹರಿಜನ ಚಿತ್ರಕಲಾ ಪ್ರದರ್ಶನ ಮಳಿಗೆ ಉದ್ಘಾಟಿಸುವರು. ಮೈಸೂರಿನ ಸಾಹಿತಿ, ವಿಶ್ರಾಂತ ಐಐಎಸ್ ಅಧಿಕಾರಿ ಡಾ. ಟಿ.ಸಿ. ಪೂರ್ಣಿಮಾ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯವ್ಯಕ್ತಿಗಳು ರಾಜಕೀಯ ಮುಖಂಡರು, ಸಾಹಿತಿಗಳು ಹಾಗೂ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರುವುದು.ಬಹಿರಂಗ ಅಧಿವೇಶನ ಹಾಗೂ ಸಮಾರೋಪ: ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ತಿಪ್ಪಾಯಿಕೊಪ್ಪ ಮಠದ ಪೀಠಾಧಿಪತಿ ಮಹಾಂತ ದೇವರು ಹಾಗೂ ಹೊರಗಿ ಮಠದ ಪೀಠಾಧಿಪತಿ ಶಿವಯೋಗಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾರ್ಯಕ್ರಮದ ಉದ್ಘಾಟನೆ ಮತ್ತು ದ್ವಿತೀಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಹಳ್ಳೂರ ಗ್ರಾಮದ ಧರ್ಮದರ್ಶಿ ಬಿ.ಎಂ. ಮೆಣಸಿನಕಾಯಿ ಅಧ್ಯಕ್ಷತೆ ವಹಿಸುವರು. ಡಾ. ಎಸ್.ಪಿ. ಗೌಡರ ಸಮಾರೋಪ ಭಾಷಣ ಮಾಡುವರು. ರಟ್ಟಿಹಳ್ಳಿ ತಾಲೂಕು ತೃತೀಯ ಸಾಹಿತ್ಯ ಸಮ್ಮೇಳನಕ್ಕೆ ಹಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದು, ಅವಳಿ ತಾಲೂಕಿನ ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾಹಿತ್ಯ ಪರಿಷತ್ ಆಜೀವ ಸದಸ್ಯರು, ಕನ್ನಡಪರ ಸಂಘಟನೆಗಳು, ರಾಜಕೀಯ ಗಣ್ಯರು ಸೇರಿದಂತೆ ಎಲ್ಲ ಕನ್ನಡ ಮನಸ್ಸುಗಳು ಸೇರಿ ತೃತೀಯ ಸಾಹಿತ್ಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸೋಣ ರಟ್ಟಿಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ ಹೇಳಿದರು.