ದಿನದಿಂದ ದಿನಕ್ಕೆ ಬೆಳ್ಳಿ ಬಂಗಾರದ ಬೆಲೆ ಗಗನಕ್ಕೇರುತ್ತಿರುವ ಈ ವೇಳೆಯಲ್ಲಿ ಸಾಮೂಹಿಕ ವಿವಾಹ ನಡೆಸುವ ಗ್ರಾಮೀಣರೆ ಶುದ್ಧ ದಾನದ ಕೆಲಸ ಮಾದರಿಯಾಗಿದೆ
ಕಾರಟಗಿ: ದೇವಸ್ಥಾನ, ಮಠ ಮತ್ತು ಮಂದಿರಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಒಂದು ಜನಕಲ್ಯಾಣ ಕೆಲಸ. ಇಂತಹ ಸಾಮೂಹಿಕ ವಿವಾಹಗಳು ನಮ್ಮ ಭಾಗದಲ್ಲಿ ಭಾವೈಕ್ಯತೆ, ಸ್ವಾಸ್ಥ ಪರಿಸರ ಹೆಚ್ಚಿಸುತ್ತಿದ್ದು, ಬಡವರ ಪಾಲಿಗೆ ಸಾಮೂಹಿಕ ಅಕ್ಷತೆ ಅಕ್ಷಯವಾಗುತ್ತದೆ ಎಂದು ಹೆಬ್ಬಾಳ ಬೃಹನ್ಮಠದ ಡಾ. ನಾಗಭೂಷಣ ಶಿವಾಚಾರ್ಯರು ಹೇಳಿದರು.
ಇಲ್ಲಿಗೆ ಸಮೀಪದ ಮರ್ಲಾನಹಳ್ಳಿಯಲ್ಲಿ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್‌ನಿಂದ ನಡೆದ ೩೯ನೇ ವರ್ಷದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಮಾತನಾಡಿದರು.ನವ ವಧುವರರಿಗೆ ಶುಭ ಹಾರೈಸಿ ಆಶೀರ್ವಚನ ನೀಡಿದ ಶ್ರೀಗಳು, ದಿನದಿಂದ ದಿನಕ್ಕೆ ಬೆಳ್ಳಿ ಬಂಗಾರದ ಬೆಲೆ ಗಗನಕ್ಕೇರುತ್ತಿರುವ ಈ ವೇಳೆಯಲ್ಲಿ ಸಾಮೂಹಿಕ ವಿವಾಹ ನಡೆಸುವ ಗ್ರಾಮೀಣರೆ ಶುದ್ಧ ದಾನದ ಕೆಲಸ ಮಾದರಿಯಾಗಿದೆ. ಈ ಸಾಮೂಹಿಕ ವಿವಾಹ ನವದಂಪತಿಗಳಲ್ಲಿ ಹೊಸ ಸಂಸ್ಕಾರ ಮೂಡಿಸುತ್ತವೆ. ಶ್ರೀಮಂತರಿಗೆ ಮಕ್ಕಳ ಮದುವೆ ಮಾಡುವುದು ಕಷ್ಟವಲ್ಲ. ಆದರೆ, ಬಡವರು ಮಕ್ಕಳ ಮದುವೆಗೆ ಸಾಲ ಮಾಡಿ ಅದನ್ನು ತೀರಿಸಲು ಜೀವನ ಪರ್ಯಂತ ದುಡಿಯಬೇಕಾಗುತ್ತದೆ. ದುಂದು ವೆಚ್ಚದ ಮದುವೆ ಮಾಡಿ ಆರ್ಥಿಕವಾಗಿ ಅತಂತ್ರರಾಗಿ ಸಾಮಾಜಿಕವಾಗಿ ನರಳುವುದಕ್ಕಿಂತ ಸರಳ ಮದುವೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಮದುವೆ ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತದೆ.ನೂತನ ವಧುವರರಿಗೆ ದಾಂಪತ್ಯ ಜೀವನ ಹೂವಿನ ಹಾಸಿಗೆಯಲ್ಲ. ಕಷ್ಟ ಕಾರ್ಪಣ್ಯ ಎದುರಾಗುತ್ತವೆ. ಆದರೆ ಮದುವೆಯಾಗುವುದು ಮುಖ್ಯವಲ್ಲ. ಎಲ್ಲವನ್ನು ಸಹಿಸಿಕೊಂಡು ಎಲ್ಲರೊಂದಿಗೆ ಹೊಂದಿಕೊಂಡು ಜೀವಿಸುವುದೇ ಮುಖ್ಯ. ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಸಾಮೂಹಿಕ ಮದುವೆಗಳು ವರದಾನವಾಗಿವೆ. ಹಾಗೆಯೆ ಸಮಾಜದಲ್ಲಿ ಸಾಮರಸ್ಯ ಮೂಡಲು ಕೂಡ ಸಾಧ್ಯವಾಗುತ್ತದೆ. ಮತ್ತು ಸಾಮೂಹಿಕ ಮದುವೆಗಳು ಬಡವರ ಕಷ್ಟ ದೂರ ಮಾಡುತ್ತವೆ ಎಂದರು.ಶರಣಯ್ಯಸ್ವಾಮಿ ಬೇವಿನಾಳ ಆಶೀರ್ವಚನ ನೀಡಿ, ಮೌಢ್ಯಗಳಿಗೆ ಕಟ್ಟು ಬೀಳದೆ ಆದರ್ಶ ಜೀವನ ನಡೆಸಬೇಕು. ಸಾಮೂಹಿಕ ಮದುವೆ ಕಾರ್ಯಕ್ರಮ ಎಂದು ಭಾವಿಸುವುದು ತಪ್ಪು. ದೇವಸ್ಥಾನ, ಹರಗುರು ಚರಮೂರ್ತಿಗಳ ಆಶೀರ್ವಾದದೊಂದಿಗೆ ಸಾಮೂಹಿಕ ವಿವಾಹ ಬಂಧನಕ್ಕೊಳಗಾಗುವ ಭಾಗ್ಯ.ಜೀವನದ ಸಾರ್ಥಕತೆಯ ಕ್ಷಣವಾಗಿದೆ. ಗ್ರಾಮದ ಶ್ರೀನಿವಾಸ ಸೇವಾ ಟ್ರಸ್ಟ್ ಪ್ರತಿವರ್ಷ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮದೊಂದಿಗೆ ಸಾಮೂಹಿಕ ಮದುವೆಯಂತಹ ಕಲ್ಯಾಣ ಕಾರ್ಯ ನಡೆಸುತ್ತ ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ದೇವಸ್ಥಾನ ಸಮಿತಿಯ ಟ್ರಸ್ಟಿ ಉದ್ಯಮಿ ಎಂ.ನರಸಿಂಹ್‌ರಾವ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶ್ರೀನಿವಾಸ ದೇವಸ್ಥಾನದಲ್ಲಿ ಶ್ರೀನಿವಾಸ ಸೇವಾ ಟ್ರಸ್ಟ್‌ನಿಂದ ಸರ್ವರ ಸಹಕಾರ ದೊಂದಿಗೆ ಸಾಮೂಹಿಕ ಮದುವೆ ನಡೆಸುತ್ತಾ ಬಂದಿದ್ದೇವೆ. ಮದುವೆ ಕಾರ್ಯ ಹಲವರ ಆಶೀರ್ವಚನವು ನವಜೋಡಿಗಳಿಗೆ ಪವಿತ್ರ ಸಂಸ್ಕಾರ ಮತ್ತು ಆದರ್ಶ ಜೀವನದ ದಾರಿ ದೀಪವಾಗಿದೆ ಎಂದರು.ಒಟ್ಟು ೨೨ಜೋಡಿ ನವವಧುವರರು ಶ್ರೀಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀನಿವಾಸ ಕಲ್ಯಾಣೋತ್ಸವ ನಿಮಿತ್ತ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಶ್ರೀನಿವಾಸ ದೇವಸ್ಥಾನದ ವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಮಹಿಳೆಯರಿಂದ ಕುಂಭೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್‌ನ ಎಂ.ನರಸಿಂಹ್‌ರಾವ್, ಎಂ. ಸುಬ್ಬಾರಾವ್ ದಂಪತಿ ಸೇರಿದಂತೆ ಗ್ರಾಮದ ಮುಖಂಡರು, ಸಂಘಟನೆಗಳ ಪ್ರಮುಖರು ಗ್ರಾಮಸ್ಥರು ಸುತ್ತಲಿನ ವಿವಿಧ ಗ್ರಾಮಗಳ ಸದ್ಭಕ್ತರು ಇದ್ದರು.