ಸಾರಾಂಶ
ಮುತ್ತತ್ತಿ ಕಾವೇರಿ ನದಿ ಅಂಚಿನಲ್ಲಿ ಹಾಗೂ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸಿ ಮತ್ತು ಡಿಜಿಟಲ್ ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಕಳ್ಳ ಬೇಟೆಯಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಇವರ ಆಡಳಿತದ ಅವಧಿಯಲ್ಲಿ ವನ್ಯಜೀವಿ ವಲಯದಲ್ಲಿ 30ಕ್ಕೂ ಹೆಚ್ಚು ಕಳ್ಳಬೇಟೆ ಪ್ರಕರಣಗಳು ದಾಖಲಾಗಿವೆ.
ಕನ್ನಡಪ್ರಭ ವಾರ್ತೆ ಹಲಗೂರು
ಐದು ವರ್ಷಗಳ ಸೇವಾ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಭೇದಿಸುವ ಜೊತೆಗೆ ಕಡತ ವಿಲೇವಾರಿ ಮಾಡಿ ದಕ್ಷತೆಯಿಂದ ಆರ್ ಎಫ್ ಒ ರವಿಬುರ್ಜಿ ಕೆಲಸ ನಿರ್ವಹಿಸಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದರು.ಸಮೀಪದ ಭೀಮೇಶ್ವರಿ ಕಾವೇರಿ ಪ್ರಕೃತಿ ಶಿಬಿರದ ಸಭಾಂಗಣದಲ್ಲಿ ವರ್ಗಾವಣೆಗೊಂಡ ವಲಯ ಅರಣ್ಯಾಧಿಕಾರಿ ರವಿ ಬುರ್ಜಿ ಅವರಿಗೆ ಮಂಗಳವಾರ ರಾತ್ರಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮಾನವ ಮತ್ತು ವನ್ಯಜೀವಿ ಸಂಘರ್ಷ ತಪ್ಪಿಸಲು ಕಾವೇರಿ ವನ್ಯಜೀವಿ ವಲಯದ ಸುತ್ತಲೂ 5 ಕಿಮೀ, ರೈಲ್ವೆ ಕಂಬಿ ಮತ್ತು 26 ಕಿಮೀ ಸೋಲಾರ್ ಬೇಲಿ ನಿರ್ಮಿಸಲು ನಿರಂತರವಾಗಿ ಶ್ರಮಿಸಿ ಈ ಭಾಗದ ಜನಮಾನಸದಲ್ಲಿ ಹಸಿರಾಗಿ ಉಳಿಯಲಿದ್ದಾರೆ ಎಂದರು.ಅಭಿನಂದನೆ ಸ್ವೀಕರಿಸಿದ ವಲಯ ಅರಣ್ಯಾಧಿಕಾರಿ ರವಿ ಬುರ್ಜಿ ಮಾತನಾಡಿ, ಹಿರಿಯ ಅಧಿಕಾರಿಗಳು ಮತ್ರು ಸಿಬ್ಬಂದಿಯ ಸಲಹೆ ಮತ್ತು ಸಾರ್ವಜನಿಕರ ಸಹಕಾರದಿಂದ ಹಲವು ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಉತ್ತಮ ಕೆಲಸ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ಮುಂದೆ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿಗೂ ತಮ್ಮ ಸಹಕಾರ ಹೀಗೆ ಇರಲಿ ಎಂದು ಮನವಿ ಮಾಡಿದರು.
ಅರಣಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ, ಹಲಗೂರು ವನ್ಯಜೀವಿ ವಲಯದಲ್ಲಿ ವನ್ಯ ಜೀವಿಗಳ ಉಪಟಳ ಹೆಚ್ಚಿತ್ತು. ಸಾರ್ವಜನಿಕರಿಂದ ಹೆಚ್ಚು ದೂರು ಬಂದ ಹಿನ್ನೆಲೆಯ ಮೇರೆಗೆ ಆನೆ ಕಾರಿಡಾರ್ ಯೋಜನೆಯಲ್ಲಿ ಹಲಗೂರು ವನ್ಯ ಜೀವಿಯ ವಲಯದಲ್ಲಿ ಬಹುತೇಕ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ಟೆಂಟಕಲ್ಸ್ ಸಂಪೂರ್ಣವಾಗಿ ಅಳವಡಿಕೆ ಮಾಡಿದ್ದರಿಂದ ರೈತರಿಗೆ ಅನುಕೂಲವಾಗಿದೆ ಎಂದರು.ಮುತ್ತತ್ತಿ ಕಾವೇರಿ ನದಿ ಅಂಚಿನಲ್ಲಿ ಹಾಗೂ ಅರಣ್ಯ ವಲಯದಲ್ಲಿ ಪ್ಲಾಸ್ಟಿಕ್ ಮುಕ್ತವಾಗಿಸಿ ಮತ್ತು ಡಿಜಿಟಲ್ ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ಕಳ್ಳ ಬೇಟೆಯಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಇವರ ಆಡಳಿತದ ಅವಧಿಯಲ್ಲಿ ವನ್ಯಜೀವಿ ವಲಯದಲ್ಲಿ 30ಕ್ಕೂ ಹೆಚ್ಚು ಕಳ್ಳಬೇಟೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ವಲಯ ಅರಣ್ಯಾಧಿಕಾರಿಗಳಾದ ದೇವರಾಜು, ಸಂಪತ್ ಪಟೇಲ್, ನೂತನ ವಲಯ ಅರಣ್ಯ ಅಧಿಕಾರಿ ಅನಿಲ್ ಕುಮಾರ್, ಪಿಎಸ್ಐ ಬಿ.ಮಹೇಂದ್ರ, ಪ್ರವೀಣ್ ಕುಮಾರ್, ಸಿದ್ದರಾಮ ಪೂಜಾರಿ ಜಂಗಲ್ ಲಾಡ್ಜ್ ರೆಸಾರ್ಟ್ ವ್ಯವಸ್ಥಾಪಕ ಲೋಕೇಶ್, ವನೋದಯ ಸಂಸ್ಥೆ ಮಹೇಶ್, ಗ್ರಾಪಂ ಸದಸ್ಯ ಪ್ರದೀಪ್, ಸ್ಥಳೀಯ ಮುಖಂಡರಾದ ಎಸ್.ಇ.ಪುಟ್ಟಸ್ವಾಮಿ, ನರೀಪುರ ರಾಜು, ಆನಂದ್ ಸೇರಿ ಹಲವರು ಭಾಗವಹಿಸಿದ್ದರು.