ರಘುಚಂದನ್ ಜತೆ ನಡೆಸಿದ ಸಂಧಾನ ವಿಫಲ

| Published : Apr 01 2024, 12:52 AM IST

ಸಾರಾಂಶ

ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಎದ್ದಿರುವ ಅಸಮಾಧಾನ ಶಮನಗೊಳಿಸಲು ತಡರಾತ್ರಿವರೆಗೂ ವಿ.ಪ. ಸದಸ್ಯ ರವಿಕುಮಾರ್ ನಡೆಸಿದ ಮಾತುಕತೆ ವಿಫಲವಾಗಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಉಂಟಾಗಿರುವ ಅಸಮಧಾನ ನಿವಾರಣೆಗೆ ಮೊದಲ ಹಂತದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ನಡೆಸಿದ ಸಂಧಾನ ವಿಫಲವಾಗಿದೆ. ಶನಿವಾರ ತಡರಾತ್ರಿ ಶಾಸಕ ಎಂ.ಚಂದ್ರಪ್ಪ ಅವರ ನಿವಾಸಕ್ಕೆ ಆಗಮಿಸಿದ ರವಿಕುಮಾರ್ , ರಘು ಚಂದನ್ ಹಾಗೂ ಅವರ ತಾಯಿ ಚಂದ್ರಕಲಾ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಚಂದ್ರಪ್ಪ ಮನೆಯಲ್ಲಿರಲಿಲ್ಲ. ವೈಮನಸ್ಸು ತೊರೆದು ಪಕ್ಷದ ನಿಲುವುಗಳ ಸ್ವಾಗತಿಸುವಂತೆ ರವಿಕುಮಾರ್ ಪರಿಪರಿಯಾಗಿ ಮನವಿ ಮಾಡಿದರೂ ರಘುಚಂದನ್ ನಿರಾಕರಿಸಿದರು ಎನ್ನಲಾಗಿದೆ. ಏಪ್ರಿಲ್ 3 ರಂದು ತಾವು ನಾಮಪತ್ರ ಸಲ್ಲಿಸುವ ತಮ್ಮ ಈ ಮೊದಲಿನ ಮಾತನ್ನು ಪುನರುಚ್ಚರಿಸಿದ್ದಾರೆ. ಹಾಗಾಗಿ ರವಿ ಕುಮಾರ್ ಬಂದ ದಾರಿಗೆ ಸುಂಕವಿಲ್ಲದೇ ವಾಪಾಸ್ಸಾಗಿದ್ದಾರೆ. ಸಂಧಾನ ಸಭೆ ವಿಫಲವಾದ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ರಘು ಚಂದನ್, ಎಪ್ರಿಲ್ 3ಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ರವಿಕುಮಾರ್ ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅಪ್ಪ ಅವರು ನಾಮಪತ್ರ ಸಲ್ಲಿಕೆಗೆ ಜನ ಸೇರಿಸುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ, ರವಿಕುಮಾರ್ ಭೇಟಿ ವೇಳೆ ಮನೆಯಲ್ಲಿರಲಿಲ್ಲ. ದೂರದೂರಿಂದ ಕಾರಜೋಳ ಕರೆತಂದ ಬಗ್ಗೆ ಪ್ರಶ್ನಿಸಿದೆವು. ರವಿಕುಮಾರ್ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಲಿಲ್ಲವೆಂದರು.

ಮಾಜಿ ಸಿಎಂ ಬಿಎಸ್ ವೈ ನಮಗೆಲ್ಲ ತಂದೆ ಸಮಾನರು. ಅವರು ಕಾಲಲ್ಲಿ ತೋರಿಸಿದ್ದು ನಾವು ಕೈಯಲ್ಲಿ ಮಾಡಿದ್ದೇವೆ ಯಡಿಯೂರಪ್ಪ ಬಗ್ಗೆ ನಮಗಿರುವ ಗೌರವ ಅಚಲ. ಬಿಎಸ್ ವೈ ನಮ್ಮ‌ ಮನೆಗೆ ಬಂದರೆ ಸ್ವಾಗತಿಸುತ್ತೇವೆ. ನಮ್ಮ ತಂದೆಯಿಂದಲೇ ಅನ್ಯಾಯ ಆಗಿದೆ ಎಂದು ಹೇಳಿದ್ದೇವೆ. ತಂದೆಯಾಗಿ ಯಡಿಯೂರಪ್ಪ ನಮ್ಮ ಕಷ್ಟ ಕೇಳಿದರೆ ಅವರ ಬಳಿ ನೋವುಗಳ ನಿವೇದಿಸಿಕೊಳ್ಳುತ್ತೇವೆ. ಅವರು ಮಕ್ಕಳಿಗೆ ನ್ಯಾಯಕೊಡಿಸುವ ಭರವಸೆ ಇದೆ ಎಂದು ರಘು ಚಂದನ್ ಹೇಳಿದರು.