ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ತುಂಗಭದ್ರಾ ಜಲಾಶಯದ ನೀರಿನಲ್ಲಿ ವಿಜಯನಗರ ಅರಸರ ಕಾಲದ ಕಾಲುವೆಗಳಿಗೆ ಮದ್ರಾಸ್ ಪ್ರಾಂತ್ಯ ಹಾಗೂ ಹೈದರಾಬಾದ್‌ನ ನಿಜಾಮರ ಕಾಲದಲ್ಲಿ ನಡೆದ ಒಪ್ಪಂದದ ಅನ್ವಯ ಪ್ರತಿವರ್ಷ 12 ಟಿಎಂಸಿ ನೀರು ಮೀಸಲಿಡಬೇಕೆಂಬ ಕೂಗು ಈಗ ಈ ಭಾಗದ ರೈತರ ವಲಯದಲ್ಲಿ ಒಡಮೂಡಿದೆ. ನೀರಿನ ಹಕ್ಕಿಗಾಗಿ ನಾಡದೊರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ರೈತರ ನಿಯೋಗ ಕೂಡ ತೆರಳಿದ್ದು, ಹಕ್ಕೊತ್ತಾಯ ಮಂಡನೆ ಮಾಡುತ್ತಿದೆ.ತುಂಗಭದ್ರಾ ಜಲಾಶಯವನ್ನು ಆಗಿನ ಮದರಾಸು ಪ್ರಾಂತ್ಯ ಹಾಗೂ ಹೈದರಾಬಾದ್‌ನ ನಿಜಾಮರು ನಿರ್ಮಾಣ ಮಾಡಿದ್ದು, ಆಗಲೇ ವಿಜಯನಗರ ಕಾಲದ ಅಣೆಕಟ್ಟುಗಳನ್ನು ಬಳಸಿ ನೀರಾವರಿ ಮಾಡುತ್ತಿದ್ದ ರೈತರಿಗೆ 12 ಟಿಎಂಸಿ ನೀರು ನೀಡಲು ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಅನ್ವಯ ನೀರನ್ನು ನೀಡಬೇಕೆಂಬ ಕೂಗು ಈಗ ರೈತರ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ವಿಜಯನಗರ ಕಾಲದ ಕಾಲುವೆಗಳು: ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮೊದಲೇ ವಿಜಯನಗರ ಆಳರಸರ ಕಾಲದಲ್ಲೇ ತುಂಗಭದ್ರಾ ನದಿ ನೀರನ್ನು ಬಳಸಿ ನೀರಾವರಿ ಮಾಡಲಾಗುತ್ತಿತ್ತು. ನದಿಗೆ ಬಂಡೆಗಲ್ಲಿನ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿ ಮಾಡಲಾಗುತ್ತಿತ್ತು. ರಾಯ, ಬಸವ, ಬೆಲ್ಲ, ತುರ್ತಾ ಮತ್ತು ಕಾಳಗಟ್ಟ ಸೇರಿದಂತೆ ಇತರೆ ಕಾಲುವೆಗಳ ಮೂಲಕ ರೈತರು ನೀರಾವರಿ ಮಾಡುತ್ತಿದ್ದರು.ಈಗ ಈ ಕಾಲುವೆಗಳನ್ನಾಧರಿಸಿ ಹೊಸಪೇಟೆ, ಕಮಲಾಪುರ ಭಾಗದಲ್ಲಿ 17 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಇನ್ನೂ ಕಂಪ್ಲಿ, ಗಂಗಾವತಿ, ಕೊಪ್ಪಳ ಭಾಗದಲ್ಲೂ ನೀರಾವರಿ ಇದೆ. ಒಟ್ಟು 50 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಈ ಕಾಲುವೆಗಳ ರೈತರ ಹಿತವನ್ನು ಕಾಪಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ರೈತರ ಆಕ್ಷೇಪ: ಜಲಾಶಯ ನಿರ್ಮಾಣಕ್ಕೂ ಮೊದಲೇ ಈ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿತ್ತು. ಹೀಗಿದ್ದರೂ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯಲ್ಲಿ ಮಂಡಿಸಿ ವಿಜಯನಗರ ಕಾಲದ ಕಾಲುವೆಗಳಿಗೆ ನೀರು ಹಂಚಿಕೆ ಮಾಡುತ್ತಿರುವುದು ಸರಿಯಲ್ಲ. 12 ಟಿಎಂಸಿ ನೀರನ್ನು ಮೊದಲೇ ತೆಗೆದಿರಿಸಿ ಆ ಬಳಿಕ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತಮ್ಮ ಪಾಲಿನ ನೀರು ಪಡೆಯಬೇಕು ಎಂಬುದು ವಿಜಯನಗರ ಕಾಲದ ಕಾಲುವೆಗಳನ್ನು ಅವಲಂಬಿಸಿರುವ ರೈತರ ಒತ್ತಾಯವಾಗಿದೆ.ವಿಜಯನಗರ ನೀರಾವರಿ ನಿಗಮದ ಬೇಡಿಕೆ: ತುಂಗಭದ್ರಾ ಜಲಾಶಯದಿಂದ ರಾಯ, ಬಸವ ಬೆಲ್ಲ ಸೇರಿದಂತೆ ವಿಜಯನಗರ ಕಾಲದ ಕಾಲುವೆಗಳಿಗೆ 12 ಟಿಎಂಸಿ ನೀರು ಹಂಚಿಕೆ ಮಾಡಬೇಕು. ಜತೆಗೆ 7 ಟಿಎಂಸಿ ನೀರು ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನತೆಗೆ ಕುಡಿಯುವ ನೀರಿಗೆ ನೀಡಬೇಕು. ಒಟ್ಟು 19 ಟಿಎಂಸಿ ನೀರನ್ನು ಮೀಸಲಿರಿಸಿ ವಿಜಯನಗರ ನೀರಾವರಿ ನಿಗಮ ಇಲ್ಲವೇ ಶ್ರೀಕೃಷ್ಣದೇವರಾಯ ನೀರಾವರಿ ನಿಗಮ ನಿರ್ಮಾಣ ಮಾಡಲಿ ಎಂಬುದು ಈ ಭಾಗದ ರೈತರ ಆಶಯವಾಗಿದೆ. ಈಗ ನೀರು ಹಂಚಿಕೆ ಮಾಡುವಾಗ ಐಸಿಸಿ ಸಭೆಯಲ್ಲಿಟ್ಟು ಡ್ಯಾಂ ನಿರ್ಮಾಣ ಕಾಲಕ್ಕೆ ಇದ್ದ ಒಪ್ಪಂದದ ಸೂತ್ರವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂಬುದು ರೈತರ ವಾದವಾಗಿದೆ.
ಸರ್ಕಾರ 19 ಟಿಎಂಸಿ ನೀರನ್ನು ಮೀಸಲಿರಿಸಿದ ಬಳಿಕ ಈ ನೀರನ್ನು ಹೇಗೆ ಹಂಚಿಕೆ ಮಾಡಬೇಕು ಎಂಬುದನ್ನು ತುಂಗಭದ್ರಾ ಮಂಡಳಿಗೆ ವಿಜಯನಗರ ನೀರಾವರಿ ನಿಗಮ ಇಲ್ಲವೇ ಶ್ರೀಕೃಷ್ಣದೇವರಾಯ ನಿಗಮ ತುಂಗಭದ್ರಾ ಮಂಡಳಿಗೆ ಕೋರಲಿದೆ ಎಂಬುದು ರೈತರ ವಾದವಾಗಿದೆ.ಕೃಷ್ಣಾ ಬಿ ಸ್ಕೀಂ ಪ್ರಕಾರವೂ 7 ಟಿಎಂಸಿ ನೀರು ರಾಯ, ಬಸವ ಬೆಲ್ಲ ಕಾಲುವೆಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಈಗ ಜೂನ್ ಒಂದರಿಂದ ಮೇ 31ರ ವರೆಗೆ( ಒಂದು ತಿಂಗಳು ಕಾಲುವೆಗಳ ನಿರ್ವಹಣೆ ಅವಧಿ ಹೊರತುಪಡಿಸಿ) ನೀರು ಬಿಡುತ್ತಿದ್ದರೂ ವರ್ಷಕ್ಕೆ ಸರಾಸರಿ 3 ಟಿಎಂಸಿಯಷ್ಟು ನೀರು ಕೂಡ ದೊರೆಯುತ್ತಿಲ್ಲ ಎಂಬುದು ರೈತರ ವಾದವಾಗಿದೆ. ಈ ಭಾಗದಲ್ಲಿ ಬಾಳೆ, ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.
ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ, ಬಲದಂಡೆ ಕಾಲುವೆ, ಪವರ್ ಕಾಲುವೆ ಮತ್ತು ರಾಯ, ಬಸವ ಕಾಲುವೆಗಳ ಮೂಲಕ ನೀರು ಪಡೆಯಲಾಗುತ್ತಿದೆ. ಈ ಪೈಕಿ ಉಳಿದ ಕಾಲುವೆಗಳು ನದಿಯಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮಾತ್ರ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ. ಆದರೆ, ರಾಯ, ಬಸವ ಕಾಲುವೆಗಳಿಗೆ ನದಿ ಮೂಲಕವೇ ನೇರ ನೀರು ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಡೆಡ್ ಸ್ಟೋರೇಜ್ ನೀರನ್ನು ಈ ಕಾಲುವೆಗೆ ಬಿಡಬಹುದು. ಆದರೂ ಇದನ್ನುಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿಲ್ಲ ಎಂಬುದು ಈ ಭಾಗದ ರೈತರ ಒತ್ತಾಯವಾಗಿದೆ.ಸಿಎಂ ಬಳಿ ನಿಯೋಗ: ತುಂಗಭದ್ರಾ ಜಲಾಶಯದ ನೀರನ್ನು ವಿಜಯನಗರ ಕಾಲದ ಕಾಲುವೆಗಳಿಗೆ ಸಮರ್ಪಕ ಹಂಚಿಕೆ ಮಾಡುವುದರ ಕುರಿತು ಶಾಸಕರಾದ ಎಚ್.ಆರ್. ಗವಿಯಪ್ಪ, ಜನಾರ್ದನ ರೆಡ್ಡಿ, ರಾಘವೇಂದ್ರ ಹಿಟ್ನಾಳ್ ಮತ್ತು ಜೆ.ಎನ್. ಗಣೇಶ್ ಅವರು ರೈತರ ನಿಯೋಗವು ಸಿಎಂ ಸಿದ್ದರಾಮಯ್ಯ ಜತೆ ಜ. 19ರಂದು ಬೆಂಗಳೂರಿನಲ್ಲಿ ಚರ್ಚಿಸಲಿದೆ. ಈ ವೇಳೆ ಸಚಿವರಾದ ಶಿವರಾಜ್ ತಂಗಡಗಿ ಮತ್ತು ಜಮೀರ್ ಅಹಮದ್ ಖಾನ್ ಅವರು ಇರುವ ಸಾಧ್ಯತೆ ಇದೆ.ಕಾಲುವೆಗೆ ನೀರು ಬಿಟ್ಟಿಲ್ಲ: ವಿಜಯನಗರ ಕಾಲದ ಕಾಲುವೆಗಳಿಗೆ ಜ. 15ರಿಂದ ಮೇ 31ರ ವರೆಗೆ ನಿತ್ಯ 220 ಕ್ಯುಸೆಕ್ ನೀರು ಹರಿಸಬೇಕಿತ್ತು. ಆದರೆ ಈ ಬಾರಿ ಬರದಿಂದಾಗಿ ನೀರಿನ ಸಮಸ್ಯೆಯಾಗಿದೆ. ಅಲ್ಲದೇ ಜ. 15ರಿಂದ ನೀರನ್ನು ಕಾಲುವೆಗಳಿಗೆ ಬಿಟ್ಟಿಲ್ಲ. ಹೀಗಾಗಿ ರೈತರಿಗೆ 12 ಟಿಎಂಸಿ ನೀರು ಒಪ್ಪಂದದಂತೆ ಮೀಸಲಿಡಬೇಕು ಎಂಬುದು ಅನ್ನದಾತರ ಆಗ್ರಹವಾಗಿದೆ.
ಶಾಸಕರ ಆಗ್ರಹ: ವಿಜಯನಗರ ಕಾಲದ ಕಾಲುವೆಗಳ ರೈತರ ಹಿತ ಕಾಪಾಡಲಾಗುವುದು. ಈ ಕಾಲುವೆಗಳನ್ನು ಅನುಸರಿಸಿ ನೀರಾವರಿ ಮಾಡುತ್ತಿದ್ದ ರೈತರಿಗೆ 12 ಟಿಎಂಸಿ ನೀರು ಒಪ್ಪಂದದಂತೆ ಮೀಸಲಿಡಬೇಕು. ಇದಕ್ಕಾಗಿ ವಿಜಯನಗರ ನೀರಾವರಿ ನಿಗಮ ಸ್ಥಾಪನೆ ಮಾಡಲಿ ಎಂದು ಶಾಸಕ ಎಚ್.ಆರ್. ಗವಿಯಪ್ಪ ಆಗ್ರಹಿಸಿದರು.ಸರ್ಕಾರ ಕ್ರಮ ವಹಿಸಲಿ: ವಿಜಯನಗರ ಕಾಲದ ರೈತರ ಬೆಳೆಗಳು ಒಣಗದಂತೆ ಸರ್ಕಾರ ಕ್ರಮವಹಿಸಬೇಕು. ತುಂಗಭದ್ರಾ ಜಲಾಶಯದ ನೀರಿನಲ್ಲಿ ನಮ್ಮ ಪಾಲಿನ ಕೋಟಾ ಸಮರ್ಪಕವಾಗಿ ಮೀಸಲಿರಿಸಬೇಕು. ರೈತರು ಬೆಳೆದಿರುವ ಬಾಳೆ, ಕಬ್ಬು ಒಣಗದಂತೆ ಕ್ರಮವಹಿಸಬೇಕು ಎಂದು ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಿಗಿ ಜಂಬಯ್ಯ ನಾಯಕ, ಅಧ್ಯಕ್ಷರು ಮನವಿ ಮಾಡಿದರು.