21ರಂದು ಪಂಬದರ ಸಮಾವೇಶ ಸಿರಿಮುಡಿ ಕಾರ್ಯಕ್ರಮ

| Published : Jan 19 2024, 01:50 AM IST

ಸಾರಾಂಶ

ಸಮುದಾಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಈ ಸಮಾವೇಶ ಅಂದು ಬೆಳಗ್ಗೆ 8 ಗಂಟೆಯಿಂದ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್‌ ವತಿಯಿಂದ ತುಳುವ ಬೊಳ್ಳಿ ಪ್ರತಿಷ್ಠಾನ ಮತ್ತು ಪಂಬದರ ಯಾನೇ ದೈವಾದಿಗರ ಸಮಾಜ ಸಂಘ ಸಹಕಾರದಲ್ಲಿ ಪಂಬದರ ಸಮಾವೇಶ ಸಿರಿಮುಡಿ ಕಾರ್ಯಕ್ರಮ ಜ.21ರಂದು ನಡೆಯಲಿದೆ. ಸಮುದಾಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಈ ಸಮಾವೇಶ ಅಂದು ಬೆಳಗ್ಗೆ 8 ಗಂಟೆಯಿಂದ ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದ.ಕ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಸುಮಾರು 2,000ಕ್ಕೂ ಅಧಿಕ ಮಂದಿ ಪಂಬದ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ಹಿರಿಯ ಸಾಧಕರನ್ನು, ಕಿರಿಯ, ಯುವ ಸಾಧಕರನ್ನು ಕ್ರೀಡಾ ಕ್ಷೇತ್ರದ ಸಾಧಕರನ್ನು ಶೈಕ್ಷಣಿಕ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ.

ಪಂಬದ ಸಮುದಾಯದ ಏಳಿಗೆಗಾಗಿ ಪ್ರೋತ್ಸಾಹ ನೀಡಿದ ದಾನಿಗಳಿಗೆ ಸಿರಿಮುಡಿ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಪಂಬದ ಸಮುದಾಯದ ಪ್ರಭಾಕರ ಸೂಟರ್‌ಪೇಟೆ ಅವರಿಗೆ ಪಂಬದ ಬಿರುದಿನೊಂದಿಗೆ ಗೌರವಿಸಲಾಗುವುದು. ಸುಮಾರು 1,500 ಮಂದಿ ಕಲಾವಿದರ ಕುಟುಂಬಕ್ಕೆ ಆಯಷ್ಮಾನ್‌ ಕಾರ್ಡ್‌, ಪಾನ್‌ಕಾರ್ಡ್‌, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ಆಧಾರ್‌ ಕಾರ್ಡ್‌ ಮೊದಲಾದ ಸರ್ಕಾರಿ ಸವಲತ್ತುಗಳನ್ನು ಒದಗಿಸುವುದು, ಉಚಿತವಾಗಿ ಅಪಘಾತ ವಿಮೆ ಮಾಡಲಾಗುವುದು ಎಂದರು.ಬೆಳಗ್ಗೆ 8 ಗಂಟೆಗೆ ತುಳುಮಾತೆಯ ತೇರಿನ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಮೇಯರ್‌ ಸುಧೀರ್‌ ಶೆಟ್ಟಿ ಅವರು ತುಳು ಧ್ವಜಾರೋಹಣ ಮಾಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ವೇದವ್ಯಾಸ ಕಾಮತ್‌ ಭಾಗವಹಿಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಆರ್‌ಎಸ್‌ಎಸ್‌ ಮುಖಂಡ ಡಾ. ಪ್ರಭಾಕರ ಭಟ್‌ ಕಲ್ಲಡ್ಕ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆ ಎಂದರು.ಸ್ವಾಗತ ಸಮಿತಿ ಅಧ್ಯಕ್ಷ ದುರ್ಗಾದಾಸ್‌ ಶೆಟ್ಟಿ, ಟ್ರಸ್ಟ್‌ ಕಾರ್ಯದರ್ಶಿ ಪುರುಷೋತ್ತಮ ಗೋಳಿಪಲ್ಕೆ, ಪ್ರಮುಖರಾದ ಸತೀಶ್‌ ಬಂಗೇರ, ನಾಗೇಶ್‌ ಕುಲಾಲ್‌, ರಾಜ್‌ಕುಮಾರ್‌ ಶಕ್ತಿನಗರ ಇದ್ದರು.