ಇತ್ತೀಚೆಗೆ ನಡೆದ ಬೃಹತ್ ತಪಾಸಣಾ ಕಾರ್ಯಚರಣೆಯಲ್ಲಿ ನಿಯಮ ಉಲ್ಲಂಘಿಸಿದ 103 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ₹11.82 ಲಕ್ಷ ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ತಿಳಿಸಿದರು.
ಹೊಸಪೇಟೆ: ಶಾಲಾ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಯಮ ಮೀರಿ ಸಂಚರಿಸುತ್ತಿದ್ದ ಶಾಲಾ-ಕಾಲೇಜು ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ನಡೆದ ಬೃಹತ್ ತಪಾಸಣಾ ಕಾರ್ಯಚರಣೆಯಲ್ಲಿ ನಿಯಮ ಉಲ್ಲಂಘಿಸಿದ 103 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ₹11.82 ಲಕ್ಷ ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ತಿಳಿಸಿದರು.
ನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಶಾಲಾ ಮತ್ತು ಕಾಲೇಜು ವಾಹನಗಳ ಚಾಲಕರಿಗೆ ಸಾರಿಗೆ ನಿಯಮಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.15 ವರ್ಷ ಪೂರ್ಣಗೊಂಡ ಹಾಗೂ ಸಂಚಾರಕ್ಕೆ ಅನರ್ಹವಾಗಿದ್ದ ಸುಮಾರು 61 ಶಾಲಾ ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ರದ್ದುಪಡಿಸಿದೆ. ಸೂಕ್ತ ರಹದಾರಿ (ಪರ್ಮಿಟ್) ಹಾಗೂ ಅರ್ಹತಾ ಪತ್ರ ಇಲ್ಲದೆ ರಸ್ತೆಯಲ್ಲಿ ಚಲಿಸುತ್ತಿದ್ದ ಸುಮಾರು 40ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಹಡಗಲಿಯಲ್ಲಿ 11 ವಾಹನಗಳು ಸೇರಿದಂತೆ ಹಲವು ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ವರದಿಯಾದ 103 ಪ್ರಕರಣಗಳಿಂದ ₹5.37 ಲಕ್ಷ ತೆರಿಗೆ ಹಾಗೂ ₹6.45 ಲಕ್ಷ ದಂಡ ಸೇರಿದಂತೆ ಒಟ್ಟು ₹11.82 ಲಕ್ಷ ಮೊತ್ತ ದಂಡ ವಸೂಲಾತಿ ಮಾಡಲಾಗಿದೆ ಎಂದು ತಿಳಿಸಿದರು.
ಮಾನದಂಡ ಪಾಲಿಸಿಮಕ್ಕಳ ಪ್ರಾಣ ರಕ್ಷಣೆ ಅತ್ಯಂತ ಪ್ರಮುಖವಾಗಿದ್ದು, ಪ್ರತಿಯೊಂದು ಶಾಲಾ-ಕಾಲೇಜು ವಾಹನಗಳಲ್ಲಿ ವಾಹನದ ಲೊಕೇಶನ್ ಹಾಗೂ ಒಳಗಿನ ಚಟುವಟಿಕೆ ತಿಳಿಯಲು ಜಿಪಿಎಸ್ ಹಾಗೂ ಸಿಸಿಟಿವಿ ಅಳವಡಿಸಬೇಕು. ಆಕಸ್ಮಿಕ ಅಪಾಯದ ಸಮಯದಲ್ಲಿ ಬಳಸಲು ತುರ್ತು ನಿರ್ಗಮನ ಬಾಗಿಲು ಬಳಸಬೇಕು. ಬೆಂಕಿ ಅವಘಡಗಳಂತಹ ಪ್ರಕರಣ ತಡೆಯಲು ಅಗ್ನಿಶಾಮಕ ಉಪಕರಣ ಜತೆಗೆ ಮಿತ ವೇಗದಲ್ಲಿ ಚಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಶಾಲಾ ವಾಹನ ಚಾಲಕರಿಗೆ ಪ್ರತ್ಯೇಕ ಸಲಹೆ ಸೂಚನೆ ನೀಡಿದ ಅವರು ಮಕ್ಕಳು ವಾಹನ ಹತ್ತುವಾಗ ಮತ್ತು ಇಳಿಯುವಾಗ ಸುರಕ್ಷತೆ ನೋಡಿಕೊಳ್ಳಲು ಪ್ರತಿಯೊಂದು ಬಸ್‌ನಲ್ಲಿ ಒಬ್ಬ ಸಹಾಯಕರನ್ನು ಇರಿಸಿಕೊಳ್ಳಬೇಕು. ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಚಾಲನಾ ಪರವಾನಗಿ, ಆರ್‌ಸಿ, ಎಫ್‌ಸಿ, ಇನ್ಶೂರೆನ್ಸ್ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳು ಚಾಲ್ತಿಯಲ್ಲಿರಬೇಕು. ಮಕ್ಕಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಮೂರು ತಿಂಗಳಲ್ಲಿ ₹1.09 ಕೋಟಿ ದಂಡ ವಸೂಲಿ
ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ವಾಹನಗಳ ಸೂಕ್ತ ದಾಖಲಾತಿಗಳಿಲ್ಲದೆ ಸಂಚರಿಸುವವರ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಿದ್ದು, ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ ₹1.09 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ತಿಳಿಸಿದ್ದಾರೆ.ಏಪ್ರಿಲ್‌ನಿಂದ ಜೂನ್ 2026ರ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದು, ಶಾಲಾ ಬಸ್‌ಗಳನ್ನು ಹೊರತುಪಡಿಸಿ ಲಾರಿ, ಮ್ಯಾಕ್ಸಿ ಕ್ಯಾಬ್, ಆಟೋ ರಿಕ್ಷಾ ಸೇರಿದಂತೆ ಬಹುತೇಕ ಎಲ್ಲ ವಾಣಿಜ್ಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ ನವೀಕರಿಸದಿರುವುದು, ವಾಹನ ವಿಮೆ ಇಲ್ಲದೆ ವಾಹನ ಚಾಲನೆ, ವಾಯು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು, ಮಿತಿಮೀರಿದ ಸರಕು ಸಾಗಣೆ ಮತ್ತು ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಸೇರಿದಂತೆ ಒಟ್ಟು 1931 ಪ್ರಕರಣ ದಾಖಲಿಸಲಾಗಿದ್ದು, ಅದಕ್ಕಾಗಿ ₹1,09,18,488 ದಂಡ ವಸೂಲಾತಿ ಮಾಡಲಾಗಿದೆ ಎಂದರು.
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ, ಹಿರಿಯ ಮೋಟಾರ್ ವಾಹನ ನಿರೀಕ್ಷಿಕ ಪ್ರದೀಪ್ ಹಡಗಲಿ, ಮಹ್ಮದ್ ಖಾಲಿದ್, ಮೋಟಾರ್ ವಾಹನ ನಿರೀಕ್ಷಿಕ ಶರಣ ಬಸವ ಹಾಗೂ ಸತ್ಯನಾರಾಯಣ ರೆಡ್ಡಿ ಸೇರಿದಂತೆ ಶಾಲಾ ವಾಹನಗಳ ಚಾಲಕರು ಇದ್ದರು.