ತಾಯಿ, ತಂಗಿಯನ್ನೂ ಬಂಧಿಸಿಬಿಡಿ: ಪ್ರತಾಪ್‌ ಸಿಂಹ ಕೆಂಡಾ ನುಡಿ

| Published : Jan 01 2024, 01:15 AM IST

ತಾಯಿ, ತಂಗಿಯನ್ನೂ ಬಂಧಿಸಿಬಿಡಿ: ಪ್ರತಾಪ್‌ ಸಿಂಹ ಕೆಂಡಾ ನುಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮರ ಕಡಿದಿರುವ ಪ್ರಕರಣದಲ್ಲಿ ಸಂಸದ ಪ್ರತಾಪ್‌ ಸಿಂಹ ಸೋದರ ವಿಕ್ರಂರನ್ನು ಬಂಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸಂಸದರ ಪ್ರತಾಪ್‌, ಇನ್ನು ನನ್ನ ತಾಯಿ ತಂಗಿಯನ್ನು ಬಂಧಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು/ನಾಪೋಕ್ಲು

‘ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ, ತಮ್ಮ ಮಗನನ್ನು ಎಂಪಿ ಮಾಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ, ಮರ ಕಳ್ಳತನ ಪ್ರಕರಣದಲ್ಲಿ ಎಫ್ಐಆರ್‌ನಲ್ಲಿ ಹೆಸರಿಲ್ಲದಿದ್ದರೂ ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದಾರೆ. ಮನೆಯಲ್ಲಿ ವಯೋವೃದ್ದ ತಾಯಿ ಇದ್ದಾಳೆ. ನನ್ನ ತಂಗಿ ಇದ್ದಾಳೆ‌. ಅವರನ್ನೂ ಅರೆಸ್ಟ್ ಮಾಡಿಬಿಡಿ’ ಎಂದು ಸಂಸದ ಪ್ರತಾಪ್‌ ಸಿಂಹ ಅವರು ಭಾವುಕರಾಗಿ ನುಡಿದಿದ್ದಾರೆ.ಮೈಸೂರು ಹಾಗೂ ಕೊಡಗಿನ ನಾಪೋಕ್ಲಿನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮರಗಳ ಹನನ ಪ್ರಕರಣದಲ್ಲಿ ತಮ್ಮ ಸೋದರ ವಿಕ್ರಂ ಸಿಂಹ ಅವರನ್ನು ಬಂಧಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಒಬ್ಬ ಬ್ರಿಲಿಯಂಟ್ ಫಾದರ್. ತಮ್ಮ ಪುತ್ರ ಯತೀಂದ್ರ ಅವರನ್ನು ಮೈಸೂರು-ಕೊಡಗು ಕ್ಷೇತ್ರದಲ್ಲಿ ಗೆಲ್ಲಿಸಲು ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಪ್ರತಾಪ್ ಸಿಂಹ ಅಡ್ಡಿ‌ ಆಗಿದ್ದಾನೆ ಅಂತ ಮುಗಿಸಲು ಮುಂದಾಗಿದ್ದಾರೆ. ನಿಜಕ್ಕೂ ಸಿದ್ದರಾಮಯ್ಯ ಅವರಂತಹ ತಂದೆ ಎಲ್ಲರಿಗೂ ಸಿಗಲ್ಲ. ಈ ವಿಷಯದಲ್ಲಿ ಅವರನ್ನು ಮೆಚ್ಚಲೇಬೇಕು. ಆದರೆ, ಈ ಷಡ್ಯಂತ್ರ ಫಲಿಸುವುದಿಲ್ಲ. ಚಾಮುಂಡಿ, ಕಾವೇರಿ ಮಾತೆಯ ಆಶೀರ್ವಾದ, ಕೊಡಗು-ಮೈಸೂರು ಮತದಾರರ ನಂಬಿಕೆ ನನ್ನ ಮೇಲಿದೆ. ಹೀಗಾಗಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದರು.‘ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿ ಚುನಾವಣೆಯಲ್ಲಿ ನನ್ನನ್ನು ಹಣಿಯಲು ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದಾರೆ. ಮರ ಕಳ್ಳತನ ಪ್ರಕರಣದಲ್ಲಿ ಅಮಾನತು ಆದ ಅರಣ್ಯ ಅಧಿಕಾರಿಗಳನ್ನು ತನಿಖೆಗೆ ಬಿಟ್ಟು ವಿಕ್ರಂಸಿಂಹನನ್ನು ವಿಚಾರಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ, ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ. ನನ್ನ ತೇಜೋವಧೆ ಮಾಡಿದ್ದಾಯಿತು. ಈಗ ನನ್ನ ಕುಟುಂಬವನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ನಾನು ಜಗ್ಗುವ ಮಗನಲ್ಲ. ನನ್ನ ಮುಗಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೊನೆಗೆ ನನ್ನ ಜೀವ ತೆಗೆಯಬಹುದು ಅಷ್ಟೆ’ ಎಂದು ದೂರಿದರು.ಸಚಿವ ಮಧು ಬಂಗಾರಪ್ಪ ಅವರಿಗೆ 6.50 ಕೋಟಿ ರು. ಚೆಕ್ ಅಮಾನ್ಯ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಸಚಿವರು ತಪ್ಪಿತಸ್ಥ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದ ಗಮನ ಬೇರೆಡೆ ಸೆಳೆಯಲು ನನ್ನ ತಮ್ಮನ ಪ್ರಕರಣಕ್ಕೆ ಸರ್ಕಾರ ಗಮನ ನೀಡಿದೆ ಎಂದು ಆರೋಪಿಸಿದರು.‘ನೀವು, ಬ್ರಿಲಿಯೆಂಟ್ ಪೊಲಿಟಿಷಿಯನ್ ಕೂಡ. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನು ಡೈವರ್ಟ್ ಮಾಡಲು ನೀವು ನನ್ನ ವಿಷಯ ಇಟ್ಟುಕೊಂಡಿದ್ದೀರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ. ನಿಮಗೆ 40 ವರ್ಷದ ಅನುಭವವಿದೆ. ಆದರೂ, ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದ್ದೀರಿ’ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.ಡಿ.16 ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರನ್ನು ಎಳೆದು ತಂದಿರಿ. ಆದರೆ, ಇದಕ್ಕೂ ಮೊದಲು, ಮರವನ್ನು ಕಡಿದಿದ್ದಾರೆ‌ ಎಂದು ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ರವಿ ಎಂಬುವರು ಸಹಾಯ ಮಾಡಿದ್ದು, ಪರಾರಿ ಆಗಿದ್ದಾರೆ. ಈವರೆಗೆ ಮೂವರನ್ನೂ ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನು ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. ಹನುಮ ಜಯಂತಿ‌ ಸಂದರ್ಭ ನಾನು ಒಂದು‌ ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ್ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್ ನವರು ಪೋಸ್ಟ್ ಹಾಕಿದರು. ಎಫ್ಐಆರ್ ನಲ್ಲಿ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನು ಬಂಧಿಸುವ ಮೂಲಕ ಪ್ರತಾಪ್ ಸಿಂಹನನ್ನು ಮುಗಿಸುವ ಯತ್ನ ಮಾಡಿದ್ದೀರಿ. ನನ್ನ ತಮ್ಮ ತಲೆ ಮರೆಸಿಕೊಂಡಿದ್ದಾನಾ?. ಎರಡು ‌ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಯಾಕೆ‌ ಜನರ ದಾರಿ ತಪ್ಪಿಸುತ್ತಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.