ಅಣ್ಣಿಗೇರಿ: ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ದೊರೆಯಬೇಕಾದಲ್ಲಿ ಜಾಣ್ಮೆಯಿಂದ ಓದುವುದು ಮುಖ್ಯ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ದ್ಯಾವಣ್ಣನವರ ಹೇಳಿದರು,
ಪಟ್ಟಣದ ಡಿ.ಬಿ. ಶಿರೂರು ಸರ್ಕಾರಿ ಅನುದಾನಿತ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಬಿಡುಗಡೆಗೊಳಿಸಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಓದುವುದು ಕೇವಲ ಅಂಕಗಳಿಗೆ ಮಾತ್ರ ಎಂದು ಭಾವಿಸಿದ್ದಾರೆ. ಇದು ತಪ್ಪು ಕಲ್ಪನೆ ಎಂಬ ಅರಿವು ಹೊಂದಬೇಕಿದೆ. ಓದಲು ಅಭಿರುಚಿ ಬೇಕು. ಜತೆಗೆ ಓದಿರುವುದನ್ನು ಅರಿತು ನೆನಪಿನಲ್ಲಿಟ್ಟುಕೊಳ್ಳಬೇಕು. ಅಂದಾಗ ನಮ್ಮ ಜೀವನದ ಯಶಸ್ವಿ ಹಾದಿ ಹಿಡಿಯಲು ಶಿಕ್ಷಣ ಪೂರಕವಾಗಿರುತ್ತದೆ ಎಂದರು.
ಶಿಕ್ಷಕ ಜಿ.ಎಫ್. ರೊಳ್ಳಿ ಮಾತನಾಡಿ, ದೇಶದಲ್ಲಿ ದಿನನಿತ್ಯದ ಆಗು- ಹೋಗುಗಳ ಸುದ್ದಿ ಸಮಾಚಾರ ತಿಳಿಸುವ ಪ್ರಮುಖ ವಾಹಿನಿ ಪತ್ರಿಕಾ ಮಾಧ್ಯಮ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದಕ್ಕಾಗಿ ಕನ್ನಡಪ್ರಭ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಯುವ ಆವೃತ್ತಿ ಬಿಡುಗಡೆಗೊಳಿಸಿದೆ. ಈ ವಿಶೇಷ ಪುರವಣಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಹಲವಾರು ವಿಷಯಗಳನ್ನು ಒಳಗೊಂಡಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಯುವ ಆವೃತ್ತಿ ಓದುವಂತಾಗಬೇಕಿದೆ ಎಂದರು.ಶಾಲೆಯ ಮುಖ್ಯೋಪಾಧ್ಯಾಯರಾದ ವೈ.ಬಿ. ಗಂಗಲ್ ಮಾತನಾಡಿ, ಶಾಲಾ ಪ್ರಾರಂಭದಿಂದ ಕೊನೆಯ ಪರೀಕ್ಷಾ ದಿನಗಳ ವರೆಗೂ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಯುವ ಆವೃತ್ತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಪತ್ರಿಕಾ ಸಂಸ್ಥೆಗೆ ಹಾಗೂ ದಾನಿಗಳಿಗೆ ಶಾಲಾ ಮಕ್ಕಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಂ. ಸುನೀತಾ, ಭಾಗ್ಯಜ್ಯೋತಿ ರಡ್ಡಿ, ಮಹೇಶ್ವರಿ ಹೆಬ್ಬಾರ, ಮಹೇಶ ದಾನಪ್ಪ ಹೂಗಾರ ಸೇರಿದಂತೆ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.