‘ಕನ್ನಡಪ್ರಭ’ ಪತ್ರಿಕೆ ಹೊರ ತರುತ್ತಿರುವ ಯುವ ಆವೃತ್ತಿ ಪುರವಣಿ ನನ್ನ ಕೈ ಹಿಡಿದಿದೆ. ಅದನ್ನು ಓದಿದ್ದು ನನ್ನ ಮಸ್ತಕದಲ್ಲಿ ಉಳಿದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಆದರ್ಶ ಪ್ರೌಢಶಾಲೆ ವಿದ್ಯಾರ್ಥಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ದಶರಥ ಶಿವಾಜಿ ಭೋಸಲೆ ಹೇಳಿದರು.
ಐಗಳಿ : ‘ಕನ್ನಡಪ್ರಭ’ ಪತ್ರಿಕೆ ಹೊರ ತರುತ್ತಿರುವ ಯುವ ಆವೃತ್ತಿ ಪುರವಣಿ ನನ್ನ ಕೈ ಹಿಡಿದಿದೆ. ಅದನ್ನು ಓದಿದ್ದು ನನ್ನ ಮಸ್ತಕದಲ್ಲಿ ಉಳಿದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯಲು ಸಾಧ್ಯವಾಯಿತು ಎಂದು ಆದರ್ಶ ಪ್ರೌಢಶಾಲೆ ವಿದ್ಯಾರ್ಥಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ದಶರಥ ಶಿವಾಜಿ ಭೋಸಲೆ ಹೇಳಿದರು.
ಪ್ರತಿಷ್ಠಿತ ಆದರ್ಶ ಪ್ರೌಢಶಾಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿಯ ಪ್ರತಿಷ್ಠಿತ ಆದರ್ಶ ಪ್ರೌಢಶಾಲೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡಪ್ರಭ ಯುವ ಆವೃತ್ತಿಯನ್ನು ನಿತ್ಯ ಓದುತ್ತ ಬಂದಿದ್ದೇನೆ. ಅದು ಇಡೀ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯೋಪಾಧ್ಯಾಯ ಡಿ.ಎಲ್.ಕದಮ್ ಮಾತನಾಡಿ, ರಾಜ್ಯದಲ್ಲಿ ಹಿರಿಯ ಪತ್ರಿಕೆಯಾದ ಕನ್ನಡಪ್ರಭ, ತನ್ನ ಘನತೆ, ಗೌರವ ಉಳಿಸಿಕೊಂಡು ನೇರ, ದಿಟ್ಟ, ನಿರಂತರವಾಗಿ ಬಂದಿದೆ. ಎಲ್ಲರ ಮನದಾಳದಲ್ಲಿ ಕನ್ನಡಪ್ರಭದ ಹೆಸರು ಉಳಿದಿದೆ. ಇಂದಿನ ದಿನಮಾನಗಳಲ್ಲಿ ಪತ್ರಿಕೆಯ ಪುರವಣಿ ರಾಜ್ಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಉಚಿತವಾಗಿ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷ
ನಮ್ಮ ಶಿಕ್ಷಣ ಸಂಸ್ಥೆಗೆ ಪ್ರಾಯೋಜಕರಾಗಿ ಪುರವಣಿಯನ್ನು ಉಚಿತವಾಗಿ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಪಿಡಿಒ, ಎಲ್ಲ ಸದಸ್ಯರು ಮತ್ತು ಕೆನರಾ ಬ್ಯಾಂಕಿನ ಸಿಬ್ಬಂದಿ ಸಂಗಪ್ಪ ದೊಡಮನಿ ಅವರಿಗೆ ನಮ್ಮ ಸಂಸ್ಥೆಯ ಪರ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ನಮ್ಮ ಶಾಲೆಯ ಶಿಕ್ಷಕರು ಪ್ರತಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸಿ, ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಬಗ್ಗೆ ಶಿಕ್ಷಕ ವೃಂದಕ್ಕೆ ತೃಪ್ತಿ ಇದೆ ಎಂದರು.
ಇದೇ ವೇಳೆ, ದಶರಥ ಶಿವಾಜಿ ಭೋಸಲೆ ಅವರನ್ನು ಕನ್ನಡಪ್ರಭ ವರದಿಗಾರ ಧರಿಗೌಡ ಮ.ಪಾಟೀಲ ಸತ್ಕರಿಸಿದರು.
