ಹುಬ್ಬಳ್ಳಿ:

ಮಕ್ಕಳು ಖಿನ್ನತೆಗೆ ಜಾರಿ ಬದುಕನ್ನು ದುಸ್ತರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಮನೆಯಲ್ಲಿ ಸಂಸ್ಕಾರದ ಜತೆಗೆ ಸಾಹಿತ್ಯದ ಓದಿನ ರುಚಿ ಹಚ್ಚಿಸಬೇಕು. ಅನೇಕ ಮಾನಸಿಕ ಕಾಯಿಲೆಗೆ ಓದು, ಸಂಗೀತ ಔಷಧವಾಗಿದೆ ಎಂದು ಲೋಕಾಭಿರಾಮ ಕಾರ್ಯಕ್ರಮದ ಆಯೋಜಕ ಡಾ. ಶಿವಾನಂದ ಹಿರೇಮಠ ಹೇಳಿದರು.

ಆಂತರ್ಯ ಪ್ರತಿಷ್ಠಾನದ ವತಿಯಿಂದ ನಗರದ ಮಹಿಳಾ ವಿದ್ಯಾಪೀಠದ ಬಳಿಯ ಆಂತರ್ಯ ದುಶ್ಚಟ ನಿವಾರಣಾ ಕೇಂದ್ರದಲ್ಲಿ ಭಾನುವಾರ ‘ಲೋಕಾಭಿರಾಮ’ ಶೀರ್ಷಿಕೆ ಅಡಿ ಆಯೋಜಿಸಿದ್ದ ‘ಜೀವನಕ್ಕೆ ಕಗ್ಗದ ದಾರಿದೀಪ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ದಿನದಿಂದ ದಿನಕ್ಕೆ ಮಾನಸಿಕ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನಸ್ಸು ಸರಿಯಾಗಿದ್ದರೆ ಬದುಕು ಉತ್ತಮವಾಗುತ್ತದೆ. ಮನಸ್ಸಿನ ನೆಮ್ಮದಿಗೆ ಕಗ್ಗದಲ್ಲಿ ಉತ್ತರವಿದೆ. ಅದನ್ನು ಓದಿದಾಗ ಬದುಕುವ ರೀತಿ ಬದಲಾಗುತ್ತದೆ. ಮನಸ್ಸಿನ ಆರೋಗ್ಯಕ್ಕೆ ಕಗ್ಗ ಓದು, ಖರ್ಚಿಲ್ಲದ ಔಷಧ. ಭಗವದ್ಗೀತೆ ಅಭಿಯಾನದಂತೆ, ಕಗ್ಗ ಅಭಿಯಾನ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಸಾಹಿತಿಗಳು, ಶಿಕ್ಷಕರು, ವೈದ್ಯರು, ಉದ್ಯಮಿಗಳು, ಸರ್ಕಾರಿ ಉದ್ಯೋಗಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು, ಡಿವಿಜಿ ಅವರ ಕಗ್ಗದ ಬಗ್ಗೆ ಮಾತನಾಡಿದರು. ‘ಕೆಲವರು ಕಗ್ಗ ವಾಚಿಸಿದರೆ, ಇನ್ನು ಕೆಲವರು ಶ್ರುತಿ ಸೇರಿಸಿ ಲಯಬದ್ಧವಾಗಿ ಹಾಡಿದರು. ಕಗ್ಗದ ತಾತ್ಪರ್ಯ ಹೇಳಿದರು. ‘ಬದುಕಿಗೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕಗ್ಗ ಎಷ್ಟು ಸಕಾರಾತ್ಮಕವಾಗಿದೆ’ ಎನ್ನುವುದನ್ನು ತಿಳಿಸಿದರು.


‘ಕಗ್ಗವನ್ನು ಒಂದೊಂದು ಬಾರಿ ಓದಿದಾಗಲೂ ಒಂದೊಂದು ಅರ್ಥ ಕೊಡುತ್ತದೆ. ಹೊಸ ಚಿಂತನೆಗೆ ಪ್ರೇರಣೆ ನೀಡುತ್ತದೆ. ಪ್ರಕೃತಿ ಎಲ್ಲವನ್ನೂ ಕೊಟ್ಟು ಮೌನವಾಗಿರುತ್ತದೆ. ಆದರೆ, ಮನುಷ್ಯ ಎಲ್ಲವೂ ತನ್ನಿಂದಲೇ ಎಂದು ಅಹಂಕಾರ ಪಡುತ್ತಾನೆ. ಅದಕ್ಕಾಗಿಯೇ ಡಿವಿಜಿ ಅವರು ‘ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ... ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಮನುಷ್ಯನ ವರ್ತನೆಗೆ ಛಾಟಿ ಬೀಸಿದ್ದಾರೆ’ ಎಂದು ಡಿಸಿಪಿ ರವೀಶ್‌ ಸಿ.ಆರ್‌. ಹೇಳಿದರು.

ಸಾಹಿತಿ, ವೈದ್ಯ ಗೋವಿಂದ ಹೆಗಡೆ ಕಗ್ಗ ವಾಚಿಸಿ ಅಭಿಪ್ರಾಯ ಹಂಚಿಕೊಂಡರು. ಸಾಹಿತಿಗಳಾದ ಪ್ರಶಾಂತ, ಸೋಮು ರೆಡ್ಡಿ, ರವಿ ಅಂಬೋಜಿ, ಶಿಕ್ಷಕರಾದ ಮಹೇಶ ಕುಮಾರ, ವಿಷ್ಣು ನಾಯ್ಕ, ಡಾ. ಚೈತ್ರಾ ಹಿರೇಮಠ, ಡಾ. ಮಹೇಶ, ಡಾ. ಅಶ್ವಿನಿ, ಹಾಗೂ ಉಮಾ ಕರಡಿ, ವಿನಾಯಕ ಜೋಗಾರಿಶೆಟ್ಟರ್‌, ಮಹಾರುದ್ರಪ್ಪ ಜೋಗಾರಿಶೆಟ್ಟರ್, ಗಿರೀಶ, ಮಲ್ಲಿಕಾರ್ಜುನ, ಪ್ರಜ್ವಲ ತಳವಾರ ಪಾಲ್ಗೊಂಡಿದ್ದರು.