ಹಾಸ್ಯ ವಿಲಾಸ, ರಸಗುಲ್ಲಾ ಕೃತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಯುವ ಪೀಳಿಗೆಯು ಮೊಬೈಲ್‌ಗೆ ಮಾರುಹೋಗುತ್ತಿರುವುದು ಅವರ ಸ್ವತಂತ್ರ ಕಲ್ಪನಾ ಶಕ್ತಿಯನ್ನು ಕುಂಠಿತಗೊಳಿಸುತ್ತಿದೆ. ಪುಸ್ತಕ ಓದಿನಿಂದ ಮಾತ್ರ ಮನುಷ್ಯನ ಬುದ್ಧಿಶಕ್ತಿ ಮತ್ತು ಸೃಜನಶೀಲತೆ ವಿಕಸನಗೊಳ್ಳಲು ಸಾಧ್ಯ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ಹೇಳಿದರು.

ಮನುವಿಕಾಸ ಸಂಸ್ಥೆ ಕರ್ಜಗಿ ಸಹಯೋಗದಲ್ಲಿ ಲೇಖಕ ರಾಜು ಅಡಕಳ್ಳಿ ಅವರ ಹಾಸ್ಯ ವಿಲಾಸ ಮತ್ತು ರಸಗುಲ್ಲಾ ಕೃತಿಗಳನ್ನು ಪಟ್ಟಣದ ಬಾಲ ಭವನದಲ್ಲಿ ಸ್ಥಾನಿಕವಾಗಿ ಬಿಡುಗಡೆಗೊಳಿಸಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಭಾಷಾ ಪ್ರಜ್ಞೆಯ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಭಾಷೆಯು ಕೇವಲ ಸಂವಹನವಷ್ಟೇ ಅಲ್ಲದೆ, ಅದು ಸಂಸ್ಕೃತಿಯ ಮತ್ತು ಅರಿವಿನ ಸಂಕೇತವಾಗಿದೆ. ಹಾಸ್ಯವು ಬದುಕಿನ ಸಂಕೀರ್ಣತೆಗಳನ್ನು ನಗುವಿನ ಮೂಲಕ ಸರಳೀಕರಿಸುವ ಅದ್ಭುತ ಕಲೆ. ಜ್ಞಾನದ ದೇವತೆ ಶಾರದೆ ಒಲಿಯಬೇಕಾದರೆ ಕೇವಲ ಮಾಹಿತಿಯಲ್ಲ, ಬದಲಾಗಿ ಪುಸ್ತಕಗಳ ಆಳವಾದ ಅಧ್ಯಯನ ಮತ್ತು ಉತ್ತಮ ಅಭಿರುಚಿ ಅತ್ಯಗತ್ಯ ಎಂದರು.

ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ಲಲಿತ ಪ್ರಬಂಧಗಳು ಕೇವಲ ಹಾಸ್ಯಕ್ಕಷ್ಟೇ ಸೀಮಿತವಲ್ಲ, ಅವು ಬದುಕಿನ ಕಟು ಸತ್ಯಗಳನ್ನು ಅತ್ಯಂತ ಸರಳವಾಗಿ ಮತ್ತು ರಂಜನೀಯವಾಗಿ ವಿವರಿಸುವ ಶಕ್ತಿ ಹೊಂದಿವೆ. ಸಾಹಿತ್ಯವು ಮನುಷ್ಯನ ಅಂತರಂಗವನ್ನು ಶುದ್ಧೀಕರಿಸುವ ಕೆಲಸ ಮಾಡುತ್ತದೆ ಎಂದರು.


ನ್ಯಾಯವಾದಿ ರವಿ ಹೆಗಡೆ ಹೂವಿನಮನೆ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಪುಸ್ತಕ ಓದಿನ ಮಹತ್ವ ಮತ್ತು ಕೌಟುಂಬಿಕ ಮೌಲ್ಯಗಳನ್ನು ರಕ್ಷಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದಾಗಿ ಮನುಷ್ಯ ಸಂಬಂಧಗಳು ದೂರವಾಗುತ್ತಿವೆ ಮತ್ತು ಓದುವ ಹವ್ಯಾಸವು ತೀವ್ರವಾಗಿ ಕುಂಠಿತಗೊಳ್ಳುತ್ತಿದೆ ಎಂದರು.

ಕೃತಿಕಾರ ರಾಜು ಅಡಕಳ್ಳಿ, ಕಲಾವಿದ ಸತೀಶ ಯಲ್ಲಾಪುರ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನುವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್ ಕರ್ಜಗಿ ಮಾತನಾಡಿದರು.

ರಾಘವೇಂದ್ರ ಬೆಟ್ಟಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು. ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಶ್ರೀಕಾಂತ ಹೆಗಡೆ ಸ್ವಾಗತಿಸಿದರು ಮತ್ತು ಎಂ.ಜಿ. ಹೆಗಡೆ ವಂದಿಸಿದರು.