ಸಾರಾಂಶ
ದೇವದುರ್ಗ ಪಟ್ಟಣದ ಗ್ರಂಥಾಲಯದಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ ಜರುಗಿತು.
ದೇವದುರ್ಗ: ಅತಿಯಾದ ಮೊಬೈಲ್ ಬಳಕೆಯಿಂದಾಗಿ ಓದುವಿಕೆ ಮರೆಯಾಗುತ್ತಿರುವದು ಕಳವಳದ ಸಂಗತಿ. ಓದುವ ಪರಿಪಾಠದಿಂದ ಜ್ಞಾನ ವೃದ್ಧಿಗೆ ಪೂರಕವಾಗಲಿದೆ ಎಂದು ಗ್ರಂಥಪಾಲಕ ಹನುಮಂತ್ರಾಯ ಅಂಚೆಸುಗೂರ ತಿಳಿಸಿದರು.
ಪಟ್ಟಣದ ಗ್ರಂಥಾಲಯದಲ್ಲಿ ತಾಲೂಕು ಕಸಾಪ ಬುಧವಾರ ಅಯೋಜಿಸಿದ್ದ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಂಥಾಲಯಗಳು ಜ್ಞಾನದ ಭಂಡಾರವಾಗಿವೆ ಎಂದರು.ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಗ್ರಂಥಾಲಯಗಳ ಪುಸ್ತಕಗಳನ್ನೂ ಓದುವ ಪರಿಪಾಠ ಇಟ್ಟುಕೊಳ್ಳುವದು ಅತಿ ಅವಶ್ಯ. ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ ವರ್ಷಾಚರಣೆ ಸಂಭ್ರಮಾಚಾರಣೆ ನಿಮಿತ್ಯ ‘ಪರಿಷತ್ ನಡೆ ಗ್ರಂಥಾಲಯ ಕಡೆ’ ಅಭಿಯಾನ ಹಮ್ಮಿಕೊಂಡಿರುವದು ತುಂಬಾ ಪರಿಣಾಮಕಾರಿ ಕಾರ್ಯಕ್ರಮ ಎಂದು ಅಂಚೆಸೂಗೂರ ಅವರು ತಿಳಿಸಿದರು.
ಈ ವೇಳೆ ತಾಲೂಕು ಕಸಾಪ ಅಧ್ಯಕ್ಷ ಎಚ್. ಶಿವರಾಜ ಮಾತನಾಡಿದರು. ಈ ವೇಳೆ ಗ್ರಂಥಾಲಯಧಿಕಾರಿ ನವಾಬ್ ಪಟೇಲ್, ಕಸಾಪ ಮಾಜಿ ಅಧ್ಯಕ್ಷ ನರಸಿಂಗರಾವ್ ಸರಕೀಲ್, ಬಸವರಾಜ ಬ್ಯಾಗವಾಟ, ಕರವೇ ಮುಖಂಡ ಶ್ರೀನಿವಾಸ ದಾಸರ್, ತಾಲೂಕು ಕಸಾಪ ಪದಾಧಿಕಾರಿಗಳಾದ ಶಿವರಾಜ ರುದ್ರಾಕ್ಷಿ, ರಂಗಪ್ಪ ಬಲ್ಲದವ ಕೋತಿಗುಡ್ಡ, ಗುಂಡುರಾವ್ ನಾಯಕ ಮಜ್ಜಿಗಿ, ಜಿ.ಸಂತೋಷ, ಆಕಾಶ, ಅಗ್ನಿಶಾಮಕ ಠಾಣೆಯ ಶಿವರಾಜ, ನಾಗರಾಜ ಸೇರಿ ಇತರರು ಪಾಲ್ಗೊಂಡಿದ್ದರು.