ಸಾರಾಂಶ
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ಸದೃಢ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ಸದೃಢ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ ಹೇಳಿದರು.ನಗರದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುಸ್ತಕಗಳಲ್ಲಿ ಆಯಾ ಕಾಲಘಟ್ಟದ ಘಟನೆಗಳು, ಜನರ ಜೀವನಶೈಲಿ, ಪರಿಸರ ಸೇರಿದಂತೆ ವೈವಿಧ್ಯ ಸಂಗತಿಗಳನ್ನು ಕಾಣಬಹುದಾಗಿದೆ. ಪುಸ್ತಕದ ಅಧ್ಯಯನದ ಮೂಲಕ ಶತಮಾನಗಳಲ್ಲಿ ನಡೆದ ಐತಿಹಾಸಿಕ ಸಂಗತಿಗಳನ್ನು ಹಾಗೂ ಜೀವನಶೈಲಿಯನ್ನು ಅರಿತುಕೊಳ್ಳಬಹುದಾಗಿದೆ. ಓದುಗರಿಗೆ ಪುಸ್ತಕ ತಲುಪಿಸುವಲ್ಲಿ ಗ್ರಂಥಾಲಯಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ಪ್ರತಿ ವರ್ಷ 6000 ಕನ್ನಡ ಪುಸ್ತಕ ಪ್ರಕಟವಾಗುತ್ತದೆ. ಆದರೆ ಹೆಚ್ಚಿನ ಪುಸ್ತಕಗಳು ಓದುಗರಿಗೆ ತಲುಪುವುದಿಲ್ಲ. ವಿದ್ಯಾರ್ಥಿಗಳು ಪುಸ್ತಕ ಹವ್ಯಾಸ ಬೆಳೆಸಿಕೊಳ್ಳಬೇಕು. ಕರ್ನಾಟಕ ಸಂಘದಿಂದ ಪ್ರತಿ ವರ್ಷ 12 ವಿವಿಧ ಪ್ರಕಾರಗಳಲ್ಲಿ ಬಹುಮಾನ ನೀಡಲಾಗುತ್ತಿದೆ. ಲೇಖಕರಿಗೆ ಪ್ರೋತ್ಸಾಹಿಸುವ ಕೆಲಸವನ್ನು ಕರ್ನಾಟಕ ಸಂಘ ಮಾಡುತ್ತಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಪಿ.ಧರಣಿಕುಮಾರ್ ಮಾತನಾಡಿ, ಖ್ಯಾತ ಗಣಿತ ತಜ್ಞ ಆಗಿದ್ದ ಎಸ್.ಆರ್.ರಂಗನಾಥನ್ ಅವರನ್ನು ಗ್ರಂಥಾಲಯ ಪಿತಾಮಹ ಎನ್ನಲಾಗುತ್ತದೆ. ಗ್ರಂಥಾಲಯ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವ್ಯವಸ್ಥಿತವಾಗಿ ಪುಸ್ತಕ ಜೋಡಿಸುವ ಮತ್ತು ಓದುಗರಿಗೆ ಪುಸ್ತಕಗಳು ದೊರಕುವಂತೆ ಮಾಡುವ ಕೊಲೋನ್ ವರ್ಗೀಕರಣ ಪದ್ಧತಿ ಪರಿಚಯಿಸುತ್ತಾರೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ಎಸ್.ಎಲ್.ಕಾಡದೇವರಮಠ ಮಾತನಾಡಿ, ಇಡೀ ಭಾರತ ದೇಶದ ಎಲ್ಲ ಗ್ರಂಥಾಲಯಗಳಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಡೆಸುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ವಿದ್ಯಾಶಾಲಾ ಸಮಿತಿಯ ಖಜಾಂಚಿ ಬಿ.ಗೋಪಿನಾಥ್, ಸಹ ಕಾರ್ಯದರ್ಶಿ ಡಾ. ಎಂ.ಸತೀಶ್‌ಕುಮಾರ್ ಶೆಟ್ಟಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಪ್ರೊ. ಎನ್.ಕುಮಾರಸ್ವಾಮಿ, ಗ್ರಂಥಪಾಲಕ ಕೆ.ನಿರಂಜನ ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))