ಬದುಕು ಕಟ್ಟುವ ಶಕ್ತಿ ಓದಿಗಿದೆ

| Published : Mar 30 2024, 12:55 AM IST

ಸಾರಾಂಶ

ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ. ಓದಿಗೆ ಬದುಕು ಕಟ್ಟುವ ಶಕ್ತಿ ಇದೆ ಎಂದು ಸಮಾಜ ಸೇವಕಿ ಉಮಾ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ. ಓದಿಗೆ ಬದುಕು ಕಟ್ಟುವ ಶಕ್ತಿ ಇದೆ ಎಂದು ಸಮಾಜ ಸೇವಕಿ ಉಮಾ ಪಾಟೀಲ್ ಹೇಳಿದರು.

ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಆಯೋಜಿಸಿದ್ದ ಓದುಗರ ಚಾವಡಿಯ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು. ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ. ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ಕಲ್ಲು ಹೂವಿನ ನೆರಳು ಕಥಾ ಸಂಕಲನವನ್ನು ಶಿಕ್ಷಕ ಶಿವಶರಣಪ್ಪ ಶಿರೂರ ಪರಿಚಯಿಸಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು ಸಾಹಿತ್ಯದ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅನಿಲ್ ಗುನ್ನಾಪೂರ ಅವರ ಕಥೆಗಳು ಹೊಸ ಭರವಸೆ ಹುಟ್ಟು ಹಾಕುತ್ತವೆ ಎಂದರು.

ಅನಿಲ್ ಗುನ್ನಾಪೂರ ಮಾತನಾಡಿ, ನಾನು ನನ್ನ ತಾಯಿಯವರ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದಾಗಿ ಕಥೆಗಳನ್ನು ಬರೆಯಲು ಆರಂಭಿಸಿದೆ. ನನ್ನ ಜೀವ ಹಿಂಡಿದ ಘಟನೆಗಳನ್ನು ನನ್ನ ನೆಲದ ಭಾಷೆಯಲ್ಲಿ ಅಭಿವ್ಯಕ್ತಿಸುವ ಪ್ರಯತ್ನ ಮಾಡಿರುವೆ. ಲೇಖಕರ ಪುಸ್ತಕಗಳನ್ನು ಈ ರೀತಿ ಸಾಹಿತ್ಯದ ಆಸಕ್ತರ ಮಧ್ಯದಲ್ಲಿ ಚರ್ಚೆ ಆಗುತ್ತಿರುವುದು ನನಗೆ ಸಂತಸ ತಂದಿದೆ ಹಾಗೂ ಹೊಸದಾಗಿ ಕಥೆಗಳನ್ನು ಬರೆಯಲು ಪ್ರೇರಣೆ ದೊರಕಿದಂತಾಗಿದೆ ಎಂದು ಹೇಳಿದರು.

ಬಿ.ಆರ್.ಬನಸೋಡೆ ಅವರು ಮಾತನಾಡಿ, ಓದುಗರ ಚಾವಡಿಯ ಮೂಲಕ ಸಾಹಿತ್ಯದ ಆಸಕ್ತರ ಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದರು.

ಸಾಹಿತಿಗಳಾದ ದಾಕ್ಷಾಯಿಣಿ ಬಿರಾದಾರ, ಚೆನ್ನಮ್ಮ ಪತ್ತಾರ, ಕಾಮಾಕ್ಷಿ ಪತ್ತಾರ, ಸ್ವಪ್ನಾ ಅಳ್ಳಿಮೊರೆ, ಶರಣು ಸಬರದ, ರಾಜಕುಮಾರ ಜೊಲ್ಲೆ, ಸುಭಾಸ ಯಾದವಾಡ, ಬಸವರಾಜ ಕುಂಬಾರ, ಗಂಗಾಧರ ಪತ್ತಾರ, ರಾಜಶೇಖರ ಉಮರಾಣಿ, ಮೋಹನ ಕಟ್ಟಿಮನಿ, ಭಾರತ ಕುಮಾರ ಹೆಚ್ ಟಿ, ಅನಿಲಕುಮಾರ ಮಾಶಾಳಕರ, ಶಶಿಧರ ಶಿರಹಟ್ಟಿ, ಸುಭಾಸ ಕನ್ನೂರ, ಎಸ್. ಡಿ. ಕೃಷ್ಣಮೂರ್ತಿ, ಪಂಡಿತರಾವ ಪಾಟೀಲ್, ಸಿದ್ದಾರೂಢ ಕಟ್ಟಿಮನಿ, ಡಾ.ಎಸ್.ಟಿ. ಮೇರವಾಡೆ, ಆರ್. ಎಸ್. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಗದ್ದನಕೇರಿ, ಅಶ್ವಥ್, ಕೆ. ಕೆ. ಅಸ್ಕಿ, ಶ್ರೀಧರ ಪತ್ತಾರ ಸುಜಾತಾ ಚಲವಾದಿ, ದಾಕ್ಷಾಯಿಣಿ ಹುಡೇದ, ಹೇಮಲತಾ ವಸ್ತ್ರದ, ಪ್ರಭಾವತಿ ದೇಸಾಯಿ ಉಪಸ್ಥಿತರಿದ್ದರು.

ವಿಮರ್ಶಾ ಪತ್ತಾರ ಪ್ರಾರ್ಥಿಸಿದರು, ಡಾ. ಎಂ. ಎಸ್. ಮಾಗಣಗೇರಿ ಸ್ವಾಗತಿಸಿ ನಿರೂಪಿಸಿದರು.