ಹೊಸಪೇಟೆ: ಪತ್ರಕರ್ತರಿಗೆ ಎಲ್ಲ ವಿಷಯಗಳ ಸಂಪೂರ್ಣ ಜ್ಞಾನವಿರುವುದಿಲ್ಲ. ಆದರೆ ನಿರಂತರ ಅಧ್ಯಯನ, ಮಾಹಿತಿ ಸಂಗ್ರಹ, ಅನುಭವದ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ದಾರವಾಡದ ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಮೂರು ದಿನಗಳ ಕಾರ್ಯಾಗಾರದಲ್ಲಿ ಟೆಲಿವಿಷನ್ ವರದಿಗಾರಿಕೆಯ ತಂತ್ರಗಳು ವಿಷಯ ಕುರಿತು ಮಾತನಾಡಿದರು.

ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸೈದ್ಧಾಂತಿಕ ಅಧ್ಯಯನದ ಜೊತೆಗೆ ಪ್ರಾಯೋಗಿಕ ತರಬೇತಿಗೂ ಹೆಚ್ಚಿನ ಒತ್ತು ನೀಡಬೇಕು. ಓದುವ ಹವ್ಯಾಸ ಆತ್ಮವಿಶ್ವಾಸವನ್ನು ಬೆಳೆಸುವುದರೊಂದಿಗೆ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಪರಿಶೀಲಿಸದೇ ಪ್ರಕಟಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ಪತ್ರಿಕೆಗಳು ಸುದ್ದಿಯನ್ನು ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಸಮಗ್ರವಾಗಿ ಪರಿಶೀಲಿಸುತ್ತವೆ ಎಂದು ಹೇಳಿದರು.

ಯಾರು ಭಾಷೆಯನ್ನು ಕಲಿತಿರುತ್ತಾರೋ ಅವರು ಜಗತ್ತನ್ನು ಆಳುತ್ತಾರೆ. ಭಾಷೆಯ ಮೇಲಿನ ಹಿಡಿತ ಪತ್ರಕರ್ತನ ಪ್ರಮುಖ ಶಕ್ತಿಯಾಗಿದೆ. ಉತ್ತಮ ಸುದ್ದಿಗಳನ್ನು ಪಡೆಯಲು ಸಮಾಜದ ವಿವಿಧ ವರ್ಗಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದು ಅಗತ್ಯ. ಜೊತೆಗೆ ಮಾನವೀಯ ಸಂವೇದನೆ ಮತ್ತು ಭಾವನಾತ್ಮಕ ಸ್ಪಂದನೆ ಹೊಂದಿರುವ ಪತ್ರಕರ್ತರಿಂದಲೇ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಸುದ್ದಿಗಳು ಮೂಡಿಬರುತ್ತವೆ ಎಂದು ಹೇಳಿದರು.


ಪತ್ರಕರ್ತರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಓದುಗರು ಅಥವಾ ವೀಕ್ಷಕರ ಮೇಲೆ ಹೇರದೆ, ವಾಸ್ತವಾಂಶಗಳನ್ನು ಮಾತ್ರ ಅವರ ಮುಂದಿಡಬೇಕು. ಸತ್ಯಾಂಶಗಳ ಆಧಾರದ ಮೇಲೆ ಜನರು ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ಅವಕಾಶ ನೀಡುವುದು ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಹಿರಿಯ ಪತ್ರಕರ್ತರು ಅಪಾರ ಕೊಡುಗೆ ನೀಡಿದ್ದಾರೆ. ಹಾಗೆ ಪತ್ರಕರ್ತರು ಸುದ್ದಿ ಬರವಣಿಗೆಯಷ್ಟೇ ಅಲ್ಲದೆ, ಲೇಖನಗಳು, ಪ್ರವಾಸ ಕಥನಗಳು ಸೇರಿದಂತೆ ವಿವಿಧ ಪ್ರಕಾರದ ಬರಹಗಳ ಮೂಲಕ ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ಪತ್ರಕರ್ತರಾದಾಗ ಯಾವುದೇ ಆಮಿಷಗಳಿಗೆ ಒಳಗಾಗದೇ ಸತ್ಯ, ಪ್ರಾಮಾಣಿಕತೆ ಮತ್ತು ನೈತಿಕತೆ ಪಾಲಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಬಡವರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗದವರ ಸಮಸ್ಯೆಗಳನ್ನು ಬೆಳಕಿಗೆ ತಂದು ಅವರಿಗೆ ನ್ಯಾಯ ದೊರಕುವಂತೆ ಕಾರ್ಯ ನಿರ್ವಹಿಸುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಅಧ್ಯಾಪಕ ಡಾ.ಟಿ.ಎಸ್. ಗೊರವರ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಅಧ್ಯಾಪಕರು ಹಾಗೂ ಮಾಹಿತಿಕೇಂದ್ರದ ಮುಖ್ಯಸ್ಥರು, ಆಡಳಿತ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಎಸ್.ವೈ. ಸೋಮಶೇಖರ್ ಸ್ವಾಗತಿಸಿದರು. ಅಧ್ಯಾಪಕ ಡಾ. ಎಸ್.ಕೆ. ಲೋಕೇಶ್ ವಂದಿಸಿದರು. ವಿದ್ಯಾರ್ಥಿ ಕವನ ನಿರೂಪಿಸಿದರು.