ಸಾಹಿತ್ಯದ ಓದು ವರ್ತಮಾನದ ತಲ್ಲಣಗಳಿಗೆ ಪರಿಹಾರ: ಸಾಹಿತಿ ಡಾ.ಮಾನಸ ಕೀಳಂಬಿ

| Published : Jun 23 2024, 02:10 AM IST

ಸಾಹಿತ್ಯದ ಓದು ವರ್ತಮಾನದ ತಲ್ಲಣಗಳಿಗೆ ಪರಿಹಾರ: ಸಾಹಿತಿ ಡಾ.ಮಾನಸ ಕೀಳಂಬಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಮಾನಸ ಕೀಳಂಬಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವರ್ತಮಾನದ ಸಮಾಜದ ಅನೇಕ ತಲ್ಲಣಗಳಿಗೆ ಸಾಹಿತ್ಯದ ಓದು ಪರಿಹಾರ ಒದಗಿಸುತ್ತದೆ. ಓದನ್ನು ರೂಢಿಸಿಕೊಳ್ಳದ ಯುವ ಸಮುದಾಯ ಸಂಸ್ಕಾರಗಳಿಂದ ದೂರವಾಗುತ್ತಿದ್ದು, ಬದುಕಿನ ಅಪಾಯಗಳಲ್ಲಿ ಸಿಲುಕುತ್ತಿರುವ ಕುರಿತು ಆತಂಕವಾಗುತ್ತಿದೆ ಎಂದು ಸಾಹಿತಿ ಡಾ.ಮಾನಸ ಕೀಳಂಬಿ ಅಭಿಪ್ರಾಯಪಟ್ಟರು.

ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ಕನ್ನಡ ವಿಭಾಗದ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಹದಗೆಡಿಸುವ ಸಂಗತಿಗಳು ಹೆಚ್ಚುತ್ತಿದ್ದು, ಅದರಿಂದ ಹೊರಬರಲು ಓದು ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದರು.

ಅಭಿರುಚಿಗಳು ಸಾಮಾಜಿಕ ಜಾಲತಾಣಗಳಲ್ಲಿನ ಓದುವಿಕೆಯಲ್ಲಿ ಪರಿಸಮಾಪ್ತಿಗೊಳ್ಳುವುದಿಲ್ಲ. ಬದುಕಿನ ಎಲ್ಲಾ ಪ್ರಶ್ನೆಗಳಿಗೆ ಗೂಗಲ್ ಉತ್ತರವಲ್ಲ. ಗುರುಗಳು ಗುರಿತೋರುವ ಕೈ ಮರಗಳೇ ಹೊರತು, ಗುರಿಮುಟ್ಟುವ ದಾರಿ ವಿದ್ಯಾರ್ಥಿಗಳದ್ದೇ ಆಗಬೇಕಿದೆ. ‌ಸಾಹಿತ್ಯ ಓದು ಮತ್ತು ಬರವಣಿಗೆ ನಮ್ಮೆಲ್ಲ ವಿಕಾರಗಳನ್ನು ನಾಶಗೊಳಿಸುವ ಮೂಲವಾಗಿದೆ ಎಂದು ತಿಳಿಸಿದರು.

ಸಾಹಿತ್ಯ ವೇದಿಕೆಯ ಸಂಚಾಲಕಿ ಡಾ.ಎಂ.ಹಾಲಮ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ಮೋಹನ್ ಚಂದ್ರಗುತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ.ಜಿ.ಕೆ. ಪ್ರೇಮಾ ವಸುಂಧರ, ಡಿ. ನೀಲಪ್ಪ ಮತ್ತು ವಿದ್ಯಾರ್ಥಿ ಪದಾಧಿಕಾರಿಗಳಾದ ಕೆ.ಎ.ಪ್ರಗತಿ, ಕೋಗಳಿ ಸಂದೀಪ್ ಕುಮಾರ್,ಕೆ.ಟಿ. ಪ್ರಮೋದ್ ಕುಮಾರ್, ಆರ್.ಮೋನಿಕಾ, ಬಿ.ಭರತ್ ಉಪಸ್ಥಿತರಿದ್ದರು.ಕಮಲಾ ಹಂಪನಾರಿಗೆ ಶ್ರದ್ಧಾಂಜಲಿ:

ವಿದ್ಯಾರ್ಥಿಗಳು ಸ್ವರಚಿತ ಕವನಗಳನ್ನು ವಾಚಿಸಿದರು. ಇದೇ ವೇಳೆ ಶನಿವಾರ ನಿಧನರಾದ ಹಿರಿಯ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಅವರ ಸಾಹಿತ್ಯ ಸೇವೆಯನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.