ಸಾರಾಂಶ
ಭಟ್ಕಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ, ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪತ್ರಿಕೆಗಳನ್ನು ಓದುವುದರಿಂದ ಭಾಷೆ ಮತ್ತು ಜ್ಞಾನದ ವೃದ್ಧಿಯಾಗುತ್ತದೆ. ಪ್ರಜಾಪ್ರಭುತ್ವದ 4ನೇ ಅಂಗವಾಗಿರುವ ಪತ್ರಿಕಾರಂಗ ತನ್ನದೇ ಆದ ಜವಾಬ್ದಾರಿ ಹೊಂದಿದೆ. ಇತ್ತೀಚೆಗೆ ಪತ್ರಿಕೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಹೆಚ್ಚು ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಸ್ಥಳೀಯ ಮತ್ತು ದೇಶ, ವಿದೇಶಗಳ ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.ಉಪನ್ಯಾಸ ನೀಡಿದ ಪತ್ರಕರ್ತರ ಅರುಣಕುಮಾರ ಶಿರೂರು, ಪತ್ರಿಕೆಗಳು ಅನುಭವಗಳನ್ನು ಕಟ್ಟಿಕೊಡುತ್ತದೆ. ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲೂ ಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ವಿಶ್ವಾಸಾರ್ಹವಾಗಿದೆ. ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ಜನರು ನಂಬುತ್ತಾರೆ. ಪತ್ರಿಕೆಗಳನ್ನು ಹೆಚ್ಚು ಹೆಚ್ಚು ಓದುವಂತಾಗಬೇಕು. ಪತ್ರಿಕಾರಂಗದಲ್ಲೂ ಸಹ ಹಲವು ಬದಲಾವಣೆಗಳಾಗಿದ್ದು, ಸಾಕಷ್ಟು ಉದ್ಯೋಗವಕಾಶಗಳು ತೆರೆದುಕೊಂಡಿವೆ ಎಂದರು.
ಮುಖ್ಯ ಅತಿಥಿಯಾಗಿದ್ದ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ಶಾನಭಾಗ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳಲ್ಲಿ ಬರುವ ಸುದ್ದಿಗಳಿಂದ ಹಲವು ಸಮಸ್ಯೆ ಬಗೆಹರಿಸಲು ಸಾಧ್ಯವಾಗಿದೆ ಎಂದರು.ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಭ ಭಟ್ಟ ಮಾತನಾಡಿ, ಇಂದಿನ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲೂ ಪತ್ರಿಕೆಗಳು ದೃಢವಾಗಿದೆ. ಪತ್ರಿಕೆಗಳ ಸಂಖ್ಯೆ ಹೆಚ್ಚುತ್ತಿವೆ. ಇಂದಿಗೂ ಪತ್ರಿಕೆಗಳು ನಂಬಿಕೆಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿವೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ರಾಮಾ ಮೊಗೇರ ಅಳ್ವೆಕೋಡಿ ಮತ್ತು ಸಮಾಜ ಸೇವಕ ಮೌಲಾನಾ ಝುಬೇರ, ಪತ್ರಿಕಾ ವಿತರಕ ಫ್ರಾನ್ಸಿಸ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧನೆಗಾಗಿ ಸೃಜನ್ ಮನಮೋಹನ ನಾಯ್ಕ, ಕರಾಟೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಣವಿ ರಾಮಚಂದ್ರ ಕಿಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಮೋಹನ ನಾಯ್ಕ ಸ್ವಾಗತಿಸಿದರು. ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ಪತ್ರಕರ್ತ ರಾಮಚಂದ್ರ ಕಿಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರು, ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಪ್ರತಿನಿಧಿಗಳಿದ್ದರು.