ಕೇಂದ್ರದ ಅನುದಾನಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಸಿದ್ಧ:ಸಿಎಂ

| Published : Mar 28 2024, 12:58 AM IST

ಕೇಂದ್ರದ ಅನುದಾನಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಸಿದ್ಧ:ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಕ್ಕೆ ನೀಡಬೇಕಾದ ತೆರಿಗೆ ಅನ್ಯಾಯ, ಅನುದಾನ ಕಡಿತ ಕುರಿತು ಚರ್ಚಿಸಬೇಕಿದೆ. ಅನುದಾನ ನೀಡುವ ವಿಷಯದಲ್ಲಿ ಕೇಂದ್ರ ಮೌನವಹಿಸಿದೆ. ಬಹಿರಂಗ ಚರ್ಚೆಗೆ ಬಂದರೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಾಗಲಿದೆ

ಫೋಟೋ- 27ಎಂವೈಎಸ್ 4- ಮೈಸೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಮಾಜಿ ಮೇಯರ್ ಬಿ.ಎಲ್. ಬೈರಪ್ಪ ಮತ್ತು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಅವರಿಗೆ ಕಾಂಗ್ರೆಸ್ ಬಾವುಟ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

---

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರದ ಅನುದಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ನಡೆದ ಬಿಜೆಪಿ, ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಕ್ಕೆ ನೀಡಬೇಕಾದ ತೆರಿಗೆ ಅನ್ಯಾಯ, ಅನುದಾನ ಕಡಿತ ಕುರಿತು ಚರ್ಚಿಸಬೇಕಿದೆ. ಅನುದಾನ ನೀಡುವ ವಿಷಯದಲ್ಲಿ ಕೇಂದ್ರ ಮೌನವಹಿಸಿದೆ. ಬಹಿರಂಗ ಚರ್ಚೆಗೆ ಬಂದರೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಾಗಲಿದೆ ಎಂದರು.

ದೇವರ ಮೇಲೆ ನಂಬಿಕೆ ಇದ್ದರೆ ಪ್ರಮಾಣ ಮಾಡಲಿ ನೋಡೋಣ. ನನಗೆ ಆಣೆಯ ಮೇಲೆ ನಂಬಿಕೆ ಇಲ್ಲದಿದ್ದರೂ ಸತ್ಯ ಹೇಳುತ್ತಿದ್ದೇನೆ. ಗ್ಯಾರಂಟಿ ಯೋಜನೆಗೆ ಕೇಂದ್ರದಿಂದ ಒಂದು ಪೈಸೆ ಕೇಳಿಲ್ಲ. ನಮ್ಮ ಯೋಜನೆಗಳಿಗೆ 52,9000 ಕೋಟಿ ರೂ. ತೆಗೆದಿಡಲಾಗಿದೆ. ನಾವು ಗ್ಯಾರಂಟಿಗೆ ಹಣ ಮೀಸಲಿಟ್ಟು ಜಾರಿಗೊಳಿಸಿರುವ ಕಾರಣ ಅವರನ್ನು ಕೇಳಿಲ್ಲ ಎಂದು ಅವರು ಹೇಳಿದರು.

ಕೃಷ್ಣ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಕೊಡುತ್ತೇನೆ ಅಂತ ಹೇಳಿ ಒಂದು ರೂಪಾಯಿ ನೀಡಿಲ್ಲ. ಬರಗಾಲಕ್ಕೆ ಹಣ ಕೇಳಿ ಐದು ತಿಂಗಳಾದರೂ ಪರಿಹಾರದ ಮೊತ್ತ ನೀಡಿಲ್ಲ. ಎನ್.ಡಿ.ಆರ್.ಎಫ್ ನಿಂದ 18,171 ಕೋಟಿ ರೂ. ಹಣ ಬಿಡುಗಡೆಗೆ ಮೂರು ಬಾರಿ ಮನವಿ ಮಾಡಿದರೂ ಬಿಡುಗಡೆಗೊಳಿಸಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡಲಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಮೋದಿ ತಾಳಕ್ಕೆ ಕುಣಿದು ರಾಜ್ಯಕ್ಕೆ ಮಹಾ ದ್ರೋಹ ಬಗೆದಿದ್ದಾರೆ. ಒಂದು ತಿಂಗಳಲ್ಲಿ ಪರಿಹಾರ ಕೊಡಬೇಕಾದರೂ ಅನ್ಯಾಯ ಮಾಡಿರುವ ಕಾರಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದರು.

ಹೆಚ್ಚು ಸುಳ್ಳು ಹೇಳುವ ಪ್ರಧಾನಿ ಬಂದಿದ್ದಾರೆ. ಅದುವೇ ನರೇಂದ್ರಮೋದಿ. ಸುಳ್ಳೇ ಬಿಜೆಪಿಯವರ ಮನೆ ದೇವರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಜಾತಿ, ಧರ್ಮದ ಆಧಾರದ ಮೇಲೆ ಬಡವರನ್ನು ಕಡೆಗಣಿಸಿಲ್ಲ. ಐದು ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಿದೆ. ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಆದರೆ, ಅವರ ಪಕ್ಷದ ನಾಯಕರು ಬುರ್ಕಾ, ಶಿಲುಬೆ ಹಾಕಿಕೊಂಡು ಮನೆಗೆ ಬರಬೇಡಿ, ಟೋಪಿ ಹಾಕಬೇಡಿ ಅಂತಾರೆ ಎಂದು ಲೇವಡಿಯಾಡಿದರು.

ಮೋದಿ ಹೇಳಿದ ಅಚ್ಚೇ ದಿನಾ ಆಯೇಂಗಾ ಎಲ್ಲಿಗೆ ಬಂದಿತು? ಪೆಟ್ರೋಲ್ ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಐದು ಟ್ರಿಲಿಯನ್ ಅರ್ಥಿಕತೆ ಮಾಡುವುದಾಗಿ ಹೇಳಿ, ಮಾಡಲಿಲ್ಲ. ನುಡಿದಂತೆ ನಡೆಯದ ಮೋದಿ ಸರ್ಕಾರವನ್ನು ಸೋಲಿಸಬೇಕು. ಆದ್ದರಿಂದ ನಾವು ಬಿಜೆಪಿಯವರಂತೆ ಸುಳ್ಳು ಹೇಳದೆ ಮಾಡಿರುವ ಕೆಲಸಗಳ ಸತ್ಯವನ್ನು ಮನೆ ಮನೆಗೆ ತಿಳಿಸಬೇಕು ಎಂದು ಅವರು ಹೇಳಿದರು.

2013ರಲ್ಲಿ ಸರ್ಕಾರ ಬಂದಾಗ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೆವು. ಈಗ ನುಡಿದಂತೆ ನಡೆದು ಕೊಟ್ಟ ವಚನ ಈಡೇರಿಸಿದ್ದೇವೆ ಎಂಬುದನ್ನು ಮರೆಯಬಾರದು. ನಮ್ಮ ಜನಪ್ರಿಯತೆ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿವೆ.

ಜೆಡಿಎಸ್ಈಗ ಜಾತ್ಯಾತೀತವಾಗಿಲ್ಲ. ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈಗ ಮೋದಿ ಜೊತೆ ಕೈ ಜೋಡಿಸಿದ್ದಾರೆ. ಇದೊಂದು ಅನುಕೂಲಸಿಂಧು ರಾಜಕಾರಣವಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಅಪಪ್ರಚಾರಗಳಿಗೆ ಕಿವಿಗೊಡದೆ ಕಾಂಗ್ರೆಸ್ ನ ಸಭ್ಯ ವ್ಯಕ್ತಿಯಾದ ಎಂ. ಲಕ್ಷ್ಮಣ್ಗೆಲ್ಲಿಸಿ, ಇಲ್ಲವೇ ಸಂಸತ್ ನಲ್ಲಿ ಸುಮ್ಮನೆ ಕುಳಿತು ಬರುವ ವ್ಯಕ್ತಿ ಬೇಕಾ ಎಂದು ನೀವೇ ನಿರ್ಧರಿಸಿ.

ಮೈಸೂರು- ಬೆಂಗಳೂರು ಹೆದ್ದಾರಿ ಮಾಡಿದ್ದು ನಾವು, ಜಿಲ್ಲಾಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದ್ದು ನಾವು, ಆದರೆ ಪ್ರತಾಪ ಸಿಂಹ ನಾನು ಮಾಡಿದೆ ಅಂತ ಹೇಳುತ್ತಿದ್ದಾರೆ. ಇದು ಬರೀ ಪ್ರಲಾಪ. ನಮ್ಮ ಅವಧಿಯಲ್ಲಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡವನ್ನು ಪುನರ್ ನಿರ್ಮಾಣಕ್ಕೆ ತೀರ್ಮಾನಿಸಿದ್ದೇವೆ ಎಂದರು.