ಈಶ್ವರಪ್ಪಗೆ ಉಡುಪಿಯಲ್ಲಿ ಮಾನಸಿಕ ಚಿಕಿತ್ಸೆಗೆ ಸಿದ್ಧ: ಜಿಲ್ಲಾ ಕಾಂಗ್ರೆಸ್

| Published : Feb 11 2024, 01:48 AM IST

ಈಶ್ವರಪ್ಪಗೆ ಉಡುಪಿಯಲ್ಲಿ ಮಾನಸಿಕ ಚಿಕಿತ್ಸೆಗೆ ಸಿದ್ಧ: ಜಿಲ್ಲಾ ಕಾಂಗ್ರೆಸ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಪದೇಪದೆ ಅನಾಗರಿಕ ಶಬ್ದಗಳನ್ನು ಪ್ರಯೋಗಿಸಿ ನಿಂದಿಸುವ ಈಶ್ವರಪ್ಪ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ ಮತ್ತು ವಕ್ತಾರ ಭಾಸ್ಕರ ರಾವ್ ಕಿದಿಯೂರು ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಾಜಿ ಸಚಿವ ಈಶ್ವರಪ್ಪ ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು, ಬಿಜೆಪಿಯವರು ತಡಮಾಡದೆ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುವುದು ಸೂಕ್ತ. ಒಂದು ವೇಳೆ ಶಿವಮೊಗ್ಗದಲ್ಲಿ ಆಸ್ಪತ್ರೆ ಇಲ್ಲದೆ ಹೋದಲ್ಲಿ ನಮ್ಮ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಾವು ಬದ್ಧರಿದ್ದೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ ಮತ್ತು ವಕ್ತಾರ ಭಾಸ್ಕರ ರಾವ್ ಕಿದಿಯೂರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ಪದೇಪದೆ ಅನಾಗರಿಕ ಶಬ್ದಗಳನ್ನು ಪ್ರಯೋಗಿಸಿ ನಿಂದಿಸುವ ಈಶ್ವರಪ್ಪ ಅವರು, ''''ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ ಕುಲಕರ್ಣಿ ಅವರನ್ನು ಗುಂಡಿಕ್ಕಿ ಕೊಲ್ಲಬೇಕು'''' ಎನ್ನುವ ಮೂಲಕ ಭಯೋತ್ಪಾದನೆಗೆ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಜ್ಯದ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ತಂದೆಯ ಹೊಟ್ಟೆಯಲ್ಲಿ ಹುಟ್ಟಿದ ಕೆಟ್ಟ ಹುಳ ಎಂದು ಕರೆದಿದ್ದಾರೆ. ಅವರ ಈ ಹೇಳಿಕೆಗಳು ಈಶ್ವರಪ್ಪ ಅವರ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಬಿಜೆಪಿಯವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ಅವರನ್ನು ಕಡೆಗಣಿಸಿರುವುದೇ ಈಶ್ವರಪ್ಪ ಅವರ ಈ ಮಾನಸಿಕ ತೊಳಲಾಟಕ್ಕೆ ಕಾರಣ. ಆದ್ದರಿಂದ ಅವರಿಗೆ ತಕ್ಷಣ ಚಿಕಿತ್ಸೆ ಕೊಡಿಸಿ ಎಂದು ಉಡುಪಿ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.