ಸಾರಾಂಶ
ಹುಮನಾಬಾದ್ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಯಾರಿಂದಲೂ ಹಣ ವಸೂಲಿ ದಂಧೆ ಮಾಡಿಲ್ಲ ಎಂದು ವೀರಭದ್ರೇಶ್ವರರ ಆಣೆ ಮಾಡಲಿ ನಂತರ ನನ್ನ ಪರಿವಾರದ ಸದಸ್ಯರ ಸಮ್ಮುಖದಲ್ಲಿ ನಾನು ಆಣೆ ಪ್ರಮಾಣ ಮಾಡುತ್ತೇನೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಸವಾಲು ಸ್ವೀಕರಿಸಿದರು.
ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಮನಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕ ಹಾಗೂ ಒಂದು ಬಾರಿ ಸಚಿವರಾಗಿ ಅಧಿಕಾರ ನಿರ್ವಹಣೆ ಮಾಡಿದ್ದಾರೆ. ಹುಮನಾಬಾದ್ ಕ್ಷೇತ್ರದಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಪ್ರಭುತ್ವ ಅಸ್ತಿತ್ವದಲ್ಲಿತ್ತು. ಆದರೆ ಕಳೆದ ಒಂದುವರೇ ವರ್ಷದಲ್ಲಿ ರಾಜಪ್ರಭುತ್ವ ಬುಡಸಮೇತ ಕಿತ್ತೇಸೆದು ಮತ್ತೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿದೆ.ಕ್ಷೇತ್ರದ ಮಹಾಜನತೆ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಯಾವುದೇ ಒಂದು ಆರೋಪ ಮಾಡುವ ಸಂದರ್ಭದಲ್ಲಿ ಮಾಜಿ ಸಚಿವರು ತಮ್ಮ ಕಾರ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಮತ್ತೊಬ್ಬರ ಬಗ್ಗೆ ಆರೋಪಗಳು ಮಾಡಲಿ ಎಂದು ಎಚ್ಚರಿಕೆ ನೀಡಿದರು.
ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಕಾರ್ಖಾನೆಗಳಿಂದ ಹಣ ವಸೂಲಿ ದಂಧೆ ನಾಗಭೂಷಣ ಪಾಟೀಲ್ ಪರಿವಾರದವರು ಮಾಡಿಲ್ಲ. ಆದರೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಪರಿವಾರದ ಸದಸ್ಯರು ಕಾರ್ಖಾನೆಗಳ ಮಾಲೀಕರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಅವರಿಂದ ಹಣ ವಸೂಲಿ ಮಾಡುವ ಮೂಲಕ ತಮ್ಮ ಮಗಳ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮಾಡಿದ್ದಾರೆ ಎಂದು ಆರೋಪಿಸಿದರು. ನಾಗಭೂಷಣ ಪಾಟೀಲ್, ಬಸವರಾಜ ಪಾಟೀಲ್ ಹಾಗೂ ವೀರಣ್ಣ ಪಾಟೀಲ್ ಪರಿವಾರಕ್ಕೆ ಸಂಬಂಧಿಸಿದ ಎಲ್ಲ ಆಸ್ತಿಗಳ ವಿವರವನ್ನು ಪರಿಶೀಲನೆ ಮಾಡಲು ಜಿಲ್ಲಾಧಿಕಾರಿಗೆ ವಹಿಸೋಣ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಹುಮನಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಅಧಿಕಾರ ನಿರ್ವಹಣೆ ಮಾಡಿದ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ತಿರಂಗಾ ಯಾತ್ರೆಗೆ ಅಗೌರವ ತೋರುವಂತಹ ಹೇಳಿಕೆ ನೀಡಿರಿವುದು ಮಾಜಿ ಸಚಿವರಿಗೆ ಶೋಭೆ ತರುವುದಿಲ್ಲ. ಹೀಗಾಗಿ ಮಾಜಿ ಸಚಿವರೇ ಗಾಜಿನ ಮನೆಯ ಮೇಲೆ ಕುಳಿತು ಮತ್ತೋಬ್ಬರ ಮನೆಗೆ ಕಲ್ಲು ಎಸೆಯಬೇಡಿ ಎಂದು ಸಲಹೆ ನೀಡಿದರು.
ಈ ವೇಳೆ ವಿಶ್ವನಾಥ ಪಾಟೀಲ್ ಮಾಡಗೂಳ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಪಾಟೀಲ್ , ಬಿಜೆಪಿ ಮಂಡಲ್ ಅಧ್ಯಕ್ಷ ಅನಿಲ್ ಪಸರಗಿ, ನಾಗಭೂಷಣ ಸಂಗಮ್, ಗೋಪಾಲಕೃಷ್ಣ ಮೋಹಾಳೆ ಇದ್ದರು.