ಐಎಎಸ್‌ ಮಾಡಲು ಇಚ್ಛಿಸಿದರೆ ಖರ್ಚು ಭರಿಸಲು ಸಿದ್ಧ: ಶಾಸಕಿ ನಯನಾ ಮೋಟಮ್ಮ

| Published : Apr 10 2025, 01:02 AM IST

ಐಎಎಸ್‌ ಮಾಡಲು ಇಚ್ಛಿಸಿದರೆ ಖರ್ಚು ಭರಿಸಲು ಸಿದ್ಧ: ಶಾಸಕಿ ನಯನಾ ಮೋಟಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ವೈದ್ಯರು, ಇಂಜಿನಿಯರ್ ಗಳು ಆಗಬೇಕು. ಪರಿಶಿಷ್ಟ ಜಾತಿ, ವರ್ಗದ ಮಕ್ಕಳು ಐಎಎಸ್ ಮಾಡಲು ಇಚ್ಛಿಸಿದರೆ ಅವರ ಒಂದು ವರ್ಷದ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದ್ದಾರೆ.

ಮಕ್ಕಳು ಬರೆದ ಘಮಲು ಪುಸ್ತಕ ಲೋಕಾರ್ಪಣೆ, ಯಲಗುಡಿಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ವೈದ್ಯರು, ಇಂಜಿನಿಯರ್ ಗಳು ಆಗಬೇಕು. ಪರಿಶಿಷ್ಟ ಜಾತಿ, ವರ್ಗದ ಮಕ್ಕಳು ಐಎಎಸ್ ಮಾಡಲು ಇಚ್ಛಿಸಿದರೆ ಅವರ ಒಂದು ವರ್ಷದ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಪ್ರಾರಂಭಿಸ ಲಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಯ ಅಕ್ಷರಧಾಮ ಕಿಂಡರ್ ಗಾರ್ಡನ್ ಸ್ಕೂಲ್ ಉದ್ಘಾಟನೆ, ಮಕ್ಕಳು ಬರೆದ ಘಮಲು ಪುಸ್ತಕ ಲೋಕಾರ್ಪಣೆ, ಮಕ್ಕಳಿಂದ ಕಾಫಿ ನಮ್ಮನೆ ದೇವ್ರು ನಾಟಕ ಪ್ರದರ್ಶನ ಮತ್ತು ಶಾಲೆ ಹೊರಗೋಡೆಗೆ ವಿನೂತನ ಶೈಲಿ ಬರಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಲಗುಡಿಗೆ ಶಾಲೆ ಭೌತಿಕ ಪ್ರಗತಿ ಜೊತೆ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ. ಇಲ್ಲಿನ ಮಕ್ಕಳು 5ನೆಯ ತರಗತಿ ನಂತರ ಪರೀಕ್ಷೆ ಬರೆದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶಕ್ಕೆ ಅರ್ಹತೆ ಪಡೆದು ದಾಖಲಾಗುತ್ತಿರುವುದು ಸಂತೋಷದ ಸಂಗತಿ ಯಾಗಿದೆ. ಆದರೆ ಆ ನಂತರ ಶಾಲೆ, ಕಾಲೇಜಿನಿಂದ ಹೊರಗುಳಿಯದೆ ಶಿಕ್ಷಣ ಮುಂದುವರಿಸಬೇಕು ಎಂದು ಹೇಳಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕೆ.ಎಚ್‌. ಗೀತಾ ಮಾತನಾಡಿ, ಶಾಲೆಯಲ್ಲಿ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ ಸಂಸ್ಥೆ ಕಲಿ - ಕಲಿಸು ಯೋಜನೆಯಡಿ ಕಾಫಿ ಕುರಿತಂತೆ ಕಲಾ ಅಂತರ್ಗತ ಪ್ರಯೋಗ ಕೈಗೊಂಡಿದ್ದು, ಶಾಲೆ ಮಕ್ಕಳಿಗೆ ಚಿಕ್ಕ ಮಗಳೂರಿನ ಪ್ರಮುಖ ಬೆಳೆ ಕಾಫಿಯ ಇತಿಹಾಸ, ಕಾಫಿ ಭಾರತಕ್ಕೆ ನಡೆದು ಬಂದ ಬಗೆ, ಕಾಫಿ ಬೀಜದಿಂದ ಬಟ್ಟಲಿಗೆ ಸೇರುವ ಕ್ರಮ, ಕಾಫಿ ಜೊತೆ ಒಡನಾಟ ಹೊಂದಿರುವ ಜನರ ಕಥೆಗಳ ಕುರಿತು ತಿಳಿಸಿ ಕೊಡುವ ಪ್ರಯತ್ನ ಮಾಡಲಾಗಿತ್ತು. ಘಮಲು ಪುಸ್ತಕ ಅದರ ಫಲ ಶ್ರುತಿಯಾಗಿದೆ ಎಂದರು.

ಘಮಲು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಶಾಲೆಯಲ್ಲಿ ಕಾಫಿ ಸಂಸ್ಕೃತಿ ಕುರಿತು ಅಧ್ಯಯನ ನಡೆಸಿದ್ದು ವಿಶೇಷ. ಕಾಫಿ ಮಂಡಳಿ ನೂರು ವರ್ಷಗಳ ಸಂಭ್ರಮಾಚರಣೆ ಸಂದರ್ಭದಲ್ಲಿ ಮಕ್ಕಳ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಘಮಲು ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಚಿಕ್ಕಮಗಳೂರಿನ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಉತ್ತಮ ಆರೋಗ್ಯದ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸಲು ಕನಸು ಕಾಣಬೇಕು. ಆ ಕನಸು ಸಾಕಾರಗೊಳಿಸಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕಡೆ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸಿ.ಕೆ. ಸುಬ್ರಾಯ, ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್, ಮಾಡೆಲ್ ಸ್ಕೂಲ್ ನ ಸಂಸ್ಥಾಪಕ ಎಂ.ಎನ್‌. ಷಡಕ್ಷರಿ, ಡಯಟ್‌ನ ಪ್ರಾಂಶುಪಾಲರಾದ ಸುನೀತಾ, ನಲಿಕಲಿ ರಾಜ್ಯ ಪ್ರಧಾನ ಸಂಪನ್ಮೂಲ ವ್ಯಕ್ತಿ ಆರ್. ಡಿ. ರವೀಂದ್ರ, ಸ್ಲೇಟು ಬಳಪ ಫೌಂಡೇಶನ್‌ನ ಅಧ್ಯಕ್ಷ ಭಾರ್ಗವಿ ಹೇಮಂತ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಲಕ್ಷ್ಮೀ ನಾಗರಾಜ್, ಯಲಗುಡಿಗೆಯ ಮುಖಂಡರಾದ ಹೊನ್ನಪ್ಪ, ನಾಗರಾಜು, ಸತ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಧ್ರುವ ಕುಮಾರ್, ಸದಸ್ಯರಾದ ತ್ರಿಮೂರ್ತಿ, ಪದ್ಮ ಪ್ರಕಾಶ್, ಗುರುವಪ್ಪ, ರಾಮಪ್ಪ , ಶಾಲೆ ಮುಖ್ಯ ಶಿಕ್ಷಕ ಪಿ. ಮಂಜಪ್ಪ, ರೇವಣ್ಣ ಯಲಗುಡಿಗೆ ಉಪಸ್ಥಿತರಿದ್ದರು. 9 ಕೆಸಿಕೆಎಂ 3ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‌ ಘಮಲು ಪುಸ್ತಕ ಲೋಕಾರ್ಪಣೆ ಮಾಡಿದರು. ಶಾಸಕಿ ನಯನಾ ಮೋಟಮ್ಮ, ಡಾ.ಜೆ.ಪಿ. ಕೃಷ್ಣೇಗೌಡ, ಡಾ. ಸುಬ್ರಾಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕೆ.ಎಚ್‌. ಗೀತಾ ಇದ್ದರು.