ಕೇಂದ್ರ ಅನುಮತಿ ಕೊಟ್ಟರೆ ಮಹದಾಯಿ ಯೋಜನೆ ಪೂರ್ಣಗೊಳಿಸಲು ಸಿದ್ಧ-ಸಚಿವ ಎಚ್ಕೆಪಿ

| Published : Jul 22 2025, 12:01 AM IST

ಕೇಂದ್ರ ಅನುಮತಿ ಕೊಟ್ಟರೆ ಮಹದಾಯಿ ಯೋಜನೆ ಪೂರ್ಣಗೊಳಿಸಲು ಸಿದ್ಧ-ಸಚಿವ ಎಚ್ಕೆಪಿ
Share this Article
  • FB
  • TW
  • Linkdin
  • Email

ಸಾರಾಂಶ

45 ವರ್ಷದ ನಂತರ ರೈತನ ವೀರಗಲ್ಲಿನ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದರಿಂದ ರೈತರಿಗೆ ಗೌರವ ಹೆಚ್ಚಾಗಿದೆ. ಮಹದಾಯಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕೇಂದ್ರ ಸರ್ಕಾರ ಒಂದಿಲ್ಲೊಂದು ರೀತಿಯಿಂದ ಅಡೆತಡೆ ಮಾಡುತ್ತಿದೆ. ಸಹಕಾರ ಸಿಗುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಸಿ.ಸಿ. ಪಾಟೀಲರು ಕೇಂದ್ರದಿಂದ ಅನುಮತಿ ಕೊಡಿಸಿದರೆ, ನಮ್ಮ ಸರ್ಕಾರ ಈಗಲೇ ಕಾಮಗಾರಿ ಪ್ರಾರಂಭಿಸುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನರಗುಂದ: 45 ವರ್ಷದ ನಂತರ ರೈತನ ವೀರಗಲ್ಲಿನ ಸ್ಥಳದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜೆ ನಡೆದಿದ್ದರಿಂದ ರೈತರಿಗೆ ಗೌರವ ಹೆಚ್ಚಾಗಿದೆ. ಮಹದಾಯಿ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕೇಂದ್ರ ಸರ್ಕಾರ ಒಂದಿಲ್ಲೊಂದು ರೀತಿಯಿಂದ ಅಡೆತಡೆ ಮಾಡುತ್ತಿದೆ. ಸಹಕಾರ ಸಿಗುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಸಿ.ಸಿ. ಪಾಟೀಲರು ಕೇಂದ್ರದಿಂದ ಅನುಮತಿ ಕೊಡಿಸಿದರೆ, ನಮ್ಮ ಸರ್ಕಾರ ಈಗಲೇ ಕಾಮಗಾರಿ ಪ್ರಾರಂಭಿಸುತ್ತದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ಇಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ವೀರಗಲ್ಲಿನ ಪುತ್ಥಳಿಯ ಸ್ಮಾರಕ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಹದಾಯಿ ಯೋಜನೆಗೆ ಗೋವಾ ಸರ್ಕಾರದ ಕಿರಿಕಿರಿ ಇದೆ, ವನ್ಯಜೀವಿ ಇಲಾಖೆ ಅನುಮತಿ ಬೇಕಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಕೂಡಲೇ ಟೆಂಡರ್‌ ಪ್ರಕ್ರಿಯೆಯಲ್ಲಿರುವ ಕಾಮಗಾರಿಯನ್ನು ಪ್ರಾರಂಭಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಮಹದಾಯಿ ಯೋಜನೆಯನ್ನು ಪೂರ್ಣಗೊಳಿಸಲು ಆತುರದಲ್ಲಿದೆ. ಪ್ರಧಾನಿ ಮೋದಿ ಅವರ ಸಹಕಾರ ಬೇಕಿದೆಯಷ್ಟೇ ಎಂದರು.

ದಿ. ವೀರಪ್ಪ ಬಸಪ್ಪ ಕಡ್ಲಿಕೊಪ್ಪ ವೀರಗಲ್ಲಿನ ಸ್ಥಳದಲ್ಲಿ ಪುತ್ಥಳಿ ನಿರ್ಮಾಣದ ಬ್ಲೂಪ್ರಿಂಟ್ ಸಿದ್ಧಗೊಳಿಸಲಾಗಿದೆ. 10 ತಿಂಗಳೊಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ. ವೀರಗಲ್ಲಿನ ಸ್ಥಳವು ಖಾಸಗಿ ವ್ಯಕ್ತಿಗಳದ್ದಾಗಿದ್ದು, ಆ ನಾಲ್ವರಲ್ಲಿ ಸಲೀಂಅಹ್ಮದ್ ಮೇಗಲಮನಿ ಹಾಗೂ ದೇಸಾಯಿಗೌಡ ಪಾಟೀಲ ಅವರುಗಳು ಪುತ್ಥಳಿ ಸ್ಥಾಪನೆಗೆ ಸ್ವ-ಇಚ್ಚೆಯಿಂದ ಭೂದಾನ ಮಾಡಿದ್ದಾರೆ. ಅವರಿಬ್ಬರ ಹೆಸರು ಇತಿಹಾಸದಲ್ಲಿ ಉಳಿಯಲಿದೆ ಎಂದರು.ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹುತಾತ್ಮ ರೈತನ ವೀರಗಲ್ಲು ಸ್ಥಳದಲ್ಲಿ ಪುತ್ಥಳಿ ಆಗಬೇಕಾಗಿತ್ತು, ಅದು ಈಗ ನೆರವೇರಿದೆ. ಎಲ್ಲರಿಗೂ ಖುಷಿ ಹಾಗೂ ಸಮಾಧಾನ ತಂದಿದೆ ಎಂದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕಳಸಾ ಬಂಡೂರಿಗೆ ಅನುಮತಿ ಕೊಡಿಸುವ ಕೆಲಸ ಬಿಜೆಪಿಯವರದು, ಕೆಲಸ ಪ್ರಾರಂಭ ನಮ್ಮದು. ಕೇಂದ್ರದಿಂದ ಅನುದಾನ ಬೇಡ, ಅನುಮತಿ ಕೊಟ್ಟರೆ, ಅನುದಾನ ಕೊಟ್ಟಂತೆ ಎಂದು ಶಾಸಕ ಸಿ.ಸಿ. ಪಾಟೀಲರಿಗೆ ಹೇಳಿದರು.ಆಳಂದ ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುತ್ಥಳಿ ಸ್ಥಾಪನೆಗೆ ಭೂದಾನ ಮಾಡಿದ ದಾನಿಗಳನ್ನು ಭೂಮಿಪೂಜೆ ಸ್ಥಳದಲ್ಲಿಯೇ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಬಿ.ಬಿ. ಐನಾಪುರ, ವಸಂತ ಜೋಗಣ್ಣವರ, ಎಸ್. ಆರ್. ಪಾಟೀಲ, ರಾಜುಗೌಡ ಕೆಂಚನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ರಾಜು ಕಲಾಲ, ವಿವೇಕ ಯಾವಗಲ್ಲ, ಉಮೇಶಗೌಡ ಪಾಟೀಲ, ಗುರುಪಾದಪ್ಪ ಕುರಹಟ್ಟಿ, ಶಂಕರ ಅಂಬಲಿ, ಎಸ್.ಎಸ್. ಪಾಟೀಲ, ಬಸವರಾಜ ಸಾಬಳೆ, ವೀರಣ್ಣ ಸೊಪ್ಪಿನ, ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ತಹಸೀಲ್ದಾರ್‌, ಚನ್ನು ನಂದಿ, ನಭಿಸಾಬ ಕಿಲ್ಲೇದಾರ, ರಾಘವೇಂದ್ರ ಗುಜಮಾಗಡಿ ಸೇರಿದಂತೆ ಮುಂತಾದವರು ಇದ್ದರು.