ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಟಕ್ಕೆ ಸಜ್ಜಾಗಿ: ರಾಜೇಶ್ವರಿ ಹೆಗಡೆ

| Published : Jan 25 2024, 02:03 AM IST

ಸಾರಾಂಶ

ದಾವಣಗೆರೆ ರಾ.ಲ. ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸತ್ರ ನ್ಯಾಯಾಧೀಶ ರಾದ ರಾಜೇಶ್ವರಿ ಎನ್.ಹೆಗಡೆ ಸಾಮಾಜಿಕ ಜಾಡ್ಯಗಳ ವಿರುದ್ಧ ಯುವ ಜನತೆ ಹೋರಾಟ ನಡೆಸಲು ಕರೆ ನೀಡಿದರು.

Ready to fight against social scourge : Rajeshwari Hegde

ಗಣರಾಜ್ಯೋತ್ಸವ ಹಿನ್ನೆಲೆ ಕಾನೂನು ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ನ್ಯಾ.ರಾಜೇಶ್ವರಿ ಹೆಗಡೆ ಕರೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಗತ್ತು ಸಾಕಷ್ಟು ಮುಂದುವರಿದಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಮುಂದಡಿ ಇಟ್ಟರೂ ಇಂದಿಗೂ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳು ಸಾಮಾಜಿಕ ಜಾಡ್ಯವಾಗಿ ಕಾಡುತ್ತಿದ್ದು, ಇಂತಹ ಪಿಡುಗುಗಳ ವಿರುದ್ಧ ಯುವ ಜನತೆ ಹೋರಾಟ ನಡೆಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಕರೆ ನೀಡಿದರು.

ನಗರದ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಪಿಡುಗುಗಳ ವಿರುದ್ಧ ಯುವ ಜನತೆ ಜಾಗೃತರಾಗಿ ಹೋರಾಟ ನಡೆಸಬೇಕಾದ ಅವಶ್ಯಕತೆ ಇದೆ ಎಂದರು.

ಮಾದಕ ವಸ್ತುಗಳ ಸೇವನೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಹಲವಾರು ಸಾಮಾಜಿಕ ಪಿಡುಗುಗಳು ಸಮಾಜವನ್ನು ಕಾಡುತ್ತಿವೆ. ಇವುಗಳ ನಿರ್ಮೂಲನೆ ಗಾಗಿ ಅನೇಕ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಈ ಕಾನೂನುಗಳನ್ನು ಸಮರ್ಪಕ ಕಾರ್ಯ ಚಟುವಟಿಕೆ ಕೈಗೊಳ್ಳುವ ಮೂಲಕ ಸಾಮಾಜಿಕ ಪಿಡುಗುಗಳನ್ನು ನಿರ್ಮೂ ಲನೆ ಮಾಡಬಹುದು. ಇದಕ್ಕೆ ವಿಶೇಷವಾಗಿ ಯುವ ಜನತೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಗ್ರಂಥಾಲಯಗಳೇ ಹಿಂದೆಲ್ಲಾ ನಮಗೆ ಜ್ಞಾನದ ಕಣಜವಾಗಿದ್ದವು. ಯಾವುದೇ ಮಾಹಿತಿ, ಅಂಕಿ ಅಂಶ, ಜ್ಞಾನ ಬೇಕೆಂದರೂ ಗ್ರಂಥಾಲಯ ಅಥವಾ ಅದರ ಬಗ್ಗೆ ಆಳ ಅರಿವು ಇದ್ದ ವರ ಬಳಿ ಹೋಗಿ ಕೇಳಿ ತಿಳಿಯಬೇಕಿತ್ತು. ಆದರೆ, ಇಂದು ತಂತ್ರಜ್ಞಾನವು ಸಾಕಷ್ಟು ಮುಂದುವರಿದಿದೆ. ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿ ಲಭಿಸುವ ಕಾಲ ಇದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಇಷ್ಟಾದರೂ ಯುವ ಪೀಳಿಗೆಗೆ ಹೋರಾಟಕ್ಕೆ, ಜನಪರ ಕಾರ್ಯದಿಂದ ಹಿಂದೆ ಸರಿಯುತ್ತಿರುವುದು ವಿಷಾದದ ಸಂಗತಿ ಎಂದು ಅವರು ಹೇಳಿದರು.

ಕಾನೂನು ಬಾಹಿರ ಚಟುವಟಿಕೆಗಳು, ಅಪರಾಧ ಪ್ರಕರಣಗಳು, ಯಾವುದೇ ಕಾನೂನು ಬಾಹಿರ ಕೃತ್ಯಗಳು ಕಂಡು ಬಂದರೆ, ಮಾಹಿತಿ ಸಿಕ್ಕರೆ ತಕ್ಷಣವೇ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ತಿಳಿಸಬೇಕಾದ್ದು ದೇಶದ ಜವಾಬ್ಧಾರಿಯುತ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ, ಯುವ ಜನರು ಗಮನ ಹರಿಸಬೇಕು ಎಂದವರು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಜಿ.ಸಲಗರೆ ಮಾತನಾಡಿ, ಕಾನೂನು ಪದವಿ ಓದಿದ ನಂತರ ನೀವು ನಿರ್ವಹಿಸುವ ಜವಾಬ್ದಾರಿ ಅತ್ಯಂತ ಗೌರವಯುತವಾದದ್ದು, ಈ ಮೂಲಕ ಸಮಾಜದಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸ್ವೇಚ್ಛಾಚಾರ ತಡೆಗಟ್ಟುವ ಹೊಣೆಗಾರಿಕೆಯನ್ನು ಹೊರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಬದಲಾವಣೆ ಯಾರೋ ಬಂದು ಮಾಡುವುದಲ್ಲ. ನಮ್ಮಿಂದಲೇ ಅದು ಆರಂಭವಾಗಬೇಕೆಂಬ ಅರಿವಿರಲಿ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ ಮಾತನಾಡಿ, ಗಣರಾಜ್ಯದ 75ನೇ ವರ್ಷದ ಸಂಭ್ರಮದಲ್ಲಿ ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತವಿದೆ. ಇಂತಹ ಪ್ರಜಾಪ್ರಭುತ್ವದ ರಾಷ್ಟ್ರವನ್ನು ಜಗತ್ತಿನ ಬೇರೆಲ್ಲಿಯೂ ಕಾಣುವುದಕ್ಕೆ ಸಾಧ್ಯವಿಲ್ಲ. ನಾವು ರಚನಾತ್ಮಕ, ಪ್ರಾಯೋಗಿಕ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇವುಗಳ ಸದ್ಭಳಕೆ ಜೊತೆಗೆ ರಕ್ಷಣೆಯ ಹೊಣೆಯೂ ನಮ್ಮೆಲ್ಲರ ಮೇಲೆಯೂ ಇದೆ ಎಂಬುದನ್ನು ನಾವೆಲ್ಲರೂ ಅರಿಯಬೇಕು ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಡಾ.ಜಿ.ಎಸ್‌.ಯತೀಶ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಟಿ.ವಿದ್ಯಾಧರ ವೇದವರ್ಮ, ಟಿ.ಸಿ.ಪಂಕಜ, ಎಚ್.ಆರ್.ಪವನ್‌, ಬಿ.ಪಿ.ಬಸವನಗೌಡ, ಬೋಧಕ-ಬೋಧಕೇತರ ಸಿಬ್ಬಂದಿ, ಕಾನೂನು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು. ಕಾಲೇಜಿಂದ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು 20 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು, ನಗರದ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಬಿಎಸ್ಸೆನ್ನೆಲ್ ಕಚೇರಿ ವೃತ್ತ, ಹಳೆ ಪಿಬಿ ರಸ್ತೆ, ಪಾಲಿಕೆ, ಅಕ್ಕ ಮಹಾದೇವಿ ರಸ್ತೆ ಮಾರ್ಗವಾಗಿ ರಾ.ಲ.ಕಾನೂನು ಕಾಲೇಜಿನವರೆಗೆ ಜಾಥಾದಲ್ಲಿ ಸಾಗಿದರು. ನಂತರ ಕಾನೂನು ಕಾಲೇಜು ತಲುಪಿದ ಜಾಥಾ ಸಮಾಪನೆಗೊಂಡಿತು.

...................

ಕ್ಯಾಪ್ಷನ್: 24ಕೆಡಿವಿಜಿ2: ದಾವಣಗೆರೆ ರಾ.ಲ.ಕಾನೂನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಜಾಥಾಗೆ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಚಾಲನೆ ನೀಡಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜಿ.ಸಲಗರೆ ಇದ್ದರು.