ಕ್ರಿಕೆಟ್ ಆಟಗಾರರ ಕನಸಾಗಿರುವ ಕ್ರಿಕೆಟ್ ಕ್ರೀಡಾಂಗಣವನ್ನು ನಗರದಲ್ಲಿ ಸ್ಥಾಪಿಸಲು ಹೋರಾಟ ಮಾಡಲು ಸಿದ್ಧ ಎಂದು ಯುವ ಧುರೀಣರು ಹಾಗೂ ಸಿದ್ಧಸಿರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚೇರಮನ್ ರಾಮನಗೌಡ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕ್ರಿಕೆಟ್ ಆಟಗಾರರ ಕನಸಾಗಿರುವ ಕ್ರಿಕೆಟ್ ಕ್ರೀಡಾಂಗಣವನ್ನು ನಗರದಲ್ಲಿ ಸ್ಥಾಪಿಸಲು ಹೋರಾಟ ಮಾಡಲು ಸಿದ್ಧ ಎಂದು ಯುವ ಧುರೀಣರು ಹಾಗೂ ಸಿದ್ಧಸಿರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚೇರಮನ್ ರಾಮನಗೌಡ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.ನಗರದ ಬುದ್ಧ ವಿಹಾರದ ಸಭಾಂಗಣದಲ್ಲಿ ನೂತನವಾಗಿ ಪ್ರಾರಂಭವಾದ ಲಯನ್ಸ್ ಪರಿವಾರದ ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘದ ಉದ್ಘಾಟನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರವಿರಲಿ, ಯಾವುದೇ ಸಂಘ-ಸಂಸ್ಥೆಯಾಗಲಿ, ಪ್ರಾಮಾಣಿಕವಾಗಿ ಜನ ಸಾಮಾನ್ಯರ ಮತ್ತು ಬಡವರಿಗೆ ಸಹಾಯ ಸೇವೆ ಸಲ್ಲಿಸುವವರಿಗೆ ಯಾವತ್ತೂ ತಮ್ಮ ಸಿದ್ಧಸಿರಿ ಬ್ಯಾಂಕ್‌ನ ಸಂಸ್ಥೆಯು ಸಹಾಯ ಹಸ್ತ ನೀಡಿ ಅವರಿಗೆ ಬೆಂಬಲಿಸುವ ಕಾರ್ಯವನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.ತುಳಸಿಗಿರೀಶ ಫೌಂಡೇಶನ್ ಸಂಸ್ಥಾಪಕ ಹಾಗೂ ಸಂಘದ ಗೌರವ ಅಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಿಕ ಮಾತನಾಡಿ, ಸಂಘವು ಹಮ್ಮಿಕೊಳ್ಳುವ ಯಾವುದೇ ಸಮಾಜಮುಖಿ ಕಾರ್ಯಕ್ರಮಗಳಿಗೆ ತನು, ಮನ, ಧನದ ಸಹಾಯ ಮತ್ತು ಮಾರ್ಗದರ್ಶನವನ್ನು ಮಾಡುತ್ತ ಸಂಘವು ಮುಂದಿನ ದಿನಗಳಲ್ಲಿ ಜಿಲ್ಲೆಯ ನಂ.1 ಸರ್ಕಾರೇತರ ಸಂಸ್ಥೆಯಾಗಿ ಬೆಳೆಸುವುದರಲ್ಲಿ ಮುಂಚೂಣಿಯಲ್ಲಿರುವೆ ಎಂದು ತಿಳಿಸಿದರು.ವಿಶೇಷ ಯೋಜನೆಗಳನ್ನು ಹೊಂದಿರುವ ಈ ಸಂಘವು ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಜನರಿಗೆ ವಿಶೇಷವಾಗಿ ಬಡಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು, ಯುವಕರಿಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಜೀವನದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ಸಹಾಯ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದರು.ಮಹಾನಗರ ಪಾಲಿಕೆಯ ಮಹಾಪೌರ ಎಂ.ಎಸ್.ಕರಡಿ ಮಾತನಾಡಿ, ತಮ್ಮ ಅಧಿಕಾರದ ಅವಧಿಯಲ್ಲಿ ಸಂಘಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವೆ ಎಂದು ಭರವಸೆ ನೀಡಿ ಸಂಘದ ಧ್ಯೇಯೋದ್ದೇಶಗಳ ಬಗ್ಗೆ ಶ್ಲಾಘಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ ಮಾತನಾಡಿ, ಸದ್ಯಕ್ಕೆ ಸಂಘಕ್ಕೆ ಬೇಕಾಗಿರುವ ಸ್ವಂತ ಕಚೇರಿಗಾಗಿ ನಿವೇಶನ ಮಂಜೂರು ಮಾಡಿ ಭವಿಷ್ಯದಲ್ಲಿ ಈ ಸಂಘದ ಸದಸ್ಯತ್ವ ಸ್ವೀಕರಿಸಿ ನಗರದ ಅಭಿವೃದ್ಧಿಗಾಗಿ ತೊಡಕಾಗಿರುವ ಹಲವು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಮ್ಮ ವತಿಯಿಂದ ಸಹಾಯ ಮಾಡಲು ಯಾವತ್ತೂ ಸಿದ್ಧ ಎಂದು ಭರವಸೆ ನೀಡಿದರು.ಸೋಮದೇವರಹಟ್ಟಿಯ ದುರ್ಗಾದೇವಿ ದೇವಸ್ಥಾನದ ಪೂಜಾರಿ ಜಗನು ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂತಹ ಸಮಾಜಮುಖಿ ಸೇವೆಯ ವಿಚಾರಧಾರೆ ಹೊಂದಿರುವ ಸಂಸ್ಥೆ ಯಾವತ್ತೂ ಮುನ್ನಡೆಯಲಿ ಎಂದು ಸಂಘದ ಕಾರ್ಯ ಚಟುವಟಿಕೆಗಳಿಗೆ ಶುಭಹಾರೈಸಿ ಆಶೀರ್ವದಿಸಿದರು.ಲಯನ್ಸ್ ಕ್ಲಬ್‌ನ ಸಂಸ್ಥಾಪಕ ಹಾಗೂ ಸಂಘದ ನೂತನ ಅಧ್ಯಕ್ಷ ಡಾ.ಅಶೋಕಕುಮಾರ ರಾ.ಜಾಧವ ಮಾತನಾಡಿ, ತಮ್ಮ ನಿವೃತ್ತ ಜೀವನ ಪೂರ್ವದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ನಿರ್ದೇಶಕನಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ಸೇವೆ ಮಾಡುತ್ತ ತೃಪ್ತಿ ಹೊಂದಿರುವೆ ಎಂದರು.17 ಜನ ಸದಸ್ಯರಿಗೆ ಅಜೀವ ಸದಸ್ಯತ್ವದ ಪ್ರಮಾಣ ಪತ್ರ ವಿತರಣೆ:ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಆಶ್ರಮದ ಕುಮಾರಿ ಸಂಗೀತಾ, ಬಿ.ಕೆ.ಕವಿತಾ ಮತ್ತು ಇನ್ನಿತರ ಸದಸ್ಯರು ನೆರೆದ ಎಲ್ಲರಿಗೂ, ವ್ಯಸನ ಮುಕ್ತ ಭಾರತದ ದಶಕೋಟಿ ಅಭಿಯಾನದ ಪ್ರಮಾಣ ವಚನ ಬೋಧಿಸಿದರು. ನೂತನ ಸಂಘದ ಅಜೀವ ಸದಸ್ಯತ್ವ ಪಡೆದ 17 ಜನ ಸದಸ್ಯರಿಗೆ ಅತಿಥಿಗಳಿಂದ ಅಜೀವ ಸದಸ್ಯತ್ವದ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಸ್ವಾಗತಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ನಿಂಬಾಳ, ಉಪಾಧ್ಯಕ್ಷ ಡಾ.ಎಸ್.ಎಸ್.ರಾಜಮಾನ್ಯ ಮಾತನಾಡಿದರು. ಇಂದುಮತಿ ಕನ್ನೂರ ಸ್ವಾಗತಿಸಿದರು. ಭಾರತ ಸೇವಾದಳದ ಜಿಲ್ಲಾ ಸಂಚಾಲಕ ನಾಗೇಶ ಡೊಣೂರ ಹಾಗೂ ಸೋಮಶೇಖರ ರಾಠೋಡ ಪ್ರಾರ್ಥನೆ ಹಾಗೂ ನಾಡಗೀತೆ, ರಾಷ್ರಗೀತೆ ಹಾಡಿದರು. ಪ್ರೊ.ಎಂ.ಬಿ.ರಜಪೂತ ವಂದನಾರ್ಪಣೆ ಮಾಡಿದರು. ರಾಜೇಶ ಗಾಯಕವಾಡ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷ ವಾಲು ಚವ್ಹಾಣ, ಬುದ್ಧ ವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಕಾರ್ಯದರ್ಶಿ ನಾಗರಾಜ ಲಂಬು, ನೂತನ ಸಂಘದ ಉಪಾಧ್ಯಕ್ಷೆ ಪುಷ್ಪಾ ಮಹಾಂತಮಠ, ಜಂಟಿ ಕಾರ್ಯದರ್ಶಿ ಧರ್ಮರಾಯ ಮಮದಾಪುರ, ಫಯಾಜ್ ಕಲಾದಗಿ, ಶ್ರೀಶೈಲ ಗಂಗನಳ್ಳಿ, ಲಯನ್ಸ್ ಪರಿವಾರದ ಹಾಲಿ ಮತ್ತು ಮಾಜಿ ಸದಸ್ಯರುಗಳಾದ ಸತ್ಯಕಾಮ ಕಟ್ಟಿ, ಪ್ರಕಾಶ ದರ್ಬಾರ, ನಿವೃತ್ತ ಪ್ರಾಂಶುಪಾಲರು ಹಾಗೂ ಮಾಜಿ ಸದಸ್ಯ ಪ್ರೊ.ಎಸ್.ಕೆ.ಬಾಗಿ, ಸಲೀಮ್ ನದಾಫ, ಡಾ.ಬಿ.ಎಂ.ಕೊರಬು, ಛಾಯಾ ಮಸಿಯನವರ, ರಜನಿ ಸಂಬಣ್ಣಿ, ಮೋಹನ ಚವ್ಹಾಣ, ಅನಿತಾ ಕುಮಸಿ, ಡಾ.ರಶ್ಮಿ ಚಿತ್ತವಾಡಗಿ, ಶೈಲಜಾ ಬಸವಪ್ರಭು, ಶಾಂತಾ ಉತ್ಲಾಸರ, ಮಹಿಳಾ ವಿಶ್ವವಿದ್ಯಾಲಯದ ಡಾ.ಬಾಬು ಲಮಾಣಿ, ನಿವೃತ್ತ ಪ್ರಾಂಶುಪಾಲರಾದ ಡಾ.ಆರ್.ಎಸ್.ಕಲ್ಲೂರಮಠ, ಇಂಡಿ ತಾಲೂಕು ಪಂಚಾಯತಿಯ ಮಾಜಿ ಅಧ್ಯಕ್ಷೆ ಗುರುಲಿಂಗವ್ವ ಸಿದ್ದಣ್ಣ ಗಂಗನಳ್ಳಿ, ಭಾವನಾ ಶ್ರೀಶೈಲ ಗಂಗನಳ್ಳಿ, ಶ್ರೀಕಾಂತ ಕಾಖಂಡಕಿ, ಚಾಂದವಸೀಮ್ ಮುಕಾದಮ, ಹಜರತ್ ಬಿಲಾಲ್ ಹೆಬ್ಬಾಳ, ಅಪ್ಪು ಆಲಮೇಲ, ಶಂಕರ ಶಹಾಪುರ, ಅಶೋಕ ರಾಠೋಡ, ರೇಣುಕಾ ಕೋಟಗಿ, ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ ಮಹಾಂತಮಠ, ಭುವನೇಶ್ವರಿ ಜಾಧವ, ರಾಮಕ್ಕ ಬಿ.ಆರ್, ಜಯರಾಜ ಪಾಟೀಲ, ಬಕ್ಷಿ, ಬಿಎಲ್‌ಡಿಇ ಪದವಿ ಕಾಲೇಜಿನ ಡಾ.ಸುಭಾಸ ಕನ್ನೂರ ಉಪಸ್ಥಿತರಿದ್ದರು. ಕಳೆದ 14-15 ವರ್ಷಗಳಿಂದಲೂ ನಗರ ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಹಲವು ರೀತಿಯಲ್ಲಿ ಸಹಾಯ, ಸಹಕಾರದ ಸೇವೆ ಮಾಡುತ್ತ ಬಂದಿರುವ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರ ಜಿಲ್ಲೆಯ ಪ್ರಮುಖ ಸರ್ಕಾರೇತರ ಸಂಸ್ಥೆಯಾಗಿ ಬೆಳೆದಿದೆ.ಮುಂದಿನ ದಿನಗಳಲ್ಲಿ ಈ ನೂತನ ಸಂಘವು ಬಹಳ ಎತ್ತರಕ್ಕೆ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
-ರಾಮನಗೌಡ ಬಸನಗೌಡ ಪಾಟೀಲ (ಯತ್ನಾಳ), ಯುವ ಧುರೀಣರು.ಜಿಲ್ಲೆಗೆ ಹೆಮ್ಮೆತರುವ ಸಾಧನೆಗಳನ್ನು ಯುವಕರು ಮಾಡಿದಾಗ ಮಾತ್ರ ಈ ಸಂಘದ ಸಾರ್ಥಕತೆಯಾಗುವುದು. ತಾವು ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ ತಮ್ಮ ಆಸ್ಪತ್ರೆಯ ಸಿಬ್ಬಂದಿಯವರೊಂದಿಗೆ ಬಡಜನರಿಗೆ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ಉಚಿತವಾಗಿ ಪೂರೈಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತೇವೆ.-ಡಾ.ಬಾಬುರಾಜೇಂದ್ರ ನಾಯಿಕ, ಗೌರವ ಅಧ್ಯಕ್ಷರು, ಕ್ರೀಡಾ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಘ ವಿಜಯಪುರ.
ಹಲವು ಅಂತಾರಾಷ್ಷ್ರೀಯ ಮಟ್ಟದಲ್ಲಿ ಮಿಂಚುವ ಕೌಶಲ್ಯಗಳನ್ನು ಹೊಂದಿರುವ ಕ್ರೀಡಾಪಟುಗಳಿಗೆ ಕೊರತೆಯಿಲ್ಲ. ಆದರೆ, ಅವರಿಗೆ ಸೂಕ್ತವಾದ ಕ್ರೀಡಾಂಗಣದ ಅವಶ್ಯಕತೆಯಿದೆ. ಜಿಲ್ಲೆಯ ಪ್ರಮುಖರು ಮತ್ತು ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲರು ಮನಸ್ಸು ಮಾಡಿ ನಗರಕ್ಕೆ ಒಂದು ಸುಸಜ್ಜಿತ ಅಂತಾರಾಷ್ಷ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಒದಗಿಸಿ ಕೊಡಬೇಕು.-ಡಾ.ಅಶೋಕಕುಮಾರ ರಾ.ಜಾಧವ, ಲಯನ್ಸ್ ಕ್ಲಬ್‌ನ ಸಂಸ್ಥಾಪಕ, ಸಂಘದ ನೂತನ ಅಧ್ಯಕ್ಷರು.