ಕೋಲಿ ಸಮಾಜದ ಒಳಿತಿಗೆ ಸ್ಥಾನಮಾನ ತ್ಯಜಿಸಲು ಸಿದ್ಧ: ತಿಪ್ಪಣ್ಣಪ್ಪ ಕಮಕನೂರ

| Published : Oct 08 2025, 01:01 AM IST

ಕೋಲಿ ಸಮಾಜದ ಒಳಿತಿಗೆ ಸ್ಥಾನಮಾನ ತ್ಯಜಿಸಲು ಸಿದ್ಧ: ತಿಪ್ಪಣ್ಣಪ್ಪ ಕಮಕನೂರ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಿ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲಿದೆ. ಆದರೆ, ಇದುವರೆಗೂ ಈ ಸಮಾಜ ಎಸ್‍ಟಿಗೆ ಸೇರ್ಪಡೆ ಆಗಿಲ್ಲ, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸುವ ಭರವಸೆ ರಾಜ್ಯ ಸರ್ಕಾರದಿಂದ ದೊರಕಿದೆ ಎಂದು ಕೋಲಿ ಸಮಾಜದ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕೋಲಿ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಚಿನ್ನಪ್ಪ ರೆಡ್ಡಿ ಆಯೋಗದ ವರದಿಯಲ್ಲಿದೆ. ಆದರೆ, ಇದುವರೆಗೂ ಈ ಸಮಾಜ ಎಸ್‍ಟಿಗೆ ಸೇರ್ಪಡೆ ಆಗಿಲ್ಲ, ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸುವ ಭರವಸೆ ರಾಜ್ಯ ಸರ್ಕಾರದಿಂದ ದೊರಕಿದೆ ಎಂದು ಕೋಲಿ ಸಮಾಜದ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಹೇಳಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್.ಟಿ. ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆ ಉದ್ಘಾಟಿಸಿ ಮತಾನಾಡಿದ ಅವರು, ತಳವಾರರಿಗೆ ಆಗುತ್ತಿರುವ ಅನ್ಯಾಯ ತಡೆಯಲು ಸರ್ಕಾರದಿಂದಲೇ ಸುತ್ತೋಲೆ ಹೊರಡಿಸಲಾಗುವುದು ಎಂದರು.

ಒಗ್ಗಟ್ಟು ತೋರಿಸಿದರೆ ನಿಮ್ಮ ಮನೆಗೆ ಮಂತ್ರಿಗಳೂ ಬರುತ್ತಾರೆ ಮತ್ತು ಸೌಲಭ್ಯಗಳೂ ಬರುತ್ತವೆ. ಸ್ಥಳೀಯವಾಗಿ ಯಾದಗಿರಿ ಮಾದರಿಯಲ್ಲಿ ಹೋರಾಟ ನಡೆಸಿ, ಆಗಲೂ ಸಮಾಜದ ಬೇಡಿಕೆಗೆ ಸ್ಪಂದಿಸದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 10 ಲಕ್ಷ ಜನರೊಂದಿಗೆ ಹೋರಾಟ ಮಾಡೋಣ. ಸಮಾಜದ ಜನರ ಒಳಿತಿಗಾಗಿ ಯಾವುದೇ ಸ್ಥಾನಮಾನ ತ್ಯಜಿಸಲು ತಾವು ಸಿದ್ಧವೆಂದು ಕಮಕನೂರ್‌ ಹೇಳಿದರು.

ಕೋಲಿ ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಲಚ್ಚಪ್ಪ ಜಮಾದಾರ ಮಾತನಾಡಿ, ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಹೋರಾಟಕ್ಕೆ ಬೆಂಬಲಿಸುವ ಮೂಲಕ ಆಳುವ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕಿದೆ.

ಸಮಾಜದ ಮುಖಂಡರು ಯಾವುದೇ ಪಕ್ಷದಲ್ಲಿ ಇರಲಿ ಸಮಾಜಕ್ಕೆ ಅನ್ಯಾಯ ಆದಾಗ ನಾವೆಲ್ಲರೂ ಮನಸ್ತಾಪ ಮರೆತು ಲಕ್ಷಾಂತರ ಜನರನ್ನು ಒಗ್ಗೂಡಿಸಿ ಉಗ್ರವಾದ ಹೋರಾಟ ರೂಪಿಸುವ ಕಾರ್ಯ ಮಾಡೋಣ ಎಂದು ಜಮಾದಾರ ತಿಳಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ, ಬುಡಕಟ್ಟು ಲಕ್ಷಣ ಇರುವ ವೈಜ್ಞಾನಿಕ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಮಾತ್ರ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುತ್ತದೆ ಎಂದರು.

ಯಾದಗಿರಿ ನಗರಸಭೆ ಅದ್ಯಕ್ಷೆ ಲಲಿತಾ ಅನಪುರ ಮಾತನಾಡಿ, ಒಗ್ಗಟ್ಟಿನ ಕೊರತೆಯಿಂದ ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಒಬ್ಬರೂ ಶಾಸಕರಿಲ್ಲ ಎಂದರು.

ತಳವಾರ ಸಮಾಜದ ಅಧ್ಯಕ್ಷ ಸರ್ದಾರ್ ರಾಯಪ್ಪ ಮಾತನಾಡಿ, ತಳವಾರರಿಗೆ ಎಸ್‍ಟಿ ಪ್ರಮಾಣ ಪತ್ರ ಸಿಗುವುದನ್ನು ವ್ಯವಸ್ಥಿತವಾಗಿ ತಡೆಹಿಡಿಯಲಾಗುತ್ತಿದೆ. ಡಾ.ಅಂಬೇಡ್ಕರ್ ಹೇಳಿದಂತೆ ಹೋರಾಟದಿಂದ ಮಾತ್ರ ನ್ಯಾಯ ಸಿಗಲು ಸಾಧ್ಯವೆಂದರು.

ಯಾದಗಿರಿಯ ಮಲ್ಲಿಕಾರ್ಜುನ ಗೋಸಿ, ಶಿವಾಜಿ ಮೆಟಗಾರ ಮಾತನಾಡಿ, ಸಮಾಜದ ಜನರು ಒಗ್ಗಟ್ಟಾಗಬೇಕು. ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂದರು.

ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ, ಗರವಗುಂಡಗಿಯ ವರಲಿಂಗೇಶ್ವರ ಸ್ವಾಮೀಜಿ, ರಟಕಲ್‍ನ ರೇವಣಸಿದ್ದೇಶ್ವರ ಶರಣರು ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ತಿಪ್ಪಣ್ಣ ರಡ್ಡಿ, ವಾಣಿಶ್ರೀ ಸಗರಕರ್, ಶಾಂತಪ್ಪ ಕೂಡಿ, ಶಂಕರ ಮ್ಯಾಕೇರಿ, ಹಣಮಂತ ಸಂಕನೂರ, ನಾಗರತ್ನ ಅನಪುರ, ರೇಖಾ ಕಟ್ಟಿಮನಿ ಉಪಸ್ಥಿತರಿದ್ದರು. ರಾಮಲಿಂಗ ನಾಟಿಕಾರ ಸ್ವಾಗತಿಸಿದರು. ಭೀಮಾಶಂಕರ ನಿರೂಪಿಸಿದರು.