ಸಾರಾಂಶ
ಬ್ಯಾಡಗಿ: ಜೈಲಿಗೆ ಹೋದರೂ ಪರವಾಗಿಲ್ಲ, ಬ್ಯಾಡಗಿ ಮುಖ್ಯರಸ್ತೆ ಅಗಲೀಕರಣ ಮಾಡದೇ ಬಿಡುವುದಿಲ್ಲ ಎಂದು ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಗುಡುಗಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮುಖ್ಯರಸ್ತೆ ಅಗಲೀಕರಣ ಸಮಿತಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಆಗಿರುವ ತಪ್ಪಿನಿಂದ 2 ಬಾರಿ ನೋಟಿಫಿಕೇಶನ್ ಆಗಬೇಕಾಯಿತು, ಮುಖ್ಯರಸ್ತೆಯಲ್ಲಿನ ಜನರು ಹಣ ವ್ಯಯಿಸಿ ಅಗಲೀಕರಣ ಮಾಡದಂತೆ ನೋಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದರು.ಅಧಿಕಾರಿಗಳ ವಿಳಂಬ ನೀತಿಯಿಂದ ರಸ್ತೆ ಅಗಲೀಕರಣ ಕಾಮಗಾರಿಗೆ ಹಿನ್ನೆಡೆಯಾಗುತ್ತಿದೆ. ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆಗಳಿಲ್ಲ. ಹೀಗಿದ್ದರೂ ಅಗಲೀಕರಣಕ್ಕೆ ಮುಂದಾಗದೇ ಸಾರ್ವಜನಿಕರ ತಾಳ್ಮೆ ಪರೀಕ್ಷಿಸುತ್ತಿದ್ದೀರಿ, ನಿಮ್ಮಂತಹ ಅಧಿಕಾರಿಗಳಿಂದ ಕಳೆದ 15 ವರ್ಷಗಳ ಹೋರಾಟಕ್ಕೆ ಹಿನ್ನೆಡೆಯಾಗುತ್ತಿದೆ ಎಂದು ಆರೋಪಿಸಿದರು.
ಕಾಣದ ಕೈಗಳ ಚಿತಾವಣೆಯಿಂದ ಅಗಲೀಕರಣಕ್ಕೆ ಹಿನ್ನೆಡೆಯಾಗಿದೆ. ಅಗಲೀಕರಣಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಾಗಿದ್ದು ಮುಖ್ಯರಸ್ತೆ ಎರಡೂ ಬದಿಯಲ್ಲಿ ಗುಂಡಿ ತೆಗೆದು ಪ್ರತಿಭಟನೆ ನಡೆಸಲಿದ್ದೇವೆ ಎಂದು ಗಂಗಣ್ಣ ಎಲಿ ಹೇಳಿದರು.ಪಾಪಪ್ರಜ್ಞೆ ಕಾಡುತ್ತಿದೆ: ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನಮ್ಮ ಅಧಿಕಾರದ ಅವಧಿಯಲ್ಲಿ ಪರಿಹಾರದ ಹಣವನ್ನು ಅಗಲೀಕರಣಕ್ಕೆ ಒದಗಿಸಿದ್ದೇವೆ. ಮೆಣಸಿನಕಾಯಿ ವ್ಯಾಪಾರದ ದೃಷ್ಟಿಯಿಂದ ಬ್ಯಾಡಗಿ ಪಟ್ಟಣಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನಮಾನವಿದೆ. ಶಾಸಕನಾಗಿ 5 ವರ್ಷದ ಅವಧಿಯಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡಲು ಸಾಧ್ಯವಾಗಿಲ್ಲ ಎನ್ನುವ ಪಾಪಪ್ರಜ್ಞೆ ಇಂದಿಗೂ ಕಾಡುತ್ತಿದೆ. ರೈತ ಸಂಘ, ಇನ್ನಿತರ ಸಂಘ-ಸಂಸ್ಥೆಗಳ ಸಹಕಾರದಿಂದ ಅಗಲೀಕರಣ ನಡೆಸಲು ಬಿಜೆಪಿ ಸಿದ್ಧವಿದೆ ಎಂದರು.
ಸಾಮೂಹಿಕ ರಾಜೀನಾಮೆ ನಿರ್ಧಾರ: ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಹೋರಾಟದ ವಿಷಯವಾಗಿ ಪುರಸಭೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಅಗಲೀಕರಣ ಮಾಡುವಲ್ಲಿ ವಿಳಂಬವಾದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಈಗಲೂ ಬದ್ಧವಾಗಿದ್ದೇವೆ ಎಂದರು.ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಮುಖ್ಯರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲು ಸಾಧ್ಯವಾಗದೇ ₹69 ಕೋಟಿ ವೆಚ್ಚದ ಒಳಚರಂಡಿ ಹಾಗೂ ₹26 ಕೋಟಿ ವೆಚ್ಚದ ನಿರಂತರ ಕುಡಿಯುವ ನೀರಿನ ಯೋಜನೆಗಳು ಜನರಿಗೆ ತಲುಪಿಸಲು ಸಾಧ್ಯವಾಗಿಲ್ಲ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಧ್ಯಕ್ಷನಾಗಿ ದೃಢ ನಿರ್ಧಾರಗಳನ್ನು ಕೈಗೊಳ್ಳಲಿದ್ದೇನೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷ ಮೋಹನ ಬಿನ್ನಾಳ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಮುಖ್ಯರಸ್ತೆ ಅಗಲೀಕರಣ ಮಾಡುವುದು, ಬಸವೇಶ್ವರ ನಗರ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದ್ದರು. ಒಂದು ವೇಳೆ ಅಗಲೀಕರಣ ಅಗಲೀಕರಣ ಮಾಡುವ ನಿರ್ಧಾರಕ್ಕೆ ಬರದಿದ್ದರೆ, ಬ್ಯಾಡಗಿ ಪಟ್ಟಣಕ್ಕೆ ಬರುವ ನೈತಿಕತೆ ಕಳೆದುಕೊಳ್ಳಲಿದ್ಧಾರೆ ಎಂದರು.ಜೈಲಿಗೆ ಹೋಗಲು ಸಿದ್ಧ: ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಅನಧಿಕೃತ ಕಟ್ಟಡ ಸೇರಿದಂತೆ 85 ವರ್ಷ ಮೀರಿದ ಕಟ್ಟಡ ಶಿಥಿಲಗೊಳಿಸಲು ಹಿರಿಯ ಅಧಿಕಾರಿಗಳಿಂದ ಸೂಚನೆ ಸಿಕ್ಕಿದ್ದರೂ ಮುಖ್ಯಾಧಿಕಾರಿ ಕಾರ್ಯೋನ್ಮುಖವಾಗಿಲ್ಲ. ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ. ಇದಕ್ಕಾಗಿ ಜೈಲಿಗೂ ಹೋಗಲು ಸಿದ್ಧವಿರುವುದಾಗಿ ಎಚ್ಚರಿಸಿದರು.
ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ, ಮಾಜಿ ಅಧ್ಯಕ್ಷರಾದ ಪ್ರಕಾಶ ಬನ್ನಿಹಟ್ಟಿ, ನಿಂಗಪ್ಪ ಬಟ್ಟಲಕಟ್ಟಿ, ರೈತ ಸಂಘದ ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ಪಾಂಡುರಂಗ ಸುತಾರ, ಜಯಕರ್ನಾಟಕ ಸಂಘಟನೆ ತಾಲೂಕಾಧ್ಯಕ್ಷ ವಿನಾಯಕ ಕಂಬಳಿ ಇನ್ನಿತರರಿದ್ದರು.