ಹೊಸಪೇಟೆ: ಇತರೆ ಸಮಾಜಗಳು ಶಿಕ್ಷಣ ಸಂಸ್ಥೆಗಳಿಗೆ ಒತ್ತು ನೀಡಿದಂತೆ ಕುರುಬ ಸಮಾಜ ಶಿಕ್ಷಣ ಸಂಸ್ಥೆಗಳನ್ನು ತೆರೆದರೆ ಅದಕ್ಕೆ ಬೇಕಾದ ಸರ್ಕಾರಿ ಭೂಮಿಯನ್ನು ಒದಗಿಸಿಕೊಡಲು ಸಿದ್ಧ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಹಾಗು ಜಿಲ್ಲಾ ಕನಕ ನೌಕರರ ಸಂಘ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ, ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗಾಯತ ಸಮಾಜ ಶಿಕ್ಷಣ ಸಂಸ್ಥೆಗಳಿಗೆ ಒತ್ತು ಕೊಟ್ಟಿದೆ. ಅದೇ ರೀತಿ ಕುರುಬ ಸಮಾಜ ಸಹ ಶಿಕ್ಷಣ ಸಂಸ್ಥೆ ತೆರೆಯಲು ಆದ್ಯತೆ ನೀಡಬೇಕು.ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ. ಸಮಾಜ ಈ ಪ್ರಯತ್ನ ಮಾಡಲಿ, ಸರ್ಕಾರದಿಂದ ಒಂದೆರಡು ಎಕರೆ ಭೂಮಿ ಕೊಡಿಸುವೆ ಎಂದರು.

ಕ್ಷೇತ್ರದಲ್ಲಿ ಆನಂದ ಸಿಂಗ್ ಮತ್ತು ನನ್ನ ಅವಧಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಏನು ಸಹಕಾರ ಬೇಕೋ ಅದನ್ನು ನೀಡುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು ಬರೀ ಎಂಬಿಬಿಎಸ್, ಎಂಜಿನಿಯರಿಂಗ್‌ಗಷ್ಟೇ ಆದ್ಯತೆ ನೀಡಬೇಡಿ. ಹೋಟೆಲ್ ಮ್ಯಾನೇಜ್‌ಮೆಂಟ್, ಟಿವಿ, ಐಟಿ, ಬಿಟಿ, ಮೊಬೈಲ್ ರಿಪೇರಿಯಂತಹ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯೋಗ ಪಡೆಯಲು ಮುಂದಾಗಿ ಎಂದು ಕಿವಿಮಾತು ಹೇಳಿದರು.

ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಈ ಭಾಗದಲ್ಲಿ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು. ಅದರಂತೆ ಹಲವಾರು ವರ್ಷಗಳ ಹೋರಾಟದ ನಂತರ ಬಳ್ಳಾರಿಯಿಂದ ಬೇರ್ಪಟ್ಟು ವಿಜಯನಗರ ಜಿಲ್ಲೆಯಾಗಿದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಹೇಳುವುದಾದರೆ ಭೂತಕಾಲ ವೇಸ್ಟ್ ಪೇಪರ್ ಇದ್ದಂತೆ. ವರ್ತಮಾನ ಕಾಲ ನ್ಯೂಸ್ ಪೇಪರ್ ಇದ್ದಂತೆ. ಭವಿಷ್ಯತ್ ಕಾಲ ಪ್ರಶ್ನೆ ಪೇಪರ್ ಇದ್ದಂತೆ. ಅದು ಯಾವುದು ಇಲ್ಲದ್ದು ಟಿಶ್ಯೂ ಪೇಪರ್ ಇದ್ದಂತೆ. ಅಂದರೆ ವಿದ್ಯಾರ್ಥಿಗಳು ಕಡಿಮೆ ಅಂಕ, ಫೇಲ್ ಆಗಿದಿನಿ ಅಂತ ಸುಮ್ಮನೆ ಕೂರಬಾರದು. ಪ್ರಯತ್ನ ನಿರಂತರವಾಗಿರಬೇಕು. ಯಾವುದೇ ಕಾರಣಕ್ಕೂ ಕುಗ್ಗಬಾರದು. ಆತ್ಮವಿಶ್ವಾಸವಿಟ್ಟುಕೊಂಡು ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆದು ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.


ವಿಜಯನಗರ ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಕುರಿ ಶಿವಮೂರ್ತಿ, ಹುಡಾ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್, ಜಿಲ್ಲಾ ಕುರುಬರ ಸಂಘದ ಸಂಚಾಲಕ ಬುಡ್ಡಿ ಬಸವರಾಜ, ಹುಡಾ ಅಧ್ಯಕ್ಷ ಎಚ್‌.ಎನ್.ಎಫ್. ಮೊಹಮ್ಮದ್‌ ಇಮಾಂ ನಿಯಾಜಿ, ಹಂಪಿ ವಿವಿ ಪ್ರಾಧ್ಯಾಪಕ ಪ್ರೊ.ಎಫ್.ಟಿ. ಹಳ್ಳಿಕೇರಿ, ರಾಯಚೂರು ವಿವಿ ಪ್ರಾಧ್ಯಾಪಕ ಪ್ರೊ. ಕೆ.ವೆಂಕಟೇಶ, ಪ್ರೊ.ರಮೇಶ, ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. 7ನೇ ತರಗತಿ ವಿದ್ಯಾರ್ಥಿ ಅಂತರಾಷ್ಟ್ರೀಯ ಯೋಗ ಪ್ರತಿಭೆ ಶ್ಯಾಮ್ ಯೋಗ ಪ್ರದರ್ಶಿಸಿದ. 200 ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕುಲಗುರು ಕೊಟ್ರೇಶ ಒಡೆಯರ್, ಗುರುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜದ ಮುಖಂಡರಾದ ಅಯ್ಯಾಳಿ ಮೂರ್ತಿ, ರಾಮಚಂದ್ರಗೌಡ, ಎಲ್.ಎಸ್.ಆನಂದ, ಕೆ.ರವಿಕುಮಾರ್, ಸಾಲಿ ವೆಂಕಟೇಶ, ಎಚ್.ಮಹೇಶ, ವೈ.ಎರಿಸ್ವಾಮಿ, ಪಲ್ಲೇದ ಸಿದ್ದೇಶ, ಜಿಲ್ಲಾ, ತಾಲೂಕು ಕನಕ ನೌಕರರ ಸಂಘದ ಶಿವರಾಮಪ್ಪ, ಬತ್ತಿ ತಿಮ್ಮಪ್ಪ, ದ್ರಾಕ್ಷಾಯಿಣಿ, ಟಿ.ವಿಶ್ವನಾಥ, ಮಲ್ಲಿಕಾರ್ಜುನ, ಕ್ಯಾದಿಗಿಹಾಳ್ ಉದೇದಪ್ಪ, ಕೆ.ರಮೇಶ ಇದ್ದರು.