ಮಾಗಡಿ: ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಪಕ್ಷ ಉಳಿದಾಗ ಮಾತ್ರ ಅಧಿಕಾರ ಸಿಗುತ್ತದೆ. ಪಕ್ಷದ ಹಿತಕ್ಕಾಗಿ 33 ಸಚಿವರು ತ್ಯಾಗಕ್ಕೆ ಸಿದ್ಧರಾಗಿರಬೇಕು ಎಂದು ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದವರ ಅಸಮಾಧಾನವನ್ನು ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಮನವೊಲಿಸುತ್ತಿದ್ದಾರೆ. ಹೈಕಮಾಂಡ್ ಸೂಚಿಸಿದರೆ ನಾನೂ ಸೇರಿ 33 ಸಚಿವರು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧರಿರಬೇಕು ಎಂದು ಹೇಳಿದರು.

ಪಶ್ಚಾತಾಪ ಪಾದಯಾತ್ರೆ: ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಬಿಡದಿ ಟೌನ್‌ಶಿಪ್ ವಿರೋಧಿಸಿ ನಡೆಸುತ್ತಿರುವ ಪಶ್ಚಾತಾಪ ಪಾದಯಾತ್ರೆಯನ್ನು ಸರ್ಕಾರ ತಡೆಯುವುದಿಲ್ಲ. ಯಾರ ಕಾಲದಲ್ಲಿ ಯಾರೂ ಈ ಯೋಜನೆ ಜಾರಿಗೆ ತಂದರು? ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರೇ ಇಂದು ಪಾದಯಾತ್ರೆ ಮಾಡುತ್ತಿರುವುದು ದುರ್ದೈವದ ಸಂಗತಿ. ತಾವು ಅಧಿಕಾರದಲ್ಲಿದ್ದಾಗ ಅಥವಾ ಯೋಜನೆಗೆ ಒಪ್ಪಿಗೆ ನೀಡುವಾಗ ಯೋಚಿಸದವರು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಪಾದಯಾತ್ರೆ ಅಲ್ಲ ಪಶ್ಚಾತಾಪದ ಪಾದಯಾತ್ರೆ ಎಂದು ಟೀಕಿಸಿದರು.

ಕಾನೂನು ಹೋರಾಟಕ್ಕೆ ಅವಕಾಶವಿದೆ: ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ನೈಸ್ ರಸ್ತೆ ಟೋಲ್ ಕಟ್ಟಬೇಡಿ ಎಂದು ಹೇಳಿಕೆ ನೀಡಿದರೆ ಕಾನೂನು ಸುವ್ಯವಸ್ಥೆ ಯಾವ ರೀತಿ ಆಗುತ್ತದೆ ಎಂಬುದನ್ನು ತಿಳಿಯಬೇಕು. ಯಾರ ಕಾಲದಲ್ಲಿ ನೈಸ್ ರಸ್ತೆ ಜಾರಿಯಾಯಿತು? ಎಚ್.ಡಿ.ದೇವೇಗೌಡರೇ ಈ ಯೋಜನೆಗೆ ಒಪ್ಪಿಗೆ ಕೊಟ್ಟವರು. ಈಗ ಈ ರೀತಿ ಹೇಳಿಕೆ ಬಂಡಾಯ ಅಥವಾ ಪಾದಯಾತ್ರೆ ಮಾಡುವ ಬದಲು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಬಹುದಿತ್ತು.

ಭಾನುವಾರದಿಂದ ಆರಂಭವಾಗುವ ಪಾದಯಾತ್ರೆ ಬೆಂಗಳೂರು-ಮೈಸೂರು ಭಾಗದಲ್ಲಿ ನಡೆಯುವ ಈ ಪಾದಯಾತ್ರೆಗೆ ಟ್ರಾಫಿಕ್ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅವರು ಮಾಡಿದ ತಪ್ಪಿಗೆ ಈಗ ಪಶ್ಚಾತಾಪ ಯಾತ್ರೆ ಮಾಡುತ್ತಿರುವುದರಿಂದ ನಮ್ಮ ಸರ್ಕಾರ ಯಾತ್ರೆ ತಡೆಯುವ ಕೆಲಸ ಮಾಡುವುದಿಲ್ಲ. ಬೆಂಗಳೂರಿನವರೆಗೂ ಪಾದಯಾತ್ರೆ ಮುಂದುವರಿಯಲು ಅವಕಾಶ ಕೊಡುತ್ತೇವೆ. ಆಗಲಾದರೂ ಜೆಡಿಎಸ್ ಮತ್ತು ಬಿಜೆಪಿಯವರಿಗೆ ಅವರ ತಪ್ಪು ತಿಳಿಯುವಂತೆ ಆಗಲಿ. ಭಾನುವಾರ ಸರ್ಕಾರದ ವತಿಯಿಂದ ಬಿಡದಿ ಟೌನ್‌ಶಿಪ್ ವಿಚಾರವಾಗಿ ಯಾರ ಅವಧಿಯಲ್ಲಿ ಏನೇನು ಕೆಲಸ ಆಗಿತ್ತು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರಗಳೊಂದಿಗೆ ಪತ್ರಕೆಗಳಲ್ಲಿ ಜಾಹೀರಾತು ನೀಡುತ್ತೇವೆ ಎಂದು ಬಾಲಕೃಷ್ಣ ತಿಳಿಸಿದರು.


ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ನಾನು, ಬಾಲಕೃಷ್ಣ ಹಾಗೂ ಅವರ ತಂದೆ ಎಚ್.ಜಿ. ಚೆನ್ನಪ್ಪನವರು ಸಚಿವರಾಗಿ ತಾಲೂಕಿಗೆ ಸೇವೆ ಸಲ್ಲಿಸುವ ಅವಕಾಶ ಕಾಂಗ್ರೆಸ್ ಪಕ್ಷದಿಂದ ಸಿಕ್ಕಿದೆ. ಈಗ ಬಾಲಕೃಷ್ಣ ಅವರಿಗೆ ಸಿಕ್ಕಿರುವ ಈ ಅವಕಾಶದಿಂದ ತಾಲೂಕು ಮತ್ತು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ನಮ್ಮ ಜಿಲ್ಲೆಯವರಾದ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಿದ್ದು ಹೆಚ್ಚು ಶಕ್ತಿ ದೊರೆತಿದೆ. ಮಾಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದರು.

ಶನಿವಾರ ಮಧ್ಯಾಹ್ನ ಸೋಲೂರು- ಮರೂರು ಮಾರ್ಗವಾಗಿ ಪಟ್ಟಣದ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿದ ಸಚಿವರಿಗೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂಮಳೆಗರೆದು ಸ್ವಾಗತಿಸಿದರು. ನಂತರ ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪಟ್ಟಣದ ಕಲ್ಯಾಗೇಟ್‌ನಲ್ಲಿ ನೂರಾರು ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮತ್ತು ಡೊಳ್ಳು ವಾದ್ಯಗಳಿಂದ ಸ್ವಾಗತ ಕೋರಿದರು. ಬಳಿಕ ವಿನಾಯಕಸ್ವಾಮಿಗೆ ಪೂಜೆ ಸಲ್ಲಿಸಿ, ವೇದಿಕೆ ಬಳಿಗೆ ಆಗಮಿಸಿದ ಸಂದರ್ಭದಲ್ಲಿ ಜೆಸಿಬಿಯಿಂದ ಹೂಮಳೆಗರೆದರು. ಅಲ್ಲದೆ, ಬೃಹತ್ ಗಾತ್ರದ ಹಣ್ಣಿನ ಹಾರವನ್ನು ಸಚಿವ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಿಗೆ ಹಾಕಿದ ಅಭಿಮಾನಿಗಳು ಸನ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಬಳಿಕ ಮಾಗಡಿ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವರು, ನಂತರ ಪಟ್ಟಣದ ಜ್ಯೋತಿ ನಗರದ ತಮ್ಮ ನಿವಾಸಕ್ಕೆ ತೆರಳಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಕಲ್ಯಾಗೇಟ್ ಬಳಿ ಅಭಿಮಾನಿಗಳಿಂದ ಸಾರ್ವಜನಿಕ ಊಟದ ವ್ಯವಸ್ಥೆ ಮಾಡಲಾಗಿತ್ತು.

(ಫೋಟೋ ಕ್ಯಾಪ್ಷನ್‌)

ಮಾಗಡಿ ಪಟ್ಟಣದ ಕಲ್ಯಾಗೇಟ್‌ನಲ್ಲಿ ನೂತನ ಸಚಿವ ಬಾಲಕೃಷ್ಣ ಅವರಿಗೆ ಅಭಿಮಾನಿಗಳು ಬೃಹತ್ ಹಣ್ಣಿನ ಹಾರ ಹಾಕಿ ಸ್ವಾಗತಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಇತರರಿದ್ದರು.