ಸಾರಾಂಶ
ಧಾರವಾಡ: ಪ್ರತಿಭೆ ಬರೀ ಅಂಕಗಳಿಗೆ ಸೀಮಿತ ಅಲ್ಲ. ಕ್ರೀಡೆ, ಹಾಡು, ಚಿತ್ರಕಲೆ ಅಂತಹ ಅನೇಕ ವಿಷಯಗಳ ಆಸಕ್ತಿ ಗುರುತಿಸಿ ಮಗುವಿಗೆ ತರಬೇತಿ ನೀಡಿದರೆ ಮಗು ತನ್ನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬಲ್ಲದು. ಅಂತೆಯೇ, ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾ ತರಬೇತಿ ನೀಡಲು ಪ್ರಾಯೋಜಿತ ಕೊಡಿಸಲು ತಾವು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ಪೊಲೀಸ್ ಹೆಡ್‌ಕ್ವಾರ್ಟಸ್‌ನಲ್ಲಿರುವ ಪೊಲೀಸ್ ಮಕ್ಕಳ ವಸತಿ ಶಾಲೆಗೆ ಕೋಕ್ ಇಂಡಿಯಾ ಕಂಪನಿಯ ಸಹಕಾರದಲ್ಲಿ ₹2 ಕೋಟಿ ವೆಚ್ಚದಲ್ಲಿ ವಸತಿ ನಿಲಯ ಹಾಗೂ ಭೋಜನಾಲಯದ ಭೂಮಿಪೂಜೆ ನೆರವೇರಿಸಿದ ಅವರು, ವಸತಿ ಶಾಲೆ ಇರುವ ಕಾರಣ ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಗುಣಮಟ್ಟದ ತರಬೇತಿ ನೀಡಲು ವ್ಯವಸ್ಥೆ ಮಾಡುವುದಾಗಿ ಜೋಶಿ ಭರವಸೆ ನೀಡಿದರು.ಜಗತ್ತಿನಲ್ಲಿ ಭಾರತ ದೇಶ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬುದೇ ಪ್ರಧಾನಿ ಮೋದಿ ಅವರ ಗುರಿ. ಅವರ ಗುರಿ ಈಡೇರಿಸಲು ಪ್ರತಿಯೊಂದು ಅವಕಾಶವನ್ನು ನಾವು ಬಳಸಿಕೊಳ್ಳಬೇಕಿದೆ. ಈಗಾಗಲೇ ಜಾರ್ಖಂಡ್‌ನಲ್ಲಿ ₹350 ಕೋಟಿ ವೆಚ್ಚದಲ್ಲಿ ವಿಶೇಷವಾಗಿ ಕ್ರೀಡಾ ಶಾಲೆ ಸ್ಥಾಪಿಸಲಾಗಿದೆ. ಒಂದು ಹೊತ್ತು ಮಾತ್ರ ಅಧ್ಯಯನ ಇದ್ದು, ನಂತರದಲ್ಲಿ ಇಡೀ ದಿನ ಮಕ್ಕಳು ತಮಗಿಷ್ಟವಾದ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಾಗೂ ಧಾರವಾಡದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಅತ್ಯಂತ ದೊಡ್ಡ ಒಳಾಂಗಣ ಕ್ರೀಡಾಂಗಣ ಸ್ಥಾಪಿಸಲಾಗುತ್ತಿದೆ. ಕ್ರೀಡೆಯಲ್ಲೂ ಸ್ಥಳೀಯ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾಧನೆಗೆ ನಾವು ಕಾರಣರಾಗಬೇಕಿದೆ ಎಂದರು.
ಪ್ರಸ್ತುತ ಜಗತ್ತಿಗೆ ಮಾನವ ಸಂಪನ್ಮೂಲದ ಅಗತ್ಯ ಹೆಚ್ಚಿದೆ. ಕೆಲಸಕ್ಕೆ ಕೌಶಲ್ಯ ಹೊಂದಿದವರ ಸಂಖ್ಯೆ ಕಡಿಮೆ ಇದೆ. ಆದರೆ, ಭಾರತದಲ್ಲಿ ಜನಸಂಖ್ಯೆ ಜೊತೆಗೆ ಕೌಶಲ್ಯವೂ ಇದೆ. ಹೀಗಾಗಿ 5ನೇ ಆರ್ಥಿಕ ಶಕ್ತಿ ಹಾಗೂ ವಿದೇಶಿ ವಿನಿಮಯಲ್ಲಿ 4ನೇ ಸ್ಥಾನದಲ್ಲಿದ್ದೇವೆ. ಸುರಕ್ಷತೆ ದೃಷ್ಟಿಯಿಂದ ಬೇರೆ ದೇಶದಲ್ಲಿಟ್ಟದ ಬಂಗಾರವನ್ನು ಮರಳಿ ನಮ್ಮಲ್ಲಿ ತರಲಾಗುತ್ತಿದೆ. ಇನ್ನೇರೆಡು ವರ್ಷಗಳಲ್ಲಿ ನಾವು 3ನೇ ಆರ್ಥಿಕ ಶಕ್ತಿಯಾಗಿ ಬೆಳೆಯಲಿದ್ದೇವೆ. ಹೀಗಾಗಿ ಮಾನವ ಸಂಪನ್ಮೂಲ ಉಳಿಸಿ ಬೆಳೆಸಲು ಶಿಕ್ಷಣ, ಕ್ರೀಡೆ ಅಂತಹ ಕ್ಷೇತ್ರಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಸಾಕಷ್ಟು ವೆಚ್ಚ ಸಹ ಮಾಡಲಿದೆ ಎಂದು ಜೋಶಿ ಹೇಳಿದರು.ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸದ್ಯ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಬರೀ ಪೊಲೀಸರ ಮಕ್ಕಳಿದ್ದು ಬೇರೆ ಮಕ್ಕಳು ಹಾಗೂ ಬಾಲಕಿಯರಿಗೂ ಅವಕಾಶ ಸಿಗುವಂತೆ ಪೊಲೀಸ್ ಇಲಾಖೆ ತೀರ್ಮಾನ ಕೈಗೊಳ್ಳಬೇಕು. ಜೊತೆಗೆ ಆಡಳಿತದಲ್ಲಿ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೇ ಶಿಕ್ಷಣ ತಜ್ಞರನ್ನು ಬಳಸಿಕೊಳ್ಳಲು ಮತ್ತು ಪ್ರವೇಶಾತಿ ಹೆಚ್ಚಿಸಲು ಎಸ್ಪಿ ಅವರಿಗೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಈ ಹಿಂದಿನ ಕೆಲ ಪೊಲೀಸ್ ಹಿರಿಯ ಅಧಿಕಾರಿಗಳ ಕುತಂತ್ರದಿಂದ ಶಾಲೆ ಬಂದ್ ಆಗುವ ಹಂತಕ್ಕೆ ಬಂದಿತ್ತು. ನಮ್ಮ ಪ್ರಯತ್ನದಿಂದ ಶಾಲೆಯನ್ನು ಉಳಿಸಿಕೊಳ್ಳಲಾಗಿದೆ. ಬೇರೆ ಮಕ್ಕಳಿಗೂ ಇಲ್ಲಿ ಪ್ರವೇಶಾವಕಾಶ ನೀಡುವ ಮೂಲಕ ಪ್ರವೇಶಾತಿ ಹೆಚ್ಚಿಸಲು ಸೂಚಿಸಿದರು. ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಮಾಜಿ ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ಶಾಕೀರ ಸನದಿ ಮತ್ತಿತರರು ಇದ್ದರು.