ಗಣಿನಗರಿ ಬಳ್ಳಾರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿತ

| Published : Jun 12 2024, 12:38 AM IST

ಸಾರಾಂಶ

ಕಳೆದ ವರ್ಷ ಒಂದಷ್ಟು ಚೇತರಿಕೆ ಕಂಡಿದ್ದ ಬಳ್ಳಾರಿಯ ರಿಯಲ್ ಎಸ್ಟೇಟ್ ಉದ್ಯಮ ಕಳೆದ ಏಳೆಂಟು ತಿಂಗಳಿಂದ ತೀವ್ರ ಕುಸಿತ ಕಂಡಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತಾದರೂ, ಖರೀದಿದಾರರ ಪ್ರಮಾಣ ಏರಲಿಲ್ಲ.

ಬಳ್ಳಾರಿ: ಕಳೆದ ವರ್ಷ ಒಂದಷ್ಟು ಚೇತರಿಕೆ ಕಂಡಿದ್ದ ಗಣಿನಗರಿಯ ರಿಯಲ್ ಎಸ್ಟೇಟ್ ಉದ್ಯಮ ಕಳೆದ ಏಳೆಂಟು ತಿಂಗಳಿಂದ ತೀವ್ರ ಕುಸಿತ ಕಂಡಿದ್ದು, ಹೂಡಿಕೆದಾರರು ಸಂಕಷ್ಟ ಎದುರಿಸುವಂತಾಗಿದೆ. ಆದರೆ, ನಿವೇಶನ ದರ ಇಳಿಕೆಯಿಂದ ಸೈಟ್ ಖರೀದಿಸುವ ಕನಸು ಹೊತ್ತಿರುವ ಮಧ್ಯಮ ವರ್ಗದವರು ನಿರುಮ್ಮಳಗೊಂಡಿದ್ದಾರೆ.

ಇಲ್ಲಿನ ಅನೇಕ ಉದ್ಯಮಿಗಳೇ ಹೇಳುವ ಪ್ರಕಾರ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತಾದರೂ, ಖರೀದಿದಾರರ ಪ್ರಮಾಣ ಏರಲಿಲ್ಲ.

ನೆರೆಯ ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಉದ್ಯಮಿಗಳು ಹೂಡಿಕೆಗೆ ಬಳ್ಳಾರಿಯನ್ನೇ ಆಯ್ಕೆ ಮಾಡಿಕೊಂಡರು. ಹೆಚ್ಚು ಲಾಭದಾಯಕ ಎಂಬ ಕಾರಣಕ್ಕಾಗಿ ಸ್ಥಳೀಯರು ಸಹ ರಿಯಲ್ ಎಸ್ಟೇಟ್ ಕಡೆ ಆಸ್ಥೆ ವಹಿಸಿದರು. ಕಳೆದ ಎರಡು ವರ್ಷಗಳಿಂದ ಒಂದಷ್ಟು ಚೇತರಿಕೆಯ ಹಾದಿ ಕಂಡುಕೊಂಡಿದ್ದ ಉದ್ಯಮ ಕಳೆದ ಏಳೆಂಟು ತಿಂಗಳಲ್ಲಿ ತೀವ್ರ ಕುಸಿತವಾಗಿದೆ. ಇದು ಉದ್ಯಮದಾರರಿಗೆ ಸಂಕಷ್ಟ ತಂದೊಡ್ಡಿದ್ದರೆ, ಸೈಟ್‌ ಖರೀದಿಸುವ ಕನಸು ಕಂಡವರಿಗೆ ನೆಮ್ಮದಿ ಮೂಡಿಸಿರುವುದಂತೂ ಸತ್ಯ.

ನಗರದಲ್ಲಿ ಮೂಲ ಸೌಕರ್ಯಗಳ ಕೊರತೆ ಹಾಗೂ ಅಗತ್ಯಕ್ಕೂ ಮೀರಿ ಬೆಳೆದ ಲೇಔಟ್‌ಗಳಿಂದಾಗಿ ಉದ್ಯಮ ಹಿನ್ನಡೆ ಕಂಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ನಿವೇಶನ ದರ ಏರಿಕೆ-ಖರೀದಿದಾರರ ಕೊರತೆ: ಬಳ್ಳಾರಿ ರಿಯಲ್ ಎಸ್ಟೇಟ್‌ಗೆ ಸೂಕ್ತ ಜಾಗ ಎಂಬ ಇಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಾಯಿತು. ಲೇಔಟ್‌ಗಳನ್ನು ನಿರ್ಮಿಸಲು ಆರಂಭಿಸಿದರು. ಪರಿಣಾಮ; ನಗರದಲ್ಲಿ ಯಾವುದೇ ರಸ್ತೆಗೆ ತೆರಳಿದರೂ ಲೇಔಟ್‌ಗಳು ಕಂಡು ಬರುತ್ತಿವೆ. ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿರುವ ಉದ್ಯಮಿಗಳು ದರ ಕಡಿತಗೊಳಿಸಿದರೆ, ನಷ್ಟಗೊಳ್ಳುವ ಭೀತಿಯಲ್ಲಿದ್ದಾರೆ. ಸಹಜವಾಗಿ ದರ ಹೆಚ್ಚಳಗೊಂಡರೆ ಮಧ್ಯಮವರ್ಗದ ಖರೀದಿದಾರರು ಹಿಂದೆ ಸರಿಯುತ್ತಾರೆ.

ಇದು ಉದ್ಯಮದ ಬೆಳವಣಿಗೆಯ ಕುಸಿತಕ್ಕೂ ಕಾರಣವಾಗಿಸಿದೆ. ಈಗಾಗಲೇ ಕಾರ್ಯಗತವಾದ ಲೇಔಟ್‌ಗಳು ಹೊರತುಪಡಿಸಿದರೆ, ಹೊಸದಾಗಿ ಲೇಔಟ್‌ಗಳ ನಿರ್ಮಾಣಕ್ಕೆ ಉದ್ಯಮಿಗಳು ಆಸಕ್ತಿ ವಹಿಸುತ್ತಿಲ್ಲ. ಈಗಾಗಲೇ ಹೂಡಿಕೆ ಮಾಡಿರುವ ಉದ್ಯಮಿಗಳು ಸೈಟ್‌ಗಳ ಬೇಡಿಕೆ ಇಲ್ಲದೆ ಕಂಗಾಲಾಗಿದ್ದಾರಲ್ಲದೆ, ದರವನ್ನು ಒಂದಷ್ಟು ಕಡಿತಗೊಳಿಸಿ, ನಷ್ಟದ ಪ್ರಮಾಣವನ್ನು ತೂಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಭೂಮಿ ದರ ಭಾರೀ ಹೆಚ್ಚಳ: ಕಳೆದ ಎರಡು ವರ್ಷಗಳ ಹಿಂದೆ ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಂಡುಕೊಳ್ಳುತ್ತಿದ್ದಂತೆಯೇ ಭೂಮಿ ದರ ವಿಪರೀತ ಏರಿಕೆಯಾಯಿತು. ನಗರದ ತಾಳೂರು ರಸ್ತೆ, ಸಿರುಗುಪ್ಪ ರಸ್ತೆ, ಮೋಕಾ ರಸ್ತೆಗಳಲ್ಲಿ ಭೂಮಿ ದರ ಗಗನಕ್ಕೇರಿತು. ಈ ಮೂರು ರಸ್ತೆಗಳಲ್ಲಿ ಎಕರೆಗೆ ₹3ರಿಂದ ₹4 ಕೋಟಿ ವರೆಗೆ ಹೆಚ್ಚಾಯಿತು. ಒಂದೆಡೆ ಭೂಮಿ ಹೆಚ್ಚಳ, ಮತ್ತೊಂದೆಡೆ ಸರ್ಕಾರದ ಬಿಗಿ ನಿಯಮಗಳು, ನೋಂದಣಿ ಶುಲ್ಕದಲ್ಲಿ ಭಾರೀ ಏರಿಕೆ ಸೇರಿದಂತೆ ನಾನಾ ಶುಲ್ಕಗಳ ಹೊರೆಗಳು ಉದ್ಯಮಿದಾರರನ್ನು ಕಂಗೆಡಿಸಿದೆ. ಸಹಜವಾಗಿ ಭೂಮಿ ದರ ಹೆಚ್ಚಳ, ನೋಂದಣಿಯ ಶುಲ್ಕಗಳ ಏರಿಕೆಗಳು ನಿವೇಶನ ಖರೀದಿದಾರರ ಮೇಲೆಯೇ ಬೀಳುತ್ತದೆ. ಇದು ನಿವೇಶನ ದರ ಏರಿಕೆಗೆ ಕಾರಣವಾಗಿದೆ.

ಬರದ ಪರಿಣಾಮ: ಕಳೆದ ಮೂರು ವರ್ಷಗಳಿಂದ ಕಾಡುತ್ತಿರುವ ಬರಗಾಲ ಸಹ ರಿಯಲ್ ಎಸ್ಟೇಟ್ ಉದ್ಯಮ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಬರಗಾಲದಿಂದ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟಿನಲ್ಲೂ ಕುಸಿತವಿದೆ. ಬರಗಾಲ ಪೀಡಿತ ಪ್ರದೇಶದ ಜನರು ನಗರ ಪ್ರದೇಶಗಳಲ್ಲಿ ನಿವೇಶನ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿಯೇ ನಗರದ ಹೊಸದಾಗಿ ನಿರ್ಮಾಣಗೊಂಡಿರುವ ಅನೇಕ ವಸತಿ ಸಮುಚ್ಚಯಗಳು ಖಾಲಿ ಖಾಲಿಯಾಗಿ ಉಳಿದಿವೆ. ರಿಯಲ್ ಎಸ್ಟೇಟ್ ಉದ್ಯಮದ ಕುಸಿತ ಕನ್‌ಸ್ಟ್ರಕ್ಷನ್ ವಲಯದ ಮೇಲೂ ಪರಿಣಾಮ ಬೀರಿದೆ.