ಸಾರಾಂಶ
ಶಿಗ್ಗಾಂವಿ: ಪಟ್ಟಣದ ಜಯನಗರದಲ್ಲಿಯ ರಫಿಕ್ ಕಣವಿ ಎಂಬ ಬಾಲಕನಿಗೆ ಬೀದಿ ನಾಯಿ ದಾಳಿ ಮಾಡಿ ಮರ್ಮಾಂಗಕ್ಕೆ ಕಚ್ಚಿದ್ದು ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಗೊಂಡ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಗ್ಗಾಂವಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮತ್ತು ವೃದ್ಧರ ಮೇಲೆ ದಾಳಿ ಮಾಡುತ್ತಿವೆ. ಬೀದಿನಾಯಿಗಳನ್ನು ಸ್ಥಳಾಂತರಿಸುವಂತೆ ಪುರಸಭೆಯವರಿಗೆ ಸಾರ್ವಜನಿಕರು ಒತ್ತಾಯಿಸುತ್ತಿದ್ದು, ಈಗಾಗಲೇ ಕಳೆದ ೨ ತಿಂಗಳಲ್ಲಿ ವೃದ್ಧ ಸೇರಿ ೬-೭ಕ್ಕೂ ಹೆಚ್ಚು ಮಕ್ಕಳ ಮತ್ತು ಯುವಕರ ಮೇಲೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದರೂ ಪುರಸಭೆಯವರು ಮಾತ್ರ ಸಂಬಂಧವಿಲ್ಲದವರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ರಾತ್ರಿ ಹಾಗೂ ಸಾಯಂಕಾಲದ ವೇಳೆಯಲ್ಲಿ ಮಹಿಳೆಯರು ಹೊರಗಡೆ ನಡೆದಾಡಲಾಗುತ್ತಿಲ್ಲ, ಇನ್ನು ಬೀದಿನಾಯಿಗಳಿಂದ ಬೈಕ್ ಸವಾರರೂ ಸಹಿತ ಆತಂಕದಲ್ಲಿ ಬೈಕ್ ಚಲಾಯಿಸುವ ಸ್ಥಿತಿಯಿದ್ದು, ನಿರ್ಭಿಡೆಯಿಂದ ನಡೆದಾಡಲು ಪುರಸಭೆಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೀದಿನಾಯಿಗಳನ್ನು ಸ್ಥಳಾಂತರಿಸಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆದು ಕ್ರಮ ಜರುಗಿಸಬೇಕು, ಈಗಾಗಲೇ ಆ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಲಾಗಿದೆ. ಬೀದಿನಾಯಿಗಳಿಗೆ ಸಂತಾನಹರಣದ ಇಂಜಕ್ಷನ್ ಚಿಕಿತ್ಸೆ ಮಾತ್ರ ಪುರಸಭೆ ವ್ಯಾಪ್ತಿಯಲ್ಲಿ ಬರುತ್ತದೆ ಒಟ್ಟಾರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿನಾಯಿಗಳ ಕುರಿತು ಸಾರ್ವಜನಿಕರಿಗೆ ಇರುವ ಆತಂಕ ದೂರ ಮಾಡಲು ಕ್ರಮ ಜರುಗಿಸಲಾಗುವುದು ಶಿಗ್ಗಾಂವಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಧನಂಜಯ ಕಟ್ಟಿಮನಿ ಹೇಳುತ್ತಾರೆ.ಬೀದಿನಾಯಿಗಳು ಆಹಾರವನ್ನು ಅರಸಿ ಬಂದು ಮೂಳೆಗಳಂತಹ ಪದಾರ್ಥಗಳನ್ನು ತಂದು ರಸ್ತೆಗಳಲ್ಲಿಯೇ ತಿನ್ನುತ್ತ ಕುಳಿತುಕೊಳ್ಳುತ್ತಿವೆ. ರಕ್ತದ ರುಚಿ ಕಂಡ ಬೀದಿನಾಯಿಗಳು ಆಟವಾಡುತ್ತಿರುವ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ ಜೊತೆಗೆ ವಾಹನ ಸವಾರರಿಗೆ ತೊಂದರೆ ಮಾಡುತ್ತಿವೆ. ಈಗ ನನ್ನ ಮಗನ ಮರ್ಮಾಂಗಕ್ಕೆ ನಾಯಿ ಕಚ್ಚಿದ್ದು ಅದೃಷ್ಟವಶಾತ್ ಪ್ರಾಣಕ್ಕೆ ಏನು ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ ಇನ್ನಾದರೂ ಪುರಸಭೆಯವರು ಬೀದಿನಾಯಿಗಳನ್ನು ಸ್ಥಳಾಂತರಿಸಬೇಕು ಎಂದು ಬಾಲಕನ ತಂದೆ ರಿಯಾಜ್ ಕಣವಿ ಹೇಳುತ್ತಾರೆ.