ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಮತಗಳ್ಳತನ ಆಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಆ ನಿರ್ದಿಷ್ಟ ವಿಳಾಸಗಳ ಮಾಲೀಕರು, ನಿವಾಸಿಗಳ ಪೈಕಿ ಕೆಲವರು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಹತ್ತಾರು ಜನ ಏಕಕಾಲದಲ್ಲಿ ಮತದಾನ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ ಅವರು ಪ್ರಾತ್ಯಕ್ಷಿಕೆ (ಪಿಪಿಟಿ) ನೀಡುವಾಗ ಮಹದೇವಪುರದಲ್ಲಿ ಒಂದೇ ಮನೆಯಿಂದ 65 ಜನ ಹಾಗೂ ಮತ್ತೊಂದು ಮನೆಯಿಂದ 80 ಜನ ಮತದಾನ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.ಈ ಬಗ್ಗೆ ನಗರದ ಅಧಿಕಾರಿಗಳು, ಆಯಾ ವಿಳಾಸಗಳಿಗೆ ಭೇಟಿ ನೀಡಿ ನಿವಾಸಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆಯಾ ಮನೆ, ಆಸ್ತಿಗಳ ಮಾಲೀಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಂದೇ ಸಲಕ್ಕೆ ಅಷ್ಟು ಮಂದಿ ಮತದಾನ ಮಾಡಲು ಸಾಧ್ಯವಿಲ್ಲ. ಆದರೆ, ಈ ವಿಳಾಸದಲ್ಲಿ ವಾಸವಿದ್ದವರು ಅನೇಕ ವರ್ಷಗಳ ಅವಧಿಯಲ್ಲಿ ಮತದಾರರ ಗುರುತಿನ ಚೀಟಿ ಮಾಡಿಸಿಕೊಂಡಿರಬಹುದು ಎಂದಿದ್ದಾರೆ.
ನಂಬರ್ 35ರಲ್ಲಿ 80 ಜನ ವಾಸವಿಲ್ಲ:ಮಹದೇವಪುರದ ಮುನಿರೆಡ್ಡಿ ಗಾರ್ಡನ್‌ನಲ್ಲಿರುವ ಮನೆ ನಂಬರ್ 35ರಲ್ಲಿ 80 ಜನರಿದ್ದು, ಮತ ಹಾಕಿದ್ದಾರೆ ಎಂಬ ಆರೋಪ ಬಗ್ಗೆ ಮನೆ ಮಾಲೀಕ ಮಿಥುನ್ ರೆಡ್ಡಿ ಪ್ರತಿಕ್ರಿಯಿಸಿ, ಪಿತ್ರಾರ್ಜಿತವಾಗಿ ತಾವು ಹೊಂದಿರುವ ಹೊಲಗಳಲ್ಲಿ ಹಲವು ಮನೆಗಳನ್ನು ಕಟ್ಟಿಸಿಕೊಳ್ಳಲಾಗಿದೆ. ದೊಡ್ಡ ಆಸ್ತಿಯಾಗಿರುವ ಹೊಲಗಳಿಗೆ ಒಂದೇ ಸರ್ವೇ ನಂಬರ್ ಇರುತ್ತದೆ. ಒಂದೇ ಸರ್ವೇ ನಂಬರ್‌ನಲ್ಲಿ ಹೆಚ್ಚು ಮನೆಗಳಿರುವ ಕಾರಣ ಮತದಾರರು ಕೂಡ ಹೆಚ್ಚು ಇರುತ್ತಾರೆ. ಒಂದೇ ನಂಬರ್ ಇದೆ ಎಂದ ಮಾತ್ರಕ್ಕೆ ಮನೆಯೂ ಒಂದೇ ಇದೆ ಎಂದು ಅರ್ಥವಲ್ಲ ಎನ್ನುತ್ತಾರೆ.ಇನ್ನು 35 ಸಂಖ್ಯೆಯ ಆಸ್ತಿಯಲ್ಲಿ ಕಾರ್ಮಿಕರ ವಾಸಕ್ಕಾಗಿ ಒಂದು ಪುಟ್ಟ ಮನೆ ಬಾಡಿಗೆ ಪಡೆದಿರುವ ಹೊಟೇಲ್‌ವೊಂದರ ಮಾಲೀಕ ಸದಾನಂದ ಶೆಟ್ಟಿ ಮಾತನಾಡಿ, ಬರೀ 100 ಚದರಡಿಯ ಮನೆಯಲ್ಲಿ 80 ಜನ ವಾಸವಿಲ್ಲ. ನಾನು 2003ರಿಂದ ಹೋಟೆಲ್ ನಡೆಸುತ್ತಿದ್ದೇನೆ. ಈ ಹೋಟೆಲ್, ಒಂದು ಮನೆ ಮತ್ತು ಶೆಡ್ ಸಂಖ್ಯೆ ಕೂಡ 35 ಆಗಿದೆ. ಅನೇಕ ವರ್ಷಗಳಿಂದ ಅನೇಕರು ನನ್ನ ಹೋಟೆಲ್‌ನಲ್ಲಿ ಕೆಲಸಕ್ಕೆ ಬಂದು ಹೋಗಿದ್ದಾರೆ. ಚುನಾವಣೆ ಇದ್ದಾಗ ಮತ ಹಾಕಲೆಂದು ಹೆಸರು ನೋಂದಾಯಿಸಿಕೊಂಡಿರುತ್ತಾರೆ. ಒಂದಿಬ್ಬರು ತೀರಿಕೊಂಡಿದ್ದಾರೆ. ಈ ಬಾರಿ ಏಳೆಂಟು ಜನರಿದ್ದು, ಅವರು ಮತ ಹಾಕಿದ್ದಾರೆ. ಆದರೆ, ಒಂದೇ ಮನೆಯಿಂದ 80 ಜನ ಮತ ಹಾಕಲು ಸಾಧ್ಯವಿಲ್ಲ. ಅಷ್ಟು ಜನ ಇಲ್ಲಿಲ್ಲ. ನಾನಂತು ಯಾವುದೇ ಪಕ್ಷದಲ್ಲಿಲ್ಲ. ವ್ಯಾಪಾರ ಮಾಡಲು ಬಂದಿದ್ದೇನೆ. ಈಗ ಇರುವ ಕೆಲಸಗಾರರು ಮತ್ತು ಈ ಹಿಂದೆ ಇದ್ದು ಹೋದವರ ಮಾಹಿತಿ ಕೂಡ ನನ್ನ ಬಳಿ ಇದೆ ಎಂದು ಸದಾನಂದ ಹೇಳಿದ್ದಾರೆ.ಕ್ಲಬ್‌ನ ವಿಳಾಸ: ಇನ್ನು ಹಗದೂರಿನಲ್ಲಿರುವ ಒಂದು ಮನೆಯಲ್ಲಿ 65 ಜನ ಮತದಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, 65 ಜನ ಮತದಾರರು ನೋಂದಣಿ ಮಾಡಿಕೊಂಡಿರುವ ಸ್ಥಳ ‘ದಿ 153 ಬಿಯರ್ ಸ್ಟ್ರೀಟ್’ ಹೆಸರಿನ ಕ್ಲಬ್ ಆಗಿದೆ. ಈ ಕುರಿತು ಕ್ಲಬ್‌ನ ಸಿಬ್ಬಂದಿ ಪ್ರವೀಣ್ ಮಾತನಾಡಿ, ಈ ಹಿಂದೆ ಕೆಲಸ ಮಾಡಿರುವ ಕಾರ್ಮಿಕರು ಚುನಾವಣೆ ವೇಳೆ ಹೆಸರು ನೋಂದಣಿ ಮಾಡಿಕೊಂಡಿರಬಹುದು. ಅದರಲ್ಲಿ ಕೆಲವರು ಮತದಾನ ಮಾಡಿರಬಹುದು. ಹೊರ ರಾಜ್ಯದವರು ಮತ್ತು ಸ್ಥಳೀಯರು ಕೆಲಸಕ್ಕೆ ಬರುವುದು, ಹೋಗುವುದು ಮಾಡುತ್ತಿರುತ್ತಾರೆ. ಈಗ ಹೇಳಿರುವ ಪಟ್ಟಿಯಲ್ಲಿರುವ ಜನ ನಮ್ಮಲ್ಲಿ ಕೆಲಸ ಮಾಡುತ್ತಿಲ್ಲ. ಕ್ಲಬ್‌ನ ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಯಾರಾದರೂ ಹೆಸರು ಸೇರಿಸಿಕೊಂಡಿದ್ದರೆ ಅದು ನಮಗೆ ಗೊತ್ತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.-ಬಾಕ್ಸ್-ವಿಶಾಲ್ ಸಿಂಗ್ ಅಸಲಿ ಮತದಾರಸರ್ಜಾಪುರ ರಸ್ತೆಯಲ್ಲಿರುವ ಸನ್ ಸಿಟಿ ಗ್ಲೋರಿಯಾ ಅಪಾರ್ಟ್‌ಮೆಂಟ್‌ನ ನಿವಾಸಿ ವಿಶಾಲ್ ಸಿಂಗ್ ಬೇರೆ ಬೇರೆ ಕಡೆ ವಿಳಾಸ ಹೊಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಪಾಂಡುರಂಗ ಅವರು, ಉತ್ತರ ಭಾರತ ಮೂಲದ ವಿಶಾಲ್ ಸಿಂಗ್ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದರು. ಮಾರತ್ತಹಳ್ಳಿಯಲ್ಲಿದ್ದ ಅವರು ಈ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರ ಆಗಿದ್ದರು. ಬೇರೆ ರಾಜ್ಯದಿಂದ ಬಂದವರಾಗಿದ್ದರೂ ಹೆಸರು ನೋಂದಣಿ ಮಾಡಿಕೊಂಡು ಮತದಾನ ಮಾಡಬೇಕು ಎಂದು ಎಲ್ಲರಿಗೂ ಅಧ್ಯಕ್ಷನಾಗಿ ಸಲಹೆ ನೀಡಿದ್ದೆ.ವಿಶಾಲ್ ಸಿಂಗ್ ಕೂಡ ಮಾರತ್ತಹಳ್ಳಿಯಿಂದ ಸನ್ ಸಿಟಿ ಗ್ಲೋರಿಯಾಗೆ ವಿಳಾಸ ಬದಲಾಯಿಸಿ ಮತದಾರರ ಗುರುತಿನ ಚೀಟಿ ಮಾಡಿಸಿದರು. ನನ್ನೊಂದಿಗೆ ಬಂದು ಮತದಾನ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಒಮ್ಮೆ ಮಾತ್ರ ಮತದಾನ ಮಾಡಿದ್ದಾರೆ. ಅವರು ಅಸಲಿ ಮತದಾರ ಎಂದು ಸ್ಪಷ್ಟಪಡಿಸಿದರು.80 ಮತದಾರರು ಇದ್ದ ಮನೆ ಮಾಲಿಕ ಬಿಜೆಪಿ ಬೆಂಬಲಿಗ: ಎಂಬಿಪಾಮತದಾರರ ಪಟ್ಟಿಯಲ್ಲಿನ ಗೋಲ್ಮಾಲ್ ಕುರಿತು ರಾಹುಲ್ ಗಾಂಧಿ ಅವರು ಈಗಾಗಲೇ ಹೇಳಿದ್ದಾರೆ. ರಾಜ್ಯದಲ್ಲಿ ಶುಕ್ರವಾರ ನಡೆದ ಸಮಾವೇಶದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದೆ. 10/10 ಅಡಿ ಮನೆಯಲ್ಲಿ 80 ಮತದಾರರ ವಿಳಾಸವಿದೆ. ಅದರ ಮಾಲಿಕ ಬಿಜೆಪಿ ಬೆಂಬಲಿಗ ಎಂದು ಸಚಿವ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದೇವಪುರದಲ್ಲಿ ನಡೆದ ಅಕ್ರಮ ಮತದಾನ ಕುರಿತು ಮಾಹಿತಿ ನೀಡಲಾಗಿದೆ. ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ಮೆಟ್‌ನಲ್ಲಿ ಕೊಡಿ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒತ್ತಾಯ ಮಾಡಿದೆ. ಮತದಾರ ಪಟ್ಟಿಯ ಮಾಹಿತಿಯನ್ನು 45 ದಿನಗಳಲ್ಲಿ ಅಳಿಸಿ ಹಾಕಲಾಗಿದೆ. ತರಾತುರಿಯಲ್ಲಿ ಯಾಕೆ ಡಿಲೀಟ್ ಮಾಡಲಾಗಿದೆ ಎಂದು ಪ್ರಶ್ನಿಸಿದರು.ಕೇಂದ್ರ ಚುನಾವಣಾ ಆಯೋಗಕ್ಕೆ ರಾಗಾ ಮತಗಳವು ದೂರು: ಪರಂ
ಮತಕಳ್ಳತನ ಬಗ್ಗೆ ರಾಹುಲ್ ಗಾಂಧಿ ಅವರು ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತಾರೆ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಡದೇ ಇರುವುದಕ್ಕೆ ಕೆಲ ನಿಯಮಾವಳಿಗಳಿವೆ. ಅವರು ದೂರು ಕೊಡುವುದಕ್ಕೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗವಿದೆ. ಅವರು ವಿರೋಧ ಪಕ್ಷದ ನಾಯಕರಾಗಿ ಅಲ್ಲಿ ದೂರು ಕೊಟ್ಟರೆ ಹೆಚ್ಚು ಮಹತ್ವ ಬರುತ್ತದೆ ಎಂದರು. ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ ಇವರು ಕೇಂದ್ರಕ್ಕೆ ಕಳುಹಿಸಿ ಕೊಡುತ್ತಾರೆ. ಇವರೇನು ಕ್ರಮ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯವರು ಅದನ್ನೇ ಚರ್ಚೆ ಮಾಡಲಿಕ್ಕೆ ಹೊರಟರೆ ವಿಪರ್ಯಾಸ ಅಷ್ಟೇ ಎಂದು ಹೇಳಿದರು.ರಾಜ್ಯ ಚುನಾವಣಾ ಆಯೋಗದವರು ದಾಖಲೆ ಕೊಡಿ ಅಂತ ಕೇಳಿದ್ದಾರೆ ಅವರಿಗೆ ದಾಖಲೆ, ಪ್ರಮಾಣ ಪತ್ರ ಎಲ್ಲಾ ಕೆಪಿಸಿಸಿಯಿಂದ ಕೊಡುತ್ತಾರೆ. ಪ್ರಮಾಣ ಪತ್ರಕ್ಕೆ ರಾಹುಲ್ ಗಾಂಧಿ ಸಹಿ ಕೊಡಬೇಕು ಅಂತ ಏನಿದೆ ಎಂದು ಪ್ರಶ್ನಿಸಿದ ಅವರು, ಇದು ನಮ್ಮ ರಾಜ್ಯಕ್ಕೆ ಸಂಬಂಧಿಸಿದ್ದು ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿರುವವರು ಅವರು ಕೊಡುತ್ತಾರೆ ಎಂದು ತಿಳಿಸಿದರು.ಬಿಹಾರ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಈ ರೀತಿ ಮಾಡುತ್ತೀದೆಯಾ ಎಂಬ ಆರೋಪವನ್ನು ತಳ್ಳಿ ಹಾಕಿದ ಪರಮೇಶ್ವರ್, ಬಿಹಾರ ಒಂದೇ ಅಲ್ಲಾ, ಇಡೀ ದೇಶದಲ್ಲಿ ಅನೇಕ ಕಡೆ ಚುನಾವಣೆಯಾಗಲಿದೆ. ಇನ್ನು ಒಂದು ವರ್ಷದಲ್ಲಿ ಐದಾರು ರಾಜ್ಯಗಳಲ್ಲಿ ಚುನಾವಣೆ ಬರುತ್ತದೆ. ಅದಕ್ಕೂ ಮೊದಲೇ ಎಚ್ಚರಿಕೆ ವಹಿಸಬೇಕು ಎಂದರು.ಮತಗಳವು ಬಗ್ಗೆ ಕಾನೂನು ಇಲಾಖೆ ಪರಿಶೀಲನೆ: ಸಿಎಂಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿಯವರು ಸಾಕ್ಷಿ ಸಮೇತ ವಿಚಾರಗಳನ್ನು ತಿಳಿಸಿದ್ದಾರೆ. ಈ ವಿಚಾರ ಎಲ್ಲವೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ದಾಖಲಾತಿಗಳ ಬಗ್ಗೆಯೇ ಅವರು ಪ್ರಸ್ತಾಪ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜೊತೆಗೆ, ಒಂದೇ ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ? ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ನಡೆಸಲಿದ್ದು, ಅವರು ನೀಡುವ ಶಿಫಾರಸ್ಸಿನ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರಿಶೀಲನಾ ಕಾರ್ಯವನ್ನು ತ್ವರಿತವಾಗಿ ನಡೆಸಿ ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಲಾಗುವುದು. ಮತದಾರರ ಪಟ್ಟಿಯ ಸಂಬಂಧ ಸಂಪೂರ್ಣ ಅಧಿಕಾರವಿರುವುದು ಚುನಾವಣಾ ಆಯೋಗಕ್ಕೆ ಎಂದರು.2006ರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರೆಲ್ಲಾ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಹಿಂದೆ ನೀವೇ [ಸಿದ್ದರಾಮಯ್ಯ] ಮಾಡಿದ್ದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ನಾನು ಮಾತನಾಡಿಲ್ಲ. ಒಂದು ವೇಳೆ ಸತ್ತವರು ಮತ ಹಾಕಿದ್ದರೆ ಅದಕ್ಕೆ ಯಾರು ಜವಾಬ್ದಾರರು?. ಚುನಾವಣಾ ಆಯೋಗ ಇದಕ್ಕೆ ನೇರ ಹೊಣೆ ಎಂದರು.
ಇವಿಎಂಗಳಲ್ಲಿ, ಮತದಾರರ ಪಟ್ಟಿಗಳಲ್ಲಿ ಕೈವಾಡ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ನನ್ನ ಪ್ರಕಾರ ರಾಹುಲ್ ಗಾಂಧಿಯವರು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಿದ್ದು ನಿಜ ಎಂದರು.ಆ ಚುನಾವಣೆಯಲ್ಲಿ ಪೀಟರ್ ವೀಕ್ಷಕರಾಗಿದ್ದರು, ಅದಕ್ಕೆ ಸಿದ್ದರಾಮಯ್ಯ ಗೆದ್ದರು ಎಂದು ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅವರಿಲ್ಲದೇ ಹೋಗಿದ್ದರೆ ನನ್ನನ್ನು ಸೋಲಿಸುತ್ತಿದ್ದರು ಎಂದರು.ಬಿಜೆಪಿಗರಿಗೆ ಅಧಿಕಾರದ ದಾಹ:
ಬಿಜೆಪಿಗರು ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸಿ ಇವಿಎಂ ಯಂತ್ರವನ್ನು ದುರುಪಯೋಗ ಮಾಡಿಕೊಂಡು ಮತ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ, ರಾಜ್ಯದಲ್ಲಿಯೂ ಸಹ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನೀತಿಯಾಗಿದೆ. ಬಿಜೆಪಿಗರು ಬರೀ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಹೇಳುತ್ತಾರೆ ಅಷ್ಟೇ, ಆದರೆ, ಅವರು ಬರೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನೀತಿಯನ್ನು ಅನುಸರಿಸುವುದಿಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ನಾಯಕರು ಈಗ ಮತಗಳ ಸ್ಥಾನದ ಬಗ್ಗೆ ಪ್ರಸ್ತಾಪಿಸಿರುವುದು ಏಕೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಪ್ಪು ಮಾಡಿ ಸುಳ್ಳು ಹೇಳುತ್ತಿದ್ದಾರೆ. ನಾವು ಈ ಬಗ್ಗೆ ಅಧ್ಯಯನ ಮಾಡಿದ ನಂತರ ವಿಷಯ ತಿಳಿದಿದೆ. ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನಾರು ಸ್ಥಾನಗಳನ್ನು ಗೆಲ್ಲುವುದಾಗಿ ಆಂತರಿಕ ಸಮೀಕ್ಷೆ ತಿಳಿಸಿತ್ತು. ಆದರೆ, ನಾವು ಗೆದ್ದದ್ದು 9 ಸ್ಥಾನಗಳನ್ನು ಮಾತ್ರ. ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ವಿಚಾರಗಳನ್ನು ತಿಳಿಸಿದ್ದಾರೆ. ಈ ಎಲ್ಲವೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ರಾಹುಲ್ ಅವರು ದಾಖಲಾತಿಗಳ ಬಗ್ಗೆಯೇ ಪ್ರಸ್ತಾಪ ಮಾಡಿದ್ದಾರೆ. ಒಂದೇ ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.