ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬುದು ಇಲ್ಲಿ ನಿಜಾರ್ಥದಲ್ಲಿ ಸಾಕಾರವಾಗಿದೆ. ಸರ್ವರೂ ಭ್ರಾತೃತ್ವ, ಪ್ರೀತಿ ಹಂಚಿಕೊಂಡು ಬಾಳುವುದರ ಜೊತೆಗೆ ಕನ್ನಡ ರಾಜ್ಯೋತ್ಸವನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ. ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬಂತೆ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಹೊಂದಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬುದು ಇಲ್ಲಿ ನಿಜಾರ್ಥದಲ್ಲಿ ಸಾಕಾರವಾಗಿದೆ. ಸರ್ವರೂ ಭ್ರಾತೃತ್ವ, ಪ್ರೀತಿ ಹಂಚಿಕೊಂಡು ಬಾಳುವುದರ ಜೊತೆಗೆ ಕನ್ನಡ ರಾಜ್ಯೋತ್ಸವನ್ನು ಒಟ್ಟಾಗಿ ಆಚರಿಸುತ್ತಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ಸಿ.ಶೌಕತ್ ಪಾಷ ಮೆಚ್ಚುಗೆ ವ್ಯಕ್ತಪಡಿಸಿದರು.ಸಾತಗಳ್ಳಿ ಬಡಾವಣೆ ನಾಗರಿಕರ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಟ್ಟೆಯ ಸರ್ವಜನಾಂಗದ ಶಾಂತಿಯ ತೋಟ, ಡಾ.ಎಪಿಜೆ ಅಬ್ದುಲ್ ಕಲಾಂ ಚಿಂತನ ಚಾವಡಿ ಹೆಸರಿನ ಉದ್ಯಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕುವೆಂಪು ಅವರ ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬಂತೆ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಹೊಂದಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಚಿಂತನ ಚಾವಡಿ ಅಧ್ಯಕ್ಷ ಸಿ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಡೆಯೂರು ಸಮೀವುಲ್ಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಜ್ಯೋತಿ, ಖಜಾಂಚಿ ಎಸ್. ಕಿರಣ್ ಕುಮಾರ್, ಸಹ ಕಾರ್ಯದರ್ಶಿ ಆರ್.ವಿನಯ್ ಕುಮಾರ್, ಅಯ್ಯೂಬ್ ಷರೀಫ್, ಸಂಘಟನಾ ಕಾರ್ಯದರ್ಶಿ ಸಿದ್ದಯ್ಯ, ಕಲ್ಯಾಣ್ ಕುಮಾರ್, ಯೋಗಗುರು ನಾಗರಾಜಮೂರ್ತಿ, ನಂದಿನಿ, ರಿಜ್ವಾನ ತಬಸ್ಸುಮ್, ಡಿ.ಆರ್. ಪುಷ್ಪಾ, ನಯಾಜ್ ಪಾಷ, ನಿವೃತ್ತ ಯೋಧ ರತ್ನಾಕರ್ ನಾಯಕ್ ಮೊದಲಾದವರು ಇದ್ದರು.ಕನ್ನಡಹಬ್ಬ ಅಂಗವಾಗಿ ಬಡಾವಣೆಯ ಮಕ್ಕಳು ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಶನಿವಾರ ಪಾವನಾ ಪರಮೇಶ್ ತಂಡದಿಂದ ಕನ್ನಡ ಚಿತ್ರಗೀತೆಗಳ ಗಾಯನ, ಜಾದೂಗಾರ್ ಅವರಿಂದ ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ಏರ್ಪಡಿಸಿದ್ದಾರೆ.
ಬಾಕ್ಸ್...ಜಾತಿ, ಮತ ಮೀರಿದ ಒಗ್ಗಟ್ಟು-.ಸಂಕ್ರಾಂತಿ, ರಂಜಾನ್, ಕ್ರಿಸ್ಮಸ್ ಆಚರಣೆ...
ಸಾತಗಳ್ಳಿ ಬಡಾವಣೆಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಎನ್ನದೇ ಎಲ್ಲರೂ ಜಾತಿ, ಮತ ಮೀರಿ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಪ್ರತಿ ವರ್ಷ ಸೌಹಾರ್ದ ಸಂಕ್ರಾಂತಿ, ರಂಜಾನ್, ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ 9 ವರ್ಷಗಳ ಹಿಂದೆ ''''''''ಚಿಂತನ ಚಾವಡಿ'''''''' ಸ್ಥಾಪಿಸಿದ್ದಾರೆ.ಬಡಾವಣೆ ಅಭಿವೃದ್ಧಿ, ಹಸಿರು ಬಡಾವಣೆಯಾಗಿ ರೂಪಿಸುವುದು, ಸರ್ವರೂ ಸಮಾನತೆ, ಭ್ರಾತೃತ್ವ, ಪ್ರೀತಿ ಹಂಚಿಕೊಂಡು ಸಂತೋಷದಿಂದ ಬಾಳುವುದು, ರಸ್ತೆ, ಒಳಚರಂಡಿ, ಬೀದಿದೀಪ ಮತ್ತಿತರ ಮೂಲಸೌಕರ್ಯಕ್ಕಾಗಿ ಸಾಂಘಿಕ ಆಗ್ರಹ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡುವುದು, ಮಕ್ಕಳು ಸಂಸ್ಕಾರಯುತವಾಗಿ, ಸಾಂಸ್ಕೃತಿಕವಾಗಿ ಒಂದಷ್ಟು ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸುವುದು ಚಿಂತನ ಚಾವಡಿಯ ಉದ್ದೇಶ.
ಶಾಸಕರು ಹಾಗೂ ನಗರಪಾಲಿಕೆ ಸದಸ್ಯರ ಗಮನಕ್ಕೆ ತಂದು, ಕೆಲವು ಉದ್ಯಾನಗಳಿಗೆ ಬೇಲಿ, ನಡಿಗೆ ಪಥ ಮಾಡಿಸಿದ್ದಾರೆ. ಎರಡು ಉದ್ಯಾನಗಳಲ್ಲಿ ಎಲ್ಇಡಿ ಲೈಟ್ ಅಳವಡಿಸಿದ್ದಾರೆ. ಎಲ್ಲಾ ಬೀದಿಗಳಿಗೂ ದೀಪ ಹಾಕಿಸಿದ್ದಾರೆ. ಒಳ ಹಾಗೂ ಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಆಗಿದೆ. ಡಾ,ರಾಜ್ಕುಮಾರ್ ರಸ್ತೆ ಜೋಡಿ ರಸ್ತೆಯಾಗಿ ಪರಿವರ್ತನೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಬೇರೆಡೆ ಸ್ಥಳಾಂತರವಾಗದಂತೆ ಉಳಿಸಿಕೊಂಡಿದ್ದು, ಅನ್ಯರ ಪಾಲಾಗುತ್ತಿದ್ದ ಸರ್ಕಾರಿ ಜಾಗವನ್ನು ಗುರುತಿಸಿ, ಸರ್ಕಾರಿ ಕಾಲೇಜಿನ ಕಟ್ಟಡಕ್ಕೆ ಮಂಜೂರಾತಿ ಮಾಡಿಸಿದ್ದಾರೆ, ಒಳಚರಂಡಿ, ಕಸದ ಸಮಸ್ಯೆ ಬಗೆಹರಿದಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡ ನಡೆಸಿದ್ದಾರೆ. ಉದ್ಯಾನದಲ್ಲಿ ನಾಲ್ಕು ದಿನಗಳಿಗೊಮ್ಮೆ ಎಲ್ಲಾ ಸೇರಿ ನೀರು ಹಾಕುತ್ತಿದ್ದಾರೆ. ದಸರಾ ದೀಪಾಲಂಕಾರ ಈ ಬಡಾವಣೆಗೆ ವಿಸ್ತರಣೆಯಾಗಿದೆ. ಮನೆ ಮನೆ ದಸರಾ ಆಚರಿಸಿದ್ದಾರೆ.ಸಾಮರಸ್ಯ ಮತ್ತಷ್ಟು ಗಟ್ಟಿಗೊಳಿಸಲು ವರ್ಷಕ್ಕೊಮ್ಮೆ ಪ್ರವಾಸ, ಬೆಳದಿಂಗಳ ಊಟ ಮತ್ತಿತರ ಮನರಂಜನಾ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.