ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಸಮಸ್ಯೆಗಳನ್ನು ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮೂಲಕ ಅರಿತು ಪರಿಹರಿಸಲು ಪ್ರಯತ್ನಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹೊಸಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಕಾಲೇಜಿನ ಮಕ್ಕಳು ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಯುವ ಜನತೆ ಗ್ರಾಮೀಣ ಬದುಕಿನ ಕಷ್ಟ ಸುಖಗಳನ್ನು ತಿಳಿದುಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಈ ಶಿಬಿರಗಳು ಅತ್ಯಂತ ಉಪಯುಕ್ತವಾಗಿವೆ. ಎಲ್ಲಾ ವಿದ್ಯಾರ್ಥಿಗಳು ಮನಪೂರ್ವಕವಾಗಿ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.ಸ್ವಚ್ಛತೆ ಹಾಗೂ ಆರ್ಥಿಕ ಸ್ವಾವಲಂಭನೆ ರಾಷ್ಟ್ರೀಯ ಜಾಗೃತಿ ಸೇವಾ ಮನೋಭಾವದ ಬಗ್ಗೆ ಗ್ರಾಮಸ್ಥರಲ್ಲೂ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಏಳು ದಿನಗಳ ಶಿಬಿರದಲ್ಲಿ ಕಲಿತ ಸಮಾಜಮುಖಿ ಚಿಂತನೆಗಳನ್ನು ನಿಮ್ಮ ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಲು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಎಂದರು.
ಮಂಡ್ಯ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ ಶಿಬಿರ ಉದ್ಘಾಟಿಸಿ ಮಾತನಾಡಿ, ಶಿಬಿರಗಳು ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯವನ್ನು ಹೆಚ್ಚಿಸುತ್ತದೆ. ಗ್ರಾಮಗಳು ಮತ್ತು ವೈಯುಕ್ತಿಕವಾಗಿ ಸ್ವಚ್ಛತೆ ಅರಿವು ಮೂಡಿಸುವ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಹಾಗೂ ನಾಯಕತ್ವಗುಣವನ್ನು ಬೆಳೆಸುತ್ತದೆ ಎಂದರು.
ಶಿಸ್ತುಬದ್ಧವಾದ ಜೀವನಕಟ್ಟಿಕೊಳ್ಳಲು ಸಹಕಾರಿಯಾಗುವ ಜೊತೆಗೆ ಶ್ರಮದಾನದ ಸೇವೆ ಮೂಲಕ ಹಳ್ಳಿಗಳ ಚಿತ್ರಣವನ್ನು ಬದಲಾಯಿಸಲು ಸಾಧ್ಯವಿದೆ. ಹೀಗಾಗಿ ಪ್ರತಿವಿದ್ಯಾರ್ಥಿ ಸಮಾಜಮುಖಿಯಾಗಿ ಚಿಂತಿಸಿ ನಿರಂತರವಾಗಿ ಹಳ್ಳಿಗಳಲ್ಲಿ ಶ್ರಮದಾನ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪರಿಸರ ಸ್ವಚ್ಛಗೊಳಿಸಲು ಪ್ರೇರಕ ಶಕ್ತಿಯಾಗಬೇಕು ಎಂದರು.
ಈ ವೇಳೆ ರೈತ ಮುಖಂಡರಾದ ಎಚ್.ಎನ್.ವಿಜಯ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಸ್ವಾಮಿಗೌಡ, ಹಳೇಬೀಡು ಪಿಎಸಿಎಸ್ ನಿರ್ದೇಶಕ ಎಚ್.ಸಿ.ಅರವಿಂದ್, ಗ್ರಾಮದ ಯಜಮಾನರಾದ ಎಚ್.ಎಲ್.ಸಿಂಗ್ರೀಗೌಡ, ಗಿರೀಶ್ ಬಾಬು, ಡೇರಿ ಅಧ್ಯಕ್ಷ ಎಚ್.ಎಲ್.ಸೋಮಶೇಖರ್, ಮೇಲುಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ನಂಜುಂಡಯ್ಯ, ಶಿಬಿರಾಧಿಕಾರಿ ಮತ್ತು ಅಧ್ಯಾಪಕರಾದ ಡಾ.ಭವಾನಿ ಎಲ್, ಡಾ.ಸುಮಾ ಈ, ಸ್ವಾಮಿ ಎಸ್, ಸಂತೋಷ್ ಎನ್.ಅರುಣ್ ಕುಮಾರ್ ಎಚ್.ಸಿ.ರೇಖಾವತಿ, ಪರಮೇಶ್ವರ್ ಸಿ.ಯೋಗೇಶ್ ಎಂ ಎಸ್, ಮಹೇಶ್ ಕುಮಾರ್, ಆಶಾ ಎಚ್.ಬಿ.ಹಲವರು ಇದ್ದರು.