ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುದೇಶ ಮೊದಲು ಎಂಬ ಭಾವನೆಯೊಂದಿಗೆ ಪ್ರತಿಯೊಬ್ಬರೂ ರಾಷ್ಟ್ರೀಯ ಹಿತಾಸಕ್ತಿ ಬೆಳೆಸಿಕೊಂಡು ತಮ್ಮ ಕರ್ತವ್ಯ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಸ್ವಾತಂತ್ರ್ಯದ ನಿಜ ಅರ್ಥ ಸಾಕಾರಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ೮೦ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ವೈಯಕ್ತಿಕ ಸುಖ, ಸಂತೋಷ ಹಾಗೂ ನೆಮ್ಮದಿ ತ್ಯಾಗ ಮಾಡಿ ಹೋರಾಡಿದ ಸಾವಿರಾರು ದೇಶಭಕ್ತರು ಮತ್ತು ಹುತಾತ್ಮರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಬಳಿಕ ಸ್ವಾತಂತ್ರ್ಯ ಚಳವಳಿಗೆ ಭದ್ರ ವೇದಿಕೆ ದೊರೆಯಿತು. ಮಹಾತ್ಮ ಗಾಂಧೀಜಿ ಆಗಮನದೊಂದಿಗೆ ಹೋರಾಟ ಜನಸಾಮಾನ್ಯರ ಚಳವಳಿಯಾಗಿ ರೂಪುಗೊಂಡಿತು. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಹಾಗೂ ಕ್ವಿಟ್ ಇಂಡಿಯಾ ಚಳವಳಿ ದೇಶಾದ್ಯಂತ ನಡೆದವು. ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ ಮತ್ತು ಹೋರಾಟದ ಫಲವಾಗಿ ಸ್ವತಂತ್ರ ರಾಷ್ಟ್ರವಾಯಿತು ಎಂದರು.ಇದೇ ವೇಳೆ ಜಿಲ್ಲೆಯ ಹೊಸಕೊಪ್ಪ ಕೃಷ್ಣರಾಯರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಹಲವು ರೀತಿಯಲ್ಲಿ ಸಂಘಟಿಸಿ ಬಲಪಡಿಸಿದ್ದರು. ಸಾಮಾಜಿಕ ಅಸಮಾನತೆ ವಿರುದ್ಧದ ಹೋರಾಟ, ವಿದೇಶಿ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ, ಚರಕದಿಂದ ನೂಲು ತೆಗೆಯುವುದು, ಖಾದಿ ಬಳಕೆ ಹಾಗೂ ಕಾನೂನು ಭಂಗ ಚಳವಳಿ ಸೇರಿದಂತೆ ಹಲವು ಹೋರಾಟಗಳು ಜಿಲ್ಲೆಯಲ್ಲಿ ನಡೆದಿವೆ ಎಂದು ಹೇಳಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಶಾಸಕರಾದ ಸಿ.ಟಿ. ರವಿ ಹಾಗೂ ಎ.ವಿ. ಗಾಯತ್ರಿ ಶಾಂತೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭಾ ಅಧ್ಯಕ್ಷೆ ಭವ್ಯಾ ಮಂಜುನಾಥ್, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಜಿ.ಪಂ ಸಿಇಒ ಎಚ್..ಎಸ್. ಕೀರ್ತನಾ, ಎಡಿಸಿ ನಂಜುಂಡೇಗೌಡ, ನಗರಸಭಾ ಆಯುಕ್ತ ಬಸವರಾಜ್ ಇದ್ದರು.-- ಬಾಕ್ಸ್--
ಸ್ವಾತಂತ್ರ್ಯ ದಿನಾಚರಣೆ ಪೆರೇಡ್‌ನ ಬಹುಮಾನ ವಿತರಣೆ
ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಡಿ.ರುದ್ರೇಶ್ ನೇತೃತ್ವದಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಎನ್ ಎಸ್‌ಎಸ್ ವಿಭಾಗದಲ್ಲಿ ಐಡಿಎಸ್‌ಜಿ ಕಾಲೇಜು, ಸೇವದಳ ವಿಭಾಗದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ, ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದಲ್ಲಿ ಸೆಂಟ್ ಜೋಸೆಪ್ ಬಾಲಕಿಯರ ಪ್ರೌಢ ಶಾಲೆ, ಶಾಲಾ ತಂಡ ವಿಭಾಗದಲ್ಲಿ ಟೈಮ್ಸ್ ಇಂಟರ್ ನ್ಯಾಷನಲ್ ಸ್ಕೂಲ್, ವಿಶೇಷ ಬಹುಮಾನ ವಿಭಾಗದಲ್ಲಿ ಸರ್ಕಾರಿ ಬಾಲಕ, ಬಾಲಕಿಯರ ಬಾಲ ಮಂದಿರ ಹಾಗೂ ಆಶಾ ಕಿರಣ ಅಂಧ ಮಕ್ಕಳ ಶಾಲೆಗಳಿಗೆ ಸಚಿವ ಕೆ.ಜೆ.ಜಾರ್ಜ್ ಬಹುಮಾನ ವಿತರಿಸಿದರು.ಇನ್ನೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಸವಿಲ್ ಪೊಲೀಸ್ ಪಡೆ, ಗೃಹ ರಕ್ಷಕದಳ, ಅರಣ್ಯ ಇಲಾಖೆ ಹಾಗೂ ನಿವೃತ್ತ ಸೈನಿಕರ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
--ಬಾಕ್ಸ್--ಸಾಂಸ್ಕೃತಿಕ ಕಲಾ ವೈಭವಶಾಲಾ ಮಕ್ಕಳಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ 500ಕ್ಕೂ ಅಧಿಕ ಮಕ್ಕಳು ಜಿಲ್ಲಾ ಆಟದ ಮೈದಾನದಲ್ಲಿ ಏಕಕಾಲದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ವಸ್ತ್ರ ತೊಟ್ಟು, ತ್ರಿವರ್ಣ ಧ್ವಜ ಹಿಡಿದು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು.