ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎಂಬ ಬಸವಣ್ಣನವರ ವಚನದಲ್ಲಿರುವ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಶರಣ ಸಂಸ್ಕ್ರತಿ ಪರಂಪರೆಯಲ್ಲಿ ಜೀವನ ಸಾಗಿಸಿದಂತಾಗುತ್ತದೆ ಎಂದು ಬಳೂಟಗಿಯ ಶಿವಕುಮಾರ ಸ್ವಾಮೀಜಿ ನುಡಿದರು.ಪಟ್ಟಣದ ಬಸವೇಶ್ವರ ದೇವಾಲಯದ ನಂದೀಶ್ವರ ರಂಗಮಂದಿರದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾ ಉತ್ಸವ ಸಮಿತಿ ಮತ್ತು ಬಸವೇಶ್ವರ ಸೇವಾ ಸಮಿತಿ ಸಹಯೋಗದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಮತ್ತು ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಬಸವಾದಿ ಪ್ರಥಮರ ವಚನ ಚಿಂತನ ಪ್ರವಚನದ ಮಂಗಲೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.ಬಸವಾದಿ ಪ್ರಥಮರು ತಮ್ಮ ವಚನಗಳ ಮೂಲಕ ಜೀವನ ಮೌಲ್ಯಗಳನ್ನು ನೀಡಿದ್ದಾರೆ. ವಚನ ಸಾಹಿತ್ಯದಲ್ಲಿನ ಮೌಲ್ಯಗಳನ್ನು ಅರಿತರೆ ಜೀವನ ಸುಂದರವಾಗಿರಲಿದೆ. ಎಷ್ಟೇ ಮೌಲ್ಯದ ಮೊಬೈಲ್ ಇದ್ದರೂ ಅದು ಸಂಪರ್ಕವಾಗಬೇಕಾದರೆ ಅದಕ್ಕೆ ನೆಟ್‌ವರ್ಕ್ ಮುಖ್ಯವಾದಂತೆ ಜೀವನಕ್ಕೆ ವಚನ ಸಾಹಿತ್ಯವು ನೆಟ್‌ವರ್ಕ್ ಇದ್ದಂತೆ. ಅದನ್ನು ಅರಿತರೆ ಜೀವನ ಪಾವನವಾಗುತ್ತದೆ ಎಂದು ಎಂದರು.ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದ ಬಸವೇಶ್ವರರು ಸಮಭಾವದ ಸಂತ. ಅವರು ಸ್ತ್ರೀಕುಲವು ಪುರುಷರಷ್ಟೇ ಸಮಾನರು ಸ್ತ್ರೀಯರಿಗೂ ಸಮಾಜದಲ್ಲಿ ಅವಕಾಶ ಕೊಟ್ಟರು. ಬಸವ ಜಯಂತಿಯನ್ನು ಐದು ದಿನಗಳ ಕಾಲ ಆಚರಣೆ ಮಾಡುವ ಮೂಲಕ ಬಸವೇಶ್ವರರ ಜಾತ್ರೆ ಮಾಡಬೇಕು. ಈ ನೆಲದಲ್ಲಿ ಮಾಂಸದಂಗಡಿಗಳನ್ನು ಮುಖ್ಯ ರಸ್ತೆ ಮೇಲೆ ಇರುವದು ಖೇದಕರ ಸಂಗತಿ. ಈ ಅಂಗಡಿಗಳನ್ನು ಮುಖ್ಯ ರಸ್ತೆ ಹೊರತು ಪಡಿಸಿ ಬೇರೆಡೆ ವ್ಯವಸ್ಥೆ ಮಾಡಿದರೆ ಈ ನೆಲಕ್ಕೆ ಒಂದು ಅರ್ಥ ಬರಲು ಸಾಧ್ಯ. ಕೇವಲ ಬಸವ ತತ್ವ ತೋರಿಕೆಯಾಗದೆ ಅದು ಮನೆ-ಮನಗಳಲ್ಲಿ ಬರುವಂತಾಗಲಿ ಎಂದು ಆಶಿಸಿದರು.ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಸಂಗನಗೌಡ ಚಿಕ್ಕೊಂಡ, ಬಿ.ಕೆ.ಕಲ್ಲೂರ ಮಾತನಾಡಿದರು. ಸೇವಾ ಸಮಿತಿಯ ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಶೇಖರಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಭರತ ಅಗರವಾಲ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಸಂಕನಗೌಡ ಪಾಟೀಲ, ಉಮೇಶ ಹಾರಿವಾಳ, ರವಿ ರಾಠೋಡ, ಮಹಾದೇವಿ ಬಿರಾದಾರ, ಶಂಕರಗೌಡ ಬಿರಾದಾರ, ಉತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಪದಾಧಿಕಾರಿಗಳಾದ ಸಂಗಯ್ಯ ಒಡೆಯರ, ಪ್ರವೀಣ ಪೂಜಾರಿ, ಬಸವರಾಜ ಅಳ್ಳಗಿ, ಮುತ್ತು ಪತ್ತಾರ, ಎಂ.ಬಿ.ತೋಟದ ಇತರರು ಇದ್ದರು.ಶರಣು ಬಸ್ತಾಳ ಪ್ರಾರ್ಥಿಸಿದರು. ಎಂ.ಬಿ.ತೋಟದ ಸ್ವಾಗತಿಸಿದರು. ಎಂ.ಜಿ.ಆದಿಗೊಂಡ ಪ್ರಾಸ್ತವಿಕ ನುಡಿಗಳನ್ನಾಡಿದರು. ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು. ಶರಣಬಸವ ಕುಮಾರಸ್ವಾಮಿ, ಪಂಚಾಕ್ಷರಿ ಹೂಗಾರ ಸಂಗೀತ ಸೇವೆಗೈದರು. ಜಾತ್ರಾಮಹೋತ್ಸವ, ಪ್ರವಚನದ ಯಶಸ್ವಿಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಬಸವನ ಜನ್ಮ ಸ್ಥಳ ಅಭಿವೃದ್ಧಿ:ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಮಹಾದೇವ ಮುರಗಿ ಮಾತನಾಡಿ, ಬಸವ ಜನಿಸಿದ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಗೆ ಸರ್ಕಾರ ಘೋಷಣೆ ಮಾಡಿದೆ. ಈ ಮಂಡಳಿಯ ಬೈಲಾ ಸಿದ್ಧಗೊಳಿಸುವ ಉದ್ದೇಶದಿಂದ ನನಗೆ ಈ ಸ್ಥಾನದಲ್ಲಿ ಸರ್ಕಾರ ಹಾಕಿದೆ. ಈ ಮಂಡಳಿಯಲ್ಲಿ ಯಾವ ಗ್ರಾಮ, ಸ್ಥಳ ಸೇರ್ಪಡೆ ಮಾಡಬೇಕೆಂಬ ಪ್ರಸ್ತಾವನೆ ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹೋಗಿದೆ. ಈ ಭಾಗದಲ್ಲಿ ಚನ್ನಬಸವಣ್ಣ, ನುಲಿ ಚಂದಯ್ಯ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣ, ನೀಲಾಂಬಿಕೆ ಸೇರಿದಂತೆ ಅನೇಕ ಶರಣರು ಜನಿಸಿದ ಪುಣ್ಯಕ್ಷೇತ್ರಗಳಿವೆ. ಇವುಗಳು ನೂತನ ಮಂಡಳಿಗೆ ಸೇರ್ಪಡೆಯಾಗಬೇಕಾದರೆ ಅಲ್ಲಿ ಆಸ್ತಿ ಇರಬೇಕಾಗುತ್ತದೆ. ಹೋರಿಮಟ್ಟಿ ಗುಡ್ಡದ ಅಭಿವೃದ್ಧಿಯಾಗಬೇಕಾದರೆ ಮೊದಲು ಅಲ್ಲಿನ ಆಸ್ತಿ ಮಂಡಳಿಗೆ ಸೇರ್ಪಡೆಯಾಗಬೇಕು. ಶರಣ ಕ್ಷೇತ್ರಗಳು ಅಭಿವೃದ್ಧಿಯಾಗಬೇಕಾದರೆ ಅನೇಕ ಜನರ ಕೊಡುಗೆ, ಸಹಕಾರ ಬೇಕಾಗುತ್ತದೆ. ಬಸವ ಜನ್ಮಸ್ಥಳ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಗೆ ಮೊದಲ ಆಯುಕ್ತ ನಾನಾಗುತ್ತೇನೆ ಎಂದರು.