ಸಾರಾಂಶ
ಹಂಪಿಯ ಬಂಡೆಗಲ್ಲಿನ ಮಧ್ಯೆ ಅರಳಿದ ಬಂಡಾಯ ಕಾವ್ಯಗಳಿಗೆ ವಿರುಪಾಕ್ಷೇಶ್ವರ ದೇವಾಲಯದ ಕಂಬ ಕಂಬಗಳಲ್ಲಿರುವ ಶಿಲ್ಪಕಲೆಗಳು ಸಾಕ್ಷಿಯಾದವು. ಕವಿಗೋಷ್ಠಿಯಲ್ಲಿ ಆಶಯ ನುಡಿದ ರಮೇಶ್ ಗಬ್ಬೂರು ವಾಚಿಸಿದ ಕವಿತೆ ಕವಿಗೋಷ್ಠಿಗೆ ಕಳೆ ತಂದಿತು.
ಕವಿಗೋಷ್ಠಿಯಲ್ಲಿ ಚರ್ಚೆಯಾದ ಪಂಚಗ್ಯಾರಂಟಿ
ಹಂಪಿಯ ಬಂಡೆಗಲ್ಲಿನ ಮಧ್ಯೆ ಅರಳಿದ ಬಂಡಾಯ ಕಾವ್ಯಗಳಿಗೆ ವಿರುಪಾಕ್ಷೇಶ್ವರ ದೇವಾಲಯದ ಕಂಬ ಕಂಬಗಳಲ್ಲಿರುವ ಶಿಲ್ಪಕಲೆಗಳು ಸಾಕ್ಷಿಯಾದವು. ಕವಿಗೋಷ್ಠಿಯಲ್ಲಿ ಆಶಯ ನುಡಿದ ರಮೇಶ್ ಗಬ್ಬೂರು ವಾಚಿಸಿದ ಕವಿತೆ ಕವಿಗೋಷ್ಠಿಗೆ ಕಳೆ ತಂದಿತು.ನಾ ಸತ್ತಾಗ ನನ್ನನ್ನು ಸುಡಬೇಡಿ, ಜಾತಿ-ಧರ್ಮಗಳ ಅಪಮಾನದಲ್ಲಿ ನನ್ನನ್ನು ನಾನು ಬಹಳ ಸಲ ಸುಟ್ಟುಕೊಂಡಿದ್ದೇನೆ, ಸತ್ತಾಗ ನನಗೆ ಮಣ್ಣು ಕೊಡಬೇಡಿ, ಬದುಕಿದ್ದಾಗ ನನಗೆ ಮಣ್ಣು ಸಾಕಷ್ಟು ಕೊಟ್ಟಿದೆ, ಸತ್ತಾಗ ನನ್ನ ಹೂಳಬೇಡಿ, ಬದುಕಿದ್ದಾಗ ನಾನು ಅವಮಾನಗಳಲ್ಲಿ ಸಾಕಷ್ಟು ಸಲ ಹೂತು ಹೋಗಿದ್ದೇನೆ ಎನ್ನುವ ಮನಕಲಕುವ ಅವರ ಕವಿತೆ ಕಲ್ಲು ಬಂಡೆಗಳನ್ನು ಕರಗುವಂತೆ ಮಾಡಿತು.
ಕವಿಗೋಷ್ಠಿ ಉದ್ಘಾಟಿಸಿದ ಡಾ. ಅಲ್ಲಮಪ್ರಭು ಬೆಟ್ಟದೂರು, ದ್ರಾವಿಡರು ನಾವು ದ್ರಾವಿಡರು ಎನ್ನುವ ಕವಿತೆ ಹಂಪಿಯ ವಿರುಪಾಕ್ಷನ ಸನ್ನಿಧಿಯಲ್ಲಿ ಬಂಡಾಯದ ಬಾವುಟ ಹಾರಿಸುವಂತೆ ಮಾಡಿತು. ನಾವು ಈ ನೆಲದ ಅಸಲಿ ಜನ, ಹರಪ್ಪ, ಮೆಹಂಜೋದಾರ ಕಟ್ಟಿ ಮೆರೆದವರು, ನಿಮ್ಮತಂಟೆ ತಕರಾರು ಬೇಡವೆಂದು ದಕ್ಷಿಣಕ್ಕೆ ಬಂದವರು, ನಿಮ್ಮದು ದೇವಭಾಷೆ, ನಮ್ಮವು ಜನಭಾಷೆಗಳು, ಸಿಂಧೂ ಕೊಳ್ಳದಲ್ಲಿಿ ಹುಟ್ಟ ಕೃಷ್ಣಾ ಗೋದಾವರಿ, ಕಾವೇರಿ, ಪಾಲಾರ್ ದಾಟಿ ಬಂದು ಉಳಿದು ಬೆಳೆದವರು ನಾವು, ಸಿಂಧೂ ಜನರು ನಾವು ಹಿಂದೂಗಳಲ್ಲ, ರಕ್ತಪಿಪಾಸುಗಳಲ್ಲ ನಾವು ಶಾಂತಿಪ್ರಿಯರು, ಕೋವಿದರು ನಾವು ಕಲಾವಿದರು ಸೌಹಾರ್ದ, ಸಮನ್ವಯ ಭಾವದವರು ಎನ್ನುವ ಕವಿತೆಯ ಸಾಲುಗಳು ನೆರೆದಿದ್ದ ಕಾವ್ಯಾಸಕ್ತರ ಮೈನವಿರೇಳುವಂತೆ ಮಾಡಿತು. ಡಾ. ಬಸು ಬೇವಿನ ಗಿಡದ ಅವರು ಹೇಗೇ ಕೊಲ್ಲುವಿರಿ ನೀವು ಗಾಂಧಿಯನ್ನು ಎನ್ನುವ ಕವಿತೆ ಗಮನಸೆಳೆಯಿತು. ಕವಿಗೋಷ್ಠಿಯಲ್ಲಿ ಶಿ.ಕ. ಬಡಿಗೇರ್, ಸರ್ಕಾರದ ಪಂಚಗ್ಯಾರಂಟಿಯ ಜೊತೆಗೆ ಧೂಳುಮುಕ್ತ ಕೊಪ್ಪಳ ಎನ್ನುವ ಇನ್ನೊಂದು ಗ್ಯಾರಂಟಿ ಬೇಕಾಗಿದೆ ಎನ್ನುವ ಕವಿತೆ ಸರ್ಕಾರಕ್ಕೆ ಚಾಟಿ ಬೀಸಿದಂತಿತ್ತು. ಸೋಮು ಕುದರಿಹಾಳ ನಾಚಿಕೆಯಾಗಬೇಕು ನಿಮಗೂ ಮತ್ತು ನಮಗೆ ಎನ್ನುವ ಕವಿತೆ ವಾಸ್ತವದ ವೈಫಲ್ಯ ತೆರೆದಿಟ್ಟಿತ್ತು.ಶ್ರೀಧರ್, ಕೂಡ್ಲಿಗಿಯ ಹಿರಿಯ ಕವಿ ಎನ್.ಎಂ.ರವಿಕುಮಾರ್, ವಿವೇಕಾನಂದ ಎಸ್.ಪಾಟೀಲ್, ಛತ್ರಪ್ಪ ತಂಬೂರಿ, ಡಾ. ಯಲ್ಲಪ್ಪ, ನೂರ್ ಅಹ್ಮದ್ ನಾಗನೂರ್, ಭೀಮಣ್ಣ ಗಜಾಪುರ ಹಾಗೂ ಪ್ರಹ್ಲಾದ್ ರಾವ್, ದಮ್ಮೂರು ಮಲ್ಲಿಕಾರ್ಜುನ, ಗೂಳೆಪ್ಪ ಹೂಲಿಮನೆ ಸೇರಿದಂತೆ 50ಕ್ಕೂ ಹೆಚ್ಚು ಕವಿಗಳ ಕವಿತೆಗಳು ಹಂಪಿಯ ಬಂಡೆಗಳಲ್ಲಿ ಮಾರ್ಧನಿಸಿದವು.