ಸಿದ್ದು ಸರ್ಕಾರದ ವಿರುದ್ಧ 40 ಶಾಸಕರ ಬಂಡಾಯ

| Published : Jun 18 2024, 12:58 AM IST / Updated: Jun 18 2024, 12:13 PM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು.

 ಚಿತ್ರದುರ್ಗ :  ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೇ ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಅನುದಾನ ನೀಡದ ಕಾರಣ ಮುದ್ದೇಬಿಹಾಳ ಶಾಸಕ ಅಪ್ಪಾಜಿಗೌಡ ಯಾವ ಪುರುಷಾರ್ಥಕ್ಕಾಗಿ ಶಾಸಕರಾಗಿ ಮುಂದುವರಿಯಬೇಕೆಂದು ಅಸಮಧಾನ ಹೊರ ಹಾಕಿದ್ದಾರೆ. ಇಂತಹ 40 ಮಂದಿ ಕಾಂಗ್ರೆಸ್ ಶಾಸಕರು ಬಂಡಾಯ ಏಳಲಿದ್ದಾರೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದೆ. ಯಾವುದೇ ಒಂದು ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆಗೊಂಡ ಕಾಮಗಾರಿಗಳೇ ಇನ್ನೂ ಮುಂದುವರಿಯುತ್ತಿವೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಬಿಟ್ಟಿ ಭಾಗ್ಯ ಹಾಗೂ ವಿವೇಚನೆಯಿಲ್ಲದೆ ತೆಗೆದುಕೊಂಡ ತೀರ್ಮಾನಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಜನರು ಸರ್ಕಾರದ ವರ್ತನೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೇಕಾಬಿಟ್ಟಿ ಯೋಜನೆ ಕೊಟ್ಟು ಈಗ ಡೀಸೆಲ್, ಪೆಟ್ರೋಲ್ ದರ ಹೆಚ್ಚಿಸಿದ್ದಾರೆ. ಅದನ್ನು ಇಳಿಕೆ ಮಾಡಿ ಯಥಾಸ್ಥಿತಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಪೆಟ್ರೋಲ್, ಡೀಸೆಲ್ ದರ ಬೇರೆ ರಾಜ್ಯಗಳಿಗಿಂತ ಕಡಿಮೆ ಎನ್ನುವುದು ಭಂಡತನದ ಹೇಳಿಕೆ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಸ್ ಮಾಡುತ್ತಿದ್ದಾರೆ. ಮೂರು ತಿಂಗಳಿಂದ ಅನ್ನಭಾಗ್ಯ ಹಣ ಹಾಕಿಲ್ಲ. ಸುಳ್ಳು ಭರವಸೆ ನೀಡಿಕೊಂಡು ಅಡ್ಡಡಲಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು`ಬಿತ್ತನೆಗೆ ರೈತರಿಗೆ ಶೇಂಗಾ ಬೀಜ ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಬರ ಪರಿಹಾರದ ಹಣವನ್ನೂ ಸರಿಯಾಗಿ ಬಿಡುಗಡೆ ಮಾಡಿಲ್ಲ. ಎಲ್ಲದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಕಳೆದ 74 ವರ್ಷಗಳಲ್ಲಿ ಹೇಗೆ ಆಡಳಿತ ನಡೆದಿದೆ ಅದನ್ನು ಮುಂದುವರೆಸಿ, ಜನರ ದಾರಿ ತಪ್ಪಿಸಬೇಡಿ. ಮೊದಲು ಹಣ ಖರ್ಚು ಮಾಡಿ ಕೇಂದ್ರದಿಂದ ಮರುಪಾವತಿ ಪಡೆಯಿರಿ ಎಂದರು.

ಜೂ.19ಕ್ಕೆ ಇದ್ದ ಕೆಡಿಪಿ ತ್ರೈಮಾಸಿಕ ಸಭೆಯನ್ನು ಜೂ.24ಕ್ಕೆ ಮುಂದೂಡಲಾಗಿದೆ. 24 ರಿಂದ ಲೋಕಸಭೆ ಅಧಿವೇಶನ ಆರಂಭವಾಗಲಿದ್ದು ತಾವು ಪಾಲ್ಗೊಳ್ಳಲಿದ್ದೇವೆ. ಕೆಡಿಪಿ ಸಭೆಯಲ್ಲಿ ಭಾಗವಹಿಸಬಾರದು ಎಂಬ ಕಾರಣಕ್ಕೆ ಕೆಡಿಪಿ ಸಭೆ ಮುಂದೂಡಿ ಬುದ್ದಿವಂತಿಕೆ ಪ್ರದರ್ಶನ ಮಾಡಿದ್ದಾರೆ. ನನ್ನನ್ನು ಹೊರತುಪಡಿಸಿ ಕೆಡಿಪಿ ಸಭೆ ಮಾಡುವುದಿದ್ದರೆ ಮಾಡಿ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ಲೋಕಸಭೆ ಅಧಿವೇಶನ ಮುಗಿದ ಬಳಿಕ ಕೆಡಿಪಿ ಸಭೆ ನಡೆಸಿದರೆ ಉತ್ತಮ ಎಂದರು.

ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಬಂದು ಹೋದ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿತು. ಸತ್ತು ಹೋದ ಪ್ರಕರಣದಲ್ಲಿ 80 ವರ್ಷ ದಾಟಿದ ಹಿರಿಯರನ್ನು ಅವಮಾನ ಮಾಡುವಂತೆ ನ್ಯಾಯಾಲಯಕ್ಕೆ ಕರೆತರುವುದು ಸೇಡಿನ ರಾಜಕಾರಣ ಎಂದು ಗೋವಿಂದಕಾರಜೋಳ ದೂರಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಎಸ್.ಆರ್.ಗಿರೀಶ್, ಚಿದಾನಂದ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ ಇದ್ದರು.

ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನಿಡದ ಉಸ್ತುವಾರಿ ಸಚಿವಚಿತ್ರದುರ್ಗದ ರೇಣುಕಸ್ವಾಮಿ ಕೊಲೆಯಾಗಿ ಹತ್ತು ದಿನಗಳು ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಸ್ಥಳೀಯ ಶಾಸಕರು ವಾರದ ನಂತರ ಕಾಟಾಚಾರದ ಭೇಟಿ ನೀಡಿದ್ದಾರೆ. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. `ಬೆಂಗಳೂರಿನಲ್ಲಿ ಹೊಸಬರ ಚಲನವಲನ ಗಮನಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಶೆಡ್‍ನಲ್ಲಿಟ್ಟು ಕೊಲೆ ಮಾಡಿದರೂ ಸಹ ತಿಳಿದಿಲ್ಲವೆಂದರು.