ಮಡಿಕೇರಿ ತಹಸೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

| Published : Jul 13 2024, 01:36 AM IST

ಮಡಿಕೇರಿ ತಹಸೀಲ್ದಾರ್‌ ಕಚೇರಿಯಲ್ಲಿ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಸ್ಪಂದಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಹೇಳಿದ್ದಾರೆ. ಮಡಿಕೇರಿ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದಲ್ಲಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಸ್ಪಂದಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಪವನ್ ಕುಮಾರ್ ಹೇಳಿದ್ದಾರೆ.

ಮಡಿಕೇರಿ ತಹಸೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕುಂದುಕೊರತೆ ಆಲಿಸಿ ಅವರು ಮಾತನಾಡಿದರು.

ಒಳ್ಳೆಯ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸಹಕರಿಸಬೇಕು ಎಂದರು. ಕಚೇರಿಯಲ್ಲಿ ಹಾಜರಾತಿ ಬಯೋಮೆಟ್ರಿಕ್ ಅಳವಡಿಸಬೇಕು. ಚಲನವಲನ ವಹಿಯನ್ನು ದಾಖಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಪವನ್‌ಕುಮಾರ್ ಹೇಳಿದರು.

ಸಾರ್ವಜನಿಕರೊಬ್ಬರು ಅಹವಾಲು ಸಲ್ಲಿಸಿ, ಪೊನ್ನಂಪೇಟೆಯಲ್ಲಿ ಐದೂವರೆ ಸೆಂಟ್ ಜಾಗವಿದ್ದು, ಪೌತಿಖಾತೆ ಮಾಡಲು 50 ಸಾವಿರ ರು. ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಕಣ್ಣೀರು ಸುರಿಸಿದರು.

ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು, ವಯಸ್ಸಾಗಿದೆ. ಪೊನ್ನಂಪೇಟೆಗೆ ಹೋಗಿ ಬರಲು ತುಂಬಾ ತೊಂದರೆಯಾಗಿದೆ. ಮಗಳ ಮದುವೆ ಮಾಡಬೇಕಿದ್ದು, ತುಂಬಾ ತೊಂದರೆಯಾಗಿದೆ. ಎರಡು ವರ್ಷದಿಂದ ಪೌತಿಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್‌ಪಿ ನಿಮ್ಮ ಕೆಲಸ ಕಾಲ ಮಿತಿಯಲ್ಲಿ ಆದ್ಯತೆ ಮೇಲೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮಹಿಳೆಯೊಬ್ಬರು ಮಾತನಾಡಿ, ಜಾಗದ ಖಾತೆ ಮಾಡಿಕೊಡದೆ ಒಂದುವರೆ ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಜಾಗದ ಖಾತೆ ಮಾಡಿಸಿಕೊಡುವಂತೆ ಲೋಕಾಯುಕ್ತರಲ್ಲಿ ಮನವಿ ಮಾಡಿದರು.

ಈ ಬಗ್ಗೆ ಪೌರಾಯುಕ್ತ ವಿಜಯ್ ಪ್ರತಿಕ್ರಿಯಿಸಿ, ಹೊಸದಾಗಿ ಖಾತೆ ಆಗಬೇಕಿದೆ. ಶೀಘ್ರ ಖಾತೆ ಮಾಡಿಕೊಡಲಾಗುವುದು ಎಂದರು.

ಸೋಮವಾರಪೇಟೆ ತಾಲೂಕಿನ ಬಿಳಿಗೇರಿ ಗ್ರಾಮದ ವಸಂತ ಪಿ.ಕೆ. ಅವರು ಜಾಗ ದುರಸ್ತಿ ಮಾಡಿಕೊಡುವಂತೆ ಹಲವು ವರ್ಷಗಳಿಂದ ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಮನವಿ ಮಾಡಿದದ್ದರೂ ಕೆಲಸಗಳು ಆಗಿಲ್ಲ. ಈ ಸಂಬಂಧ ಕೆಲಸ ಮಾಡಿಸಿಕೊಡುವಂತೆ ಲೋಕಾಯುಕ್ತ ಡಿವೈಎಸ್‌ಪಿ ಅವರಲ್ಲಿ ಮನವಿ ಮಾಡಿದರು. ಈ ಬಗ್ಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಡಿವೈಎಸ್‌ಪಿ ಹೇಳಿದರು.

ಮತ್ತೊಬ್ಬ ಮನವಿದಾರರು ಜಾಗದ ಖಾತೆ ಬದಲಾವಣೆ ಮಾಡಿಕೊಡಬೇಕಿದ್ದು, ಈ ಸಂಬಂಧ ಎಷ್ಟೇ ಮನವಿ ಮಾಡಿದರೂ ಸಹ ಇನ್ನೂ ಕೆಲಸವಾಗಿಲ್ಲ ಎಂದು ದೂರಿದರು. ತಮ್ಮ ಕೆಲಸವನ್ನು ಕಾಲಮಿತಿಯಲ್ಲಿ ಮಾಡಿಸಿಕೊಡಲಾಗುವುದು ಎಂದರು.

ಪವನ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ದೂರುಗಳು ಬರುವುದು ಕಡಿಮೆಯಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಬದಲಾವಣೆಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಅಭಿಪ್ರಾಯಪಟ್ಟರು.