ಸಾರ್ವಜನಿಕರ ಸಮಸ್ಯೆ ಅರ್ಜಿಯನ್ನು ತಕ್ಷಣ ಪರಿಹರಿಸಲಾಗುವುದು. ಹಾಗೇನಾದರೂ ತಕ್ಷಣ ಆಗದಿದ್ದರೆ ಹದಿನೈದು ದಿನದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಹೇಳಿದರು.
ಕುಕನೂರು: ಸಾರ್ವಜನಿಕರ ಸಮಸ್ಯೆ ಅರ್ಜಿಯನ್ನು ತಕ್ಷಣ ಪರಿಹರಿಸಲಾಗುವುದು. ಹಾಗೇನಾದರೂ ತಕ್ಷಣ ಆಗದಿದ್ದರೆ ಹದಿನೈದು ದಿನದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಹೇಳಿದರು.
ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜಿನಲ್ಲಿ ಜರುಗಿದ ಪ್ರಜಾಸೇವ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ತಕ್ಷಣ ಪರಿಹಾರ ಕಲ್ಪಿಸಲಾಗುವುದು. ಯೋಜನೆಗಳು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಬೇಕು. ಅವುಗಳಿಂದ ಯಾರೂ ವಂಚಿತರಾಗಬಾರದು ಎಂಬುದು ಆಂದೋಲನದ ಉದ್ದೇಶ ಎಂದರು.ತಾಪಂ ಇಒ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಸರ್ಕಾರದ ಯೋಜನೆಗಳು ತಲುಪದಿದ್ದರೆ ಸರ್ಕಾರಿ ಕಚೇರಿಗಳಿಗೆ ಜನ ಅಲೆದಾಡಬಾರದು ಎಂದು ಅಧಿಕಾರಿಗಳು ಒಂದೆಡೆ ಸೇರಿ ಜನರ ಕುಂದು-ಕೊರತೆ ನಿಭಾಯಿಸುವ ಕಾರ್ಯ ಆಗುತ್ತಿದೆ ಎಂದರು.ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಮಿಟಿ ವಿಭಾಗದ ಮಟ್ಟದ ಸದಸ್ಯ ಯಮನೂರಪ್ಪ ಗೊರ್ಲೆಕೊಪ್ಪ ಮಾತನಾಡಿ, ಈ ಕಾರ್ಯಕ್ರಮ ಮಾಡುವ ಬದಲು ಮುಖ್ಯಮಂತ್ರಿಗಳು ಕಟ್ಟುನಿಟ್ಟಾಗಿ ಕಚೇರಿಗೆ ಅಧಿಕಾರಿಗಳು ಬರುವಂತಹ ಸಾರ್ವಜನಿಕರಿಗೆ ಕೆಲಸ ಮಾಡುವಂತೆ ಆದೇಶ ಮಾಡಿದ್ದರೆ ಅನುಕೂಲವಾಗುತ್ತಿತ್ತು. ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಕೆಲಸ ಮಾಡದೆ ಇರುವುದರಿಂದ ಇಂತಹ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಕ್ಕೆ ಇಷ್ಟೊಂದು ಖರ್ಚು ಮಾಡಿ ಕಾರ್ಯಕ್ರಮ ಮಾಡಬೇಕಾಗಿದೆ ಎಂದರು.
ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ, ಪಪಂ ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಪಪಂ ಮುಖ್ಯಾಧಿಕಾರಿ ನಾಗೇಶ, ಸಮಾಜ ಕಲ್ಯಾಣ ಇಲಾಖೆಯ ಶಶಿಧರ ಸಕ್ರಿ, ತೋಟಗಾರಿಕೆಯ ಇಲಾಖೆಯ ಮಂಜುನಾಥ, ಆಹಾರ ಇಲಾಖೆಯ ನಿರೀಕ್ಷಕ ಮಂಜುನಾಥ ಮ್ಯಾಗಳಮನಿ, ಭೂ ದಾಖಲೆಗಳ ಅಧಿಕಾರಿ ಪರೀವೆಜ್ ಹಮ್ಮದ್, ಫೀರಸಾಬ್ ದಫೇದಾರ್ ಇತರರಿದ್ದರು.ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ಇರಲಿ: ತಾಲೂಕಿನ ಮಂಗಳೂರು ಗ್ರಾಮದ ಶಂಷುದ್ದೀನ್ ಎಂಬವರು ಅಧಿಕಾರಿಗಳು ತಮ್ಮ ಕಾರ್ಯಸ್ಥಳದಲ್ಲಿಯೇ ಇದ್ದು ಕೆಲಸ ಮಾಡಬೇಕು. ಗ್ರಾಪಂ ಪಿಡಿಒ, ವೈದ್ಯರು, ಗ್ರಾಮ ಲೆಕ್ಕಾಧಿಕಾರಿಗಳು ಕಾರ್ಯದ ಸ್ಥಳದಲ್ಲಿಯೇ ಮನೆ ಮಾಡಿಕೊಂಡು ಇದ್ದು ಜನರಿಗೆ ಬೇಗ ಸಿಕ್ಕು ಕೆಲಸ ಮಾಡಿಕೊಡಲಿ ಎಂದರು. ಬನ್ನಿಕೊಪ್ಪ ಗ್ರಾಮದ ದಾಕ್ಷಾಯಿಣಿ ಎಂಬ ವಿಶೇಷಚೇತನ, ತಮಗೆ 9 ತಿಂಗಳಿಂದ ಮಾಸಾಶನ ಬಂದಿಲ್ಲ ಎಂದು ಬಂದು ಮನವಿ ಸಲ್ಲಿಸಿದರು.