ಭಗವದ್ಗೀತೆಯ ಪಠಣದಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ

| Published : May 06 2024, 12:33 AM IST

ಭಗವದ್ಗೀತೆಯ ಪಠಣದಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಭಗವದ್ಗೀತೆಯ ಪಠಣದಿಂದ ಕೋಪ, ಚಿಂತೆ, ಭಯ, ಉದ್ವೇಗ ದೂರವಾಗುತ್ತದೆ. ಅಲ್ಲದೆ ಮನೆ ಮತ್ತು ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಕೊನೇಹಳ್ಳಿ ಆಯುಷ್‌ ವೈದ್ಯಾಧಿಕಾರಿ ಸುಮನಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಭಗವದ್ಗೀತೆಯ ಪಠಣದಿಂದ ಕೋಪ, ಚಿಂತೆ, ಭಯ, ಉದ್ವೇಗ ದೂರವಾಗುತ್ತದೆ. ಅಲ್ಲದೆ ಮನೆ ಮತ್ತು ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಕೊನೇಹಳ್ಳಿ ಆಯುಷ್‌ ವೈದ್ಯಾಧಿಕಾರಿ ಸುಮನಾ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ತಡಸೂರು ಗ್ರಾಮದ ಪ್ರಗತಿಪರ ಕೃಷಿಕ ಯೋಗನಂದರವರ ತೋಟದಲ್ಲಿ ಆಯೋಜನೆ ಮಾಡಿದ್ದ ಭಗವದ್ಗೀತೆಯ ಸತ್ಸಂಗದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳಿಗೆ ನಮ್ಮ ಹಿಂದು ಧರ್ಮ ಗ್ರಂಥವಾದ ಭಗವದ್ಗೀತೆಯ ಶ್ಲೋಕ ಪಠಣ, ಭಾವಾರ್ಥ, ಗೂಢಾರ್ಥಗಳನ್ನು ತಿಳಿದುಕೊಳ್ಳಬೇಕು. ಭಗವದ್ಗೀತೆಯ ಶ್ಲೋಕಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನಸಿಕ ಆರೋಗ್ಯ ಉತ್ತಮವಾಗಲಿದೆ ಎಂದರು. ಸ್ಪಂದನ ಸಂಸ್ಥೆಯ ಅಧ್ಯಕ್ಷೆ ವೀಣಾನಾಗೇಶ್ ಮಾತನಾಡಿ, ಬೆಳೆಯುವ ಮಕ್ಕಳಲ್ಲಿ ಆತ್ಮಸ್ಥೈರ್ಯ, ಧೈರ್ಯ, ಉತ್ತಮ ಮನಸ್ಸು, ಶ್ರದ್ಧೆ, ಭಕ್ತಿ ಸಂಸ್ಕಾರ ಮೂಡಿಸಿಬೇಕು. ದೇಶಕ್ಕೆ ಉತ್ತಮ ಪ್ರಜೆಯಾಗಲು ಭಗವದ್ಗೀತೆಯ ಶ್ಲೋಕಗಳು ಅತಿ ಅವಶ್ಯಕತೆ ಎಂದು ತಿಳಿಸಿದರು. ವೈದ್ಯೆ ಶಾಂತಲಾ ಮಾತನಾಡಿ, ಸಾಮಾಜಿಕವಾಗಿ, ನೈತಿಕವಾಗಿ ದಿನನಿತ್ಯ ದುಡಿಯುವ ಮಹಿಳೆಯರ ದೈಹಿಕ, ಮಾನಸಿಕ ಆರೋಗ್ಯವು ನಾನಾ ಕಾರಣಗಳಿಂದ ಏರುಪೇರುಗಳಿಂದ ಕೂಡಿರುತ್ತದೆ. ಮನಸ್ಸು ಹಾಗೂ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಭಗವದ್ಗೀತೆಯ ಪಠಣ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಆಯೋಜಕಿ ಭಾರತಿ ಮಾತನಾಡಿ, ಎಲ್ಲರಿಗೂ ಅನುಕೂಲವಾಗಲೆಂದು ನಾವು ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆಯ ಪಠಣ ಮತ್ತು ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇವೆ. ಅಂತಿಮವಾಗಿ ಗುರುವಂದನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಹಕಾರಿಯಾಗಿದೆ. ಇದರಿಂದ ಒಗ್ಗಟ್ಟು ಹಾಗೂ ಪರಸ್ವರ ವಿಶ್ವಾಸ ಬೆಳೆಯುತ್ತಾ ಸಧೃಡ ದೇಶ ನಿರ್ಮಾಣಕ್ಕೆ ನಾವುಗಳು ಸಹಕಾರಿಯಾಗಬಹುದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುರೇಶ ಆಚಾರ್ಯ, ಯೋಗನಂದ್, ರೇಣುಕಮ್ಮ, ರಶ್ಮಿ, ವಸಂತ್, ಸುಜಾತ, ಪೂಜಾ, ಜಯಮ್ಮ ಭಾಗವಹಿಸಿದ್ದರು. ಎಲ್ಲರಿಗೂ ಭಗವದ್ಗೀತೆಯ ಪುಸ್ತಕಗಳನ್ನು ನೀಡಲಾಯಿತು.