ಸಾರಾಂಶ
ಕನ್ನಡ ಭಾಷೆ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಷಯಗಳು ವಿಚಾರ ಬಂದರೆ ಯಾವ ಹಿಂಜರಿಕೆ ಮಾಡದೆ ಒಗ್ಗಟ್ಟಿನ ಮಂತ್ರ ಜಪಿಸಬೇಕು.
ಕನ್ನಡಪ್ರಭ ವಾರ್ತೆ ಮೂಡಲಗಿ
ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು. ಮಾತೃಭಾಷೆ ಪ್ರೀತಿಸುವುದರ ಜೊತೆಗೆ ಅನ್ಯಭಾಷೆಯ ಬಗ್ಗೆ ಗೌರವ ಬೆಳೆಸಿಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಶುಕ್ರವಾರ ಇಲ್ಲಿನ ಕನ್ನಡ ರಾಜ್ಯೋತ್ಸವ ಸಮಿತಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ನಂತರ ಕಲ್ಮೇಶ್ವರ ವೃತ್ತದಲ್ಲಿ ಕನ್ನಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಬೆಳೆಸಲು ಒತ್ತು ನೀಡಿದರೆ ಖಂಡಿತವಾಗಿಯೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಕನ್ನಡ ಭಾಷೆ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಿದೆ. ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ವಿಷಯಗಳು ವಿಚಾರ ಬಂದರೆ ಯಾವ ಹಿಂಜರಿಕೆ ಮಾಡದೆ ಒಗ್ಗಟ್ಟಿನ ಮಂತ್ರ ಜಪಿಸಬೇಕು. ಯಾರ ಮುಲಾಜೂ ಬೇಡ. ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಕರ್ನಾಟಕಕ್ಕೆ ಅನ್ಯಾಯವಾದಾಗ ಪ್ರತಿಯೊಬ್ಬರೂ ಪಕ್ಷ, ಜಾತಿ ಬೇಧ ಮರೆತು ಕೈ ಜೋಡಿಸುವಂತೆ ಕರೆ ನೀಡಿದರು.
ಮೂಡಲಗಿ ಪಟ್ಟಣದಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತ ಬರುತ್ತಿದ್ದೇವೆ. ಮುಂದೆಯೂ ಸಹ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.ಶಾಸಕರು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ಕಲ್ಮೇಶ್ವರ ವೃತ್ತದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಾಡು ನುಡಿ ಬಿಂಬಿಸುವ ವೇಷಭೂಷಣಗಳು ಗಮನ ಸೆಳೆದವು. ವಿವಿಧ ವಾದ್ಯಮೇಳಗಳು. ಕನ್ನಡ ಹಾಡುಗಳಿಗೆ ನರ್ತನ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಮೆರವಣಿಗೆ ನೆರೆದ ಕನ್ನಡಾಭಿಮಾನಿಗಳನ್ನು ಆಕರ್ಷಿಸಿತು.
ಮರೆಪ್ಪ ಮರೆಪ್ಪಗೋಳ, ಅನ್ವರ್ ನದಾಫ್, ಡಾ.ಎಸ್.ಎಸ್. ಪಾಟೀಲ, ರವಿ ಸೋನವಾಲಕರ, ರವಿ ಸಣ್ಣಕ್ಕಿ, ಸಂತೋಷ ಸೋನವಾಲಕರ, ರಾಮಣ್ಣ ಹಂದಿಗುಂದ, ಹಣಮಂತ ಗುಡ್ಲಮನಿ, ಸಂತೋಷ ಪಾರ್ಶಿ, ಭೀಮಶಿ ತಳವಾರ, ಈರಪ್ಪ ಢವಳೇಶ್ವರ, ಸುಭಾಸ ಗೋಡ್ಯಾಗೋಳ, ಅನಿಲ ಗಸ್ತಿ, ಚೇತನ ಹೊಸಕೋಟಿ, ಸಚಿನ ಲಂಕೆಪ್ಪನವರ, ಪ್ರಜ್ವಲ ಪುಠಾಣಿ, ಸಂಜು ಯಕ್ಸಂಬಿ ಪುರಸಭೆ ಸದಸ್ಯರು, ಅಧಿಕಾರಿಗಳು, ಕನ್ನಡಪರ ಸಂಘಟನೆಗಳು, ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.