ರಾಮನಗರ: ಕೀರ್ತನೆಗಳು, ದೇವರನಾಮಗಳಿಗೆ ಮಾನಸಿಕ ಕ್ಲೇಶ ನಿವಾರಿಸುವ ಶಕ್ತಿ ಇದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು
ರಾಮನಗರ: ಕೀರ್ತನೆಗಳು, ದೇವರನಾಮಗಳಿಗೆ ಮಾನಸಿಕ ಕ್ಲೇಶ ನಿವಾರಿಸುವ ಶಕ್ತಿ ಇದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಕನ್ನಿಕಾಮಹಲ್ನಲ್ಲಿ ವಾಸವಿ ಭಜನಾ ಮಂಡಳಿ ಆಯೋಜಿಸಿದ್ದ ಶತಕಂಠ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನಸಿಕ ಒತ್ತಡ, ನೋವುಗಳಿಗೆ ದೇವರ ನಾಮಸ್ಮರಣೆ, ಸಂಕೀರ್ತನೆಗಳನ್ನು ಪಠಿಸುವುದು, ಆಲಿಸುವುದು ಪರಿಹಾರದ ರೂಪಗಳು ಎಂದರು.ಶತಕಂಠ ಗಾಯನದಲ್ಲಿ ಭಾಗಿಯಾಗಿದ್ದು ತಮಗೆ ಯಾವುದೋ ಪುಣ್ಯಕ್ಷೇತ್ರದಲ್ಲಿರುವ ಭಾವನೆ ಮೂಡಿದೆ. ರಾಮನಗರದ ವಾಸವಿ ಭಜನಾ ಮಂಡಳಿ ನೇತೃತ್ವದಲ್ಲಿ ಜಿಲ್ಲೆಯ ಚನ್ನಪಟ್ಟಣ, ಮಾಗಡಿ, ಕನಕಪುರ, ಮಾಗಡಿ ತಾಲೂಕಿನ ಕುದೂರು ಹೋಬಳಿಯಿಂದ ಆರ್ಯವೈಶ್ಯ ಮಹಿಳಾ ತಂಡಗಳು ಅತ್ಯಂತ ಭಕ್ತಿ ಪೂರ್ವಕವಾಗಿ, ಸುಶ್ರಾವ್ಯವಾಗಿ ಏಕ ಸ್ವರದಲ್ಲಿ ದೇವರ ನಾಮಗಳು, ಸಂಕೀರ್ತನೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಸಮಾಜದ ಒಳಿತಿಗಾಗಿ ನಡೆಯಬೇಕು. ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವೂ ಇರಲಿದೆ ಎಂದು ತಿಳಿಸಿದರು.
ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಆಗಮಿಸಿದ್ದ ನೂರು ಮಂದಿ ಮಹಿಳೆಯರು ಎರಡು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಭಕ್ತಿ ಸುಧೆಯನ್ನು ಹರಿಸಿದರು. ಸಾರ್ವಜನಿಕರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೊಂದು ಭಕ್ತಿ ಸಂಗೀತ ಮತ್ತು ಸಾಂಸ್ಕೃತಿಕ, ಆಧ್ಯಾತ್ಮಕ ಪರಂಪರೆಯ ಸಮಾಗಮವಾಗಿತ್ತು. ನೂರು ಮಹಿಳೆಯರು ಒಂದೇ ಸ್ವರದಲ್ಲಿ ದೇವರನಾಮಗಳನ್ನು, ಕೀರ್ತನೆಗಳನ್ನು ಪ್ರಸ್ತುತ ಪಡಿಸಿದ್ದು ಅಪೂರ್ವ ಕಾರ್ಯಕ್ರಮ ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದರು.ಧಾರ್ಮಿಕ ಸಂಘಟಕಿ ರಶ್ಮಿ ಆದಿಶ್ ಮತ್ತು ಆರ್ಯ ವೈಶ್ಯ ಮಾಸಿಕ ಪತ್ರಿಕೆಯ ಸಂಪಾದಕಿ ಮೇಘ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕಿ ಶಶಿಕಲಾ ರಾಮಣ್ಣ, ಶಾಸ್ತ್ರೀಯ ಸಂಗೀತ ಕಲಾವಿದ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಶತಕಂಠ ಗಾಯನ ಪ್ರಸ್ತುತವಾಯಿತು.29ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಶ್ರೀ ಕನ್ನಿಕಾ ಮಹಲ್‌ನಲ್ಲಿ ವಾಸವಿ ಭಜನಾ ಮಂಡಳಿ ಆಯೋಜಿಸಿದ್ದ ಶತಕಂಠ ಗಾಯನ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಅಭಿನಂದಿಸಿದರು. ಜಿಲ್ಲೆಯ ಚನ್ನಪಟ್ಟಣ, ಮಾಗಡಿ, ಕನಕಪುರ, ಮಾಗಡಿ ತಾಲೂಕಿನ ಕುದೂರು ಸೇರಿದಂತೆ ವಿವಿಧ ಆರ್ಯವೈಶ್ಯ ಮಹಿಳಾ ತಂಡಗಳು ಸದಸ್ಯರು ಭಾಗವಹಿಸಿದ್ದರು.