ಸಾರಾಂಶ
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ। ಸರಕಾರಿ ಅಧಿಕಾರಿ, ಸಿಬ್ಬಂದಿ ಕುಮ್ಮಕ್ಕಿಲ್ಲದೆ ನಕಲಿ ದಾಖಲೆ ಸಾಧ್ಯವಿಲ್ಲ
ಕನ್ನಡಪ್ರಭ ವಾರ್ತೆ, ತರೀಕೆರೆಯಾವುದೇ ಜಮೀನುಗಳ ದುರಸ್ತ್ ಕಾರ್ಯ ನಡೆಯಲು ಕಾನೂನು ಪ್ರಕಾರ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ತುರ್ತಾಗಿ ದುರಸ್ತ್ ಮಾಡಿಸುವ ಉದ್ದೇಶದಿಂದ ಅಡ್ಡ ಮಾರ್ಗದ ಮೂಲಕ ಹೊರಟಿರುವ ಕೆಲವರು ನಕಲಿ ದಾಖಲಾತಿ ಗಳನ್ನು ಸೃಷ್ಟಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ತಿಳಿಸಿದರು.ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕುಮ್ಮಕ್ಕಿಲ್ಲದೆ ನಕಲಿ ದಾಖಲಾತಿ ಸೃಷ್ಟಿಸಲು ಸಾಧ್ಯವಿಲ್ಲ, ನಕಲಿ ದಾಖಲೆ ಸೃಷ್ಟಿ ವಿಚಾರದಲ್ಲಿ ಸರ್ವೇ ಇಲಾಖೆ ಪಾತ್ರ ಮುಖ್ಯವಾಗಿ ಕಾಣುತ್ತಿದೆ. ದುಗ್ಲಾಪುರ ಗ್ರಾಮದ ವಿ.ಕುಮಾರ್ ಬಿನ್ ವೆಂಕಟೇಗೌಡ ಎಂಬುವವರಿಗೆ ಸ.ನಂ.೧೬೪/ಪಿ೯೫ ರಲ್ಲಿ ಮಂಜೂರಾದ ೨-೩೦ ಎಕರೆ ಜಮೀನು ಮತ್ತು ಲಕ್ಕವಳ್ಳಿ ಹೋಬಳಿ ದೊಡ್ಡ ಕುಂದೂರು ಗ್ರಾಮದ ಲಕ್ಷ್ಮಣ ಬಿನ್ ಏಲಕ್ಕಿಗೌಡ ಎಂಬುವರಿಗೆ ಸೇರಿದ ಸ.ನಂ.೩ ರಲ್ಲಿ ೪-೩೮ ಎಕರೆ ಜಮೀನಿಗೆ ಸಂಬಂಧಪಟ್ಟಂತೆ ನಕಲಿ ದಾಖಲಾತಿ ಸೃಷ್ಟಿಸಿರುವುದು ಕಂಡುಬಂದಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೊರಗಿನವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ತಹಸೀಲ್ದಾರ್‌ಗೆ ಆದೇಶ ನೀಡಲಾಗಿದೆ. ಎಡಿಎಲ್‌ಆರ್ ನೀಡಿರುವ ದೂರಿನ ಮೇರೆಗೆ ಅರ್ಜಿದಾರ ವಿ.ಕುಮಾರ್, ನವೀನ್, ಮೂರ್ತಿ ಎಂಬುವರ ಮೇಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ತಿಳಿಸಿದರು.
ದುಗ್ಲಾಪುರ ಗ್ರಾಮದ ವಿ.ಕುಮಾರ್ ಜಮೀನಿನ ದುರಸ್ತ್ ಮಾಡಿಕೊಡುವಂತೆ ಎಸಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ, ಅರ್ಜಿ ಜೊತೆ ಜಮೀನಿನ ಸಾಗುವಳಿ ಪತ್ರ, ಇಸಿ, ಆಕಾರ್ ಬಂದ್, ಟಿಪ್ಪಣಿ, ತಹಸೀಲ್ದಾರ್ ನೀಡಿದ್ದ ಎನ್‌ಒಸಿ ಜೊತೆಗೆ ಎಡಿಎಲ್‌ಆರ್ ರವರ ಅಧಿಕೃತ ಸೀಲು, ಸಹಿ ಇರುವ ದಾಖಲಾತಿ ನೀಡಿರುತ್ತಾರೆ. ಈ ಜಮೀನಿನ ಕ್ರಯ ಮಾಡಿಕೊಡುವ ಉದ್ದೇಶದಿಂದ ದುರಸ್ತ್ ಕಾರ್ಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಮನಗಂಡ ಸಂಬಂಧಪಟ್ಟವರು ಅಡ್ಡ ಮಾರ್ಗದಿಂದ ಸರ್ವೇ ಇಲಾಖೆಯಲ್ಲಿನ ಕೆಲವರ ಸಹಕಾರದಿಂದ ಆಕಾರ್ ಬಂದ್, ಟಿಪ್ಪಣಿ ಮತ್ತಿತರೆ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿರುತ್ತಾರೆ ಎಂದು ತಿಳಿಸಿದರು.ಕಚೇರಿ ಉಪಯೋಗಕ್ಕೆಂದು ತಯಾರಿಸಿದ ಆಕಾರಬಂದು ದಾಖಲೆಗೆ ಸರ್ವೇ ಇಲಾಖೆ ಪರ್ಯಾವೇಕ್ಷಕರು, ನನ್ನ ಕೆಲಸದ ಒತ್ತಡದ ಸಮಯದಲ್ಲಿ ತಪ್ಪು ತಿಳುವಳಿಕೆ ನೀಡಿ ನನ್ನಿಂದ ಸಹಿ ಪಡೆದು ದುರುಯೋಗಪಡಿಸಿಕೊಂಡಿರುತ್ತಾರೆ, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದರು.
11ಕೆಟಿಆರ್.ಕೆ.15ಃತರೀಕೆರೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿದರು.